ಶಶಿಕಾಂತ ಮೆಂಡೆಗಾರ
ವಿಜಯಪುರ ಜಿಲ್ಲೆಗೆ ಘೋಷಣೆಯಾಗಿದ್ದ ಹಲವು ಯೋಜನೆಗಳು ಕೇವಲ ಕಡತಕ್ಕಷ್ಟೇ ಸೀಮಿತ ಎಂಬಂತಾಗಿವೆ. ಅವುಗಳಲ್ಲಿ ಕಳೆದ ಬಜೆಟ್‌ನಲ್ಲಿ ಹೊಸ ಯೋಜನೆಗಳು, ಹಳೆಯ ಯೋಜನೆಗಳ ಪೂರ್ಣಗೊಳಿಸುವಿಕೆ ಸೇರಿದಂತೆ ಜಿಲ್ಲೆಗೆ ಹತ್ತಾರು ಯೋಜನೆಗಳನ್ನು ಘೋಷಿಸಲಾಗಿತ್ತು. ಘೋಷಣೆಯಾದ ಬೆಟ್ಟದಷ್ಟು ಯೋಜನೆಗಳಲ್ಲಿ ಈಡೇರಿದ್ದು ಮಾತ್ರ ಬೆರಳೆಣಿಕೆಯಷ್ಟು. ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಅಭಿವೃದ್ಧಿಯ ಯೋಜನೆಗಳೇ ಕುಸಿತ ಕಂಡಿವೆ. ಘೋಷಣೆಯಾಗಿದ್ದ ಸಾಕಷ್ಟು ಯೋಜನೆಗಳಿಗೆ ಸಮರ್ಪಕ ಅನುದಾನ ಬಾರದ್ದರಿಂದ ಬಹುತೇಕ ಯೋಜನೆಗಳು ಕಡತದಲ್ಲೇ ಉಳಿದುಕೊಂಡಿವೆ.
2024ರ ಬೆಜೆಟ್‌ನಲ್ಲಿ ಘೋಷಣೆ, ಅವುಗಳ ಕಾರ್ಯರೂಪ:ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ ನೀಡಲು ಆಲಮೇಲದಲ್ಲಿ ತೋಟಗಾರಿಕಾ ಕಾಲೇಜು ಸ್ಥಾಪನೆ ಮಾಡಲಾಗಿದೆ. ಆದರೆ ಅದಕ್ಕೆ ಬೇಕಾದಷ್ಟು ಅನುದಾನ ಸಿಗದ ಹಿನ್ನೆಲೆ ಬಾಗಲಕೋಟೆ ತೋಟಗಾರಿಕಾ ವಿವಿಯಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಬುರಣಾಪುರದಲ್ಲಿ ₹350 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಪೂರ್ಣಗೊಳಿಸಲು ಹೆಚ್ಚುವರಿ ₹ 94 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಬಹುತೇಕ ಪೂರ್ಣಗೊಂಡರೂ ಲೋಹದ ಹಕ್ಕಿಗಳ ಹಾರಾಟ ಇನ್ನೂ ಶುರುವಾಗಿಲ್ಲ.- ತಾಲೂಕಿನ ಇಟ್ಟಂಗಿಹಾಳದಲ್ಲಿ ಫುಡ್ ಪ್ರೊಸೆಸಿಂಗ್ ಯುನಿಟ್ ಹಾಗೂ ಫುಡ್ ಪಾರ್ಕ್ ನಿರ್ಮಾಣದ ಘೋಷಣೆಯಾಗಿತ್ತು. ಆದರೆ ಅಲ್ಲಿ ಕಾಮಗಾರಿಗಳು ಆರಂಭವಾಗಿಲ್ಲ. ಮೀನುಗಾರಿಕೆ ಉತ್ತೇಜನಕ್ಕಾಗಿ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಮೀನುಗಾರಿಕೆ ಕೇಂದ್ರ ಸ್ಥಾಪನೆಗೆ ಉದ್ದೇಶಿಸಲಾಗಿತ್ತು. ಅದು ಸಹ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ರೈತರಿಗೆ ಅನುಕೂಲವಾಗಲೆಂದು ಬಸವನ ಬಾಗೇವಾಡಿಯಲ್ಲಿ ₹50 ಕೋಟಿ ವೆಚ್ಚದಲ್ಲಿ ಶೀತಲಗೃಹ ಸ್ಥಾಪನೆಗೆ ಉದ್ದೇಶಿಸಲಾಗಿದ್ದು, ಕೋಲ್ಡ್ ಸ್ಟೋರೇಜ್ ಸ್ಥಾಪನೆ ಕನಸು ಹಾಗೇ ಉಳಿದಿದೆ.
-ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗಳು, ಭೂಸ್ವಾಧೀನ ಪ್ರಕ್ರಿಯೆ, ಸಂತ್ರಸ್ಥರಿಗೆ ಪರಿಹಾರ, ಹೊರ್ತಿ-ರೇವಣಸಿದ್ಧೇಶ್ವರ, ಬೂದಿಹಾಳ-ಪೀರಾಪುರ ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆಗಳು ಪೂರ್ಣಗೊಳಿಸುವ ಭರವಸೆ ನೀಡಿತ್ತು. ಆದರೆ ಅನುದಾನದ ಕೊರತೆಯಿಂದ ಕಾಮಗಾರಿ ನಿಧಾನವಾಗಿ ಸಾಗುತ್ತಿವೆ. ಇದರಿಂದ ಸಂತ್ರಸ್ಥರು, ಬಾಧಿತರು ಇನ್ನೂ ಗೋಳಾಡುತ್ತಲೇ ಇದ್ದಾರೆ.
-ವಿಜಯಪುರದಲ್ಲಿ ಪುರಾತನ ನೀರು ಸರಬರಾಜು ವ್ಯವಸ್ಥೆಯನ್ನು ₹ 15ಕೋಟಿ ಅನುದಾನದಲ್ಲಿ ಪುನಶ್ಚೇತನಗೊಳಿಸಲು ಯೋಜನೆ ರೂಪಿಸಲಾಗಿತ್ತು. ಅದರ ಕಾಮಗಾರಿಗಳು ಚಾಲ್ತಿಯಲ್ಲಿವೆ.
ಕಾಂಗ್ರೆಸ್ ಸರ್ಕಾರದ ಬಜೆಟ್ ಘೋಷಣೆಗಳು ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ, ಕೇವಲ ಕಡತದಲ್ಲೇ ಉಳಿದಿವೆ. ಇವರದ್ದು ಹೆಸರಿಗೆ ಮಾತ್ರ ಬಜೆಟ್ ಮಂಡನೆ. ಈಗಾಗಲೇ ಬಜೆಟ್‌ನಲ್ಲಿ ಘೋಷಿಸಿರುವ ಹೊಸ ಯೋಜನೆಗಳ ಸ್ಥಿತಿಗತಿ ಕುರಿತು ಶ್ವೇತಪತ್ರ ಹೊರಡಿಸಬೇಕು. ಗ್ಯಾರಂಟಿಗೆ ಹೊಂದಿಸಲು ಹಣವಿಲ್ಲದೆ ಇಡಿ ರಾಜ್ಯದ ಜನರಿಗೆ ಸುಳ್ಳು ಆಶ್ವಾಸನೆಗಳನ್ನು ಕೊಡುತ್ತ, ವಂಚಿಸುತ್ತಿದ್ದಾರೆ. ಕಳೆದ ಬಾರಿ ಘೋಷಣೆಯಾಗಿರುವ ಜಿಲ್ಲೆಯ ಯೋಜನೆಗಳಲ್ಲಿ ಒಂದೂ ಇಡೇರಿಸಿಲ್ಲ. ಇನ್ನು ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರೂ ಇವರಿಂದ ಯಾವುದೇ ಕೊಡುಗೆ ಇಲ್ಲ..ಉಮೇಶ ಕಾರಜೊಳ, ಬಿಜೆಪಿ ಎಸ್ಸಿಮೋರ್ಚಾ ರಾಜ್ಯ ಉಪಾಧ್ಯಕ್ಷ.
ಸೈಯದ್ ಜಮೀರ ಅಹಮ್ಮದ ಬಕ್ಷಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ.