ಬಹಳ ದಿನಗಳಿಂದ ಇತ್ಯರ್ಥವಾಗದೆ ಉಳಿದಿರುವ ಪಹಣಿ ಸಮಸ್ಯೆ ಪರಿಹರಿಸಲು ಸರ್ಕಾರವೇ ರೈತರ ಮನೆ ಬಾಗಿಲಿಗೆ ಬರುತ್ತಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಬಹಳ ದಿನಗಳಿಂದ ಇತ್ಯರ್ಥವಾಗದೆ ಉಳಿದಿರುವ ಪಹಣಿ ಸಮಸ್ಯೆ ಪರಿಹರಿಸಲು ಸರ್ಕಾರವೇ ರೈತರ ಮನೆ ಬಾಗಿಲಿಗೆ ಬರುತ್ತಿದೆ ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು.
ತಾಲೂಕಿನ ಬೆಳವಿ ಗ್ರಾಮ ಪಂಚಾಯತಿಯಲ್ಲಿ ಭೂ ಮಾಪನಾ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಸಹಾಯಕ ನಿರ್ದೇಶಕರ ಕಚೇರಿ ಆಶ್ರಯದಲ್ಲಿ ಹಮ್ಮಿಕೊಂಡ ಪೋಡಿ ಮುಕ್ತ ಗ್ರಾಮ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಿಂದ ಪ್ರತಿ ರೈತರ ಹೆಸರಿನಲ್ಲಿ ದಾಖಲಾತಿ ದೊರೆಯುವ ವ್ಯವಸ್ಥೆಯಾಗಲಿದೆ. ಸರ್ವೇ ಇಲಾಖೆಯ ಅಧಿಕಾರಿಗಳು ಗ್ರಾಮದ ರೈತರ ಮನೆಗೆ ಭೇಟಿ ನೀಡಿ ಜಂಟಿ ಖಾತೆದಾರರನ್ನು ಬೇರ್ಪಡಿಸಿ ಹೊಲದ ಹದ್ದು ಬಸ್ತಿ, ಪೋಡಿ ನಕ್ಷೆ ಮಾಡಿ ಪ್ರತಿಯೊಬ್ಬ ರೈತರಿಗೂ ಸರ್ಕಾರದ ಸೌಲಭ್ಯಗಳು ಸಿಗುವ ವ್ಯವಸ್ಥೆ ಮಾಡಲಿದ್ದಾರೆ. ರೈತರು ತಮ್ಮ ತಮ್ಮಲ್ಲಿ ತಂಟೆ ತಕರಾರು ಮಾಡದೆ ಸಹಕಾರದೊಂದಿಗೆ ಪೋಡಿಮುಕ್ತ ಗ್ರಾಮಕ್ಕೆ ಕೈಜೋಡಿಸಬೇಕು ಎಂದವರು ಹೇಳಿದರು.
ತಾಲೂಕಾ ಭೂ ದಾಖಲಾತಿಯ ಸಹಾಯಕ ನಿರ್ದೇಶಕ ತನ್ವಿರ್ ಢಾಂಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಹೊಲದ ಉತಾರ ಹೆಸರಿನ ರೈತರು ಪೋಡಿಗಾಗಿ ಯಾರೂ ಅರ್ಜಿ ಸಲ್ಲಿಸಬೇಕಾಗಿಲ್ಲ. ಕೋರ್ಟನಲ್ಲಿ ತಕರಾರು ಇದ್ದವರನ್ನು ಹೊರತುಪಡಿಸಿ ಗ್ರಾಮದ ಎಲ್ಲ ರೈತರಿಗೆ ಪೋಡಿ ಮಾಡಿ ಉತಾರ ನೀಡಲಾಗುವುದು. ಸರ್ವೇ ಅಧಿಕಾರಿಗಳು ಮನೆ ಮನೆಗೆ ಭೆಟ್ಟಿಕೊಟ್ಟಾಗ ಮಾಹಿತಿ ನೀಡಿ ಸಹಕರಿಸಿ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.