ತಿಂಗಳೊಳಗೆ ತಾಲೂಕಿನ ವಕ್ಫ್ ಗೊಂದಲವನ್ನು ಬಗೆಹರಿಸಿ: ಶಾಸಕ ರಮೇಶ ಬಂಡಿಸಿದ್ದೇಗೌಡ

KannadaprabhaNewsNetwork |  
Published : Jan 18, 2025, 12:47 AM IST
೧೭ಕೆಎಂಎನ್‌ಡಿ-೬ಶ್ರೀರಂಗಪಟ್ಟಣ ತಾಲ್ಲೂಕು ಕಚೇರಿಯಲ್ಲಿ ನಡೆದ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಭೆಯಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿದರು. ತಹಶೀಲ್ದಾರ್ ಪರಶುರಾಮ ಸತ್ತಿಗೇರಿ, ಗ್ರೇಡ್-೨ ತಹಶೀಲ್ದಾರ್ ಚೈತ್ರ ಇತರರಿದ್ದರು. | Kannada Prabha

ಸಾರಾಂಶ

ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ರೈತರ ಸಮಸ್ಯೆಗೆ ಕಿವಿಗೊಡಬೇಕು. ರೈತರು ಅಲೆದಾಡದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರನ್ನು ಗೌರವದಿಂದ ನಡೆಸಿಕೊಳ್ಳಬೇಕು. ತಾಲೂಕಿನಾದ್ಯಂತ ಆಶ್ರಯ ಯೋಜನೆಯಡಿ ಒಂದು ಸಾವಿರ ನಿವೇಶನಗಳನ್ನು ಹಂಚಲು ತೀರ್ಮಾನಿಸಲಾಗಿದೆ. ಫೆ.೨೮ರ ಒಳಗೆ ನಿವೇಶನ ಹಂಚಿಕೆ ಮಾಡಲಾಗುತ್ತದೆ. ಯಾವ ಗ್ರಾಮಗಳಲ್ಲಿ ಸರ್ಕಾರಿ ಜಾಗ ಲಭ್ಯ ಇದೆಯೋ ಅದನ್ನು ಗುರುತಿಸಿ, ಹದ್ದುಬಸ್ತು ಗೊತ್ತುಪಡಿಸಬೇಕು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣ ಮತ್ತು ತಾಲೂಕಿನ ಕೆಲವೆಡೆ ಖಾಸಗಿ ಮತ್ತು ಸಾರ್ವಜನಿಕ ಆಸ್ತಿಗಳ ಪಹಣಿಗಳಲ್ಲಿ ಕಣ್ತಪ್ಪು ಅಥವಾ ಇತರ ಕಾರಣಗಳಿಂದ ವಕ್ಫ್ ಎಂದು ನಮೂದಾಗಿರುವ ಪ್ರಕರಣಗಳನ್ನು ಈ ತಿಂಗಳ ಅಂತ್ಯದೊಳಗೆ ಸರಿಪಡಿಸಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಶುಕ್ರವಾರ ನಡೆದ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ತುರ್ತು ಸಭೆಯಲ್ಲಿ ಮಾತನಾಡಿ, ಗೊಂದಲ ಇರುವ ಆಸ್ತಿಯ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಬೇಕು. ಆಸ್ತಿಯ ಫೋಟೊ, ವಿಡಿಯೋ ಮಾಡಿಕೊಂಡು ಅದು ಯಾರ ಅನುಭವದಲ್ಲಿ ಇದೆಯೋ ಅದರಂತೆ ಮೂಲ ದಾಖಲೆಗಳನ್ನು ತಾಳೆ ಮಾಡಿ ನೋಡಬೇಕು. ಪ್ರತಿ ಆಸ್ತಿಗೂ ಪ್ರತ್ಯೇಕ ಫೈಲ್ ಸಿದ್ಧಪಡಿಸಬೇಕು. ಬಳಿಕ ಅದನ್ನು ತಹಸೀಲ್ದಾರ್‌ಗೆ ಸಲ್ಲಿಸಬೇಕು. ಗ್ರೇಡ್-೨ ತಹಸೀಲ್ದಾರ್ ಇಷ್ಟೂ ಪ್ರಕ್ರಿಯೆಗಳ ಉಸ್ತುವಾರಿ ನೋಡಿಕೊಳ್ಳಬೇಕು ಎಂದು ಹೇಳಿದರು.

ತಾಲೂಕಿನ ಕಸಬಾ ಮತ್ತು ಬೆಳಗೊಳ ಹೋಬಳಿಯ ಕೆಲವೆಡೆ ವಕ್ಫ್ ಗೊಂದಲ ಉಂಟಾಗಿದ್ದು, ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ನೀಡುವ ದಾಖಲೆಗಳನ್ನು ಪರಿಶೀಲಿಸಿ, ಅದರ ಆಧಾರದ ಮೇಲೆ ತಹಸೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿ ಸಮಸ್ಯೆ ಬಗೆಹರಿಸಬೇಕು. ಈ ದಾಖಲೆಗಳನ್ನು ಸರ್ಕಾರಕ್ಕೂ ಕಳುಹಿಸಬೇಕಾಗಿದ್ದು, ನಿಖರ ಮಾಹಿತಿಗಳನ್ನು ಸಂಗ್ರಹಿಸಬೇಕು. ಸಿಬ್ಬಂದಿ ತಮಗೆ ವಹಿಸಿದ ಕಾರ್ಯ ಮಾಡದೆ ಸಬೂಬು ಹೇಳಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.

ರೈತರ ಸಮಸ್ಯೆಗೆ ಕಿವಿಗೊಡಿ:

ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ರೈತರ ಸಮಸ್ಯೆಗೆ ಕಿವಿಗೊಡಬೇಕು. ರೈತರು ಅಲೆದಾಡದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರನ್ನು ಗೌರವದಿಂದ ನಡೆಸಿಕೊಳ್ಳಬೇಕು. ತಾಲೂಕಿನಾದ್ಯಂತ ಆಶ್ರಯ ಯೋಜನೆಯಡಿ ಒಂದು ಸಾವಿರ ನಿವೇಶನಗಳನ್ನು ಹಂಚಲು ತೀರ್ಮಾನಿಸಲಾಗಿದೆ. ಫೆ.೨೮ರ ಒಳಗೆ ನಿವೇಶನ ಹಂಚಿಕೆ ಮಾಡಲಾಗುತ್ತದೆ. ಯಾವ ಗ್ರಾಮಗಳಲ್ಲಿ ಸರ್ಕಾರಿ ಜಾಗ ಲಭ್ಯ ಇದೆಯೋ ಅದನ್ನು ಗುರುತಿಸಿ, ಹದ್ದುಬಸ್ತು ಗೊತ್ತುಪಡಿಸಬೇಕು ಎಂದು ಹೇಳಿದರು.

ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಮಾತನಾಡಿದರು. ಗ್ರೇಡ್-೨ ತಹಸೀಲ್ದಾರ್ ಚೈತ್ರ, ಎಡಿಎಲ್‌ಆರ್ ಮೇಘನಾ, ಎಇಇ ರಾಮಕೃಷ್ಣೇಗೌಡ, ಉಪ ತಹಸೀಲ್ದಾರ್‌ಗಳಾದ ವರುಣ್, ದಿನೇಶಕುಮಾರ್, ಕಂದಾಯ ನಿರೀಕ್ಷಕರಾದ ರೇವಣ್ಣ, ಭಾಸ್ಕರ್, ಪುಟ್ಟಸ್ವಾಮಿ, ಮಂಜುನಾಥ್ ಸಭೆಯಲ್ಲಿದ್ದರು.

PREV

Recommended Stories

ಧರ್ಮಸ್ಥಳ ಪ್ರಕರಣ ಮುಚ್ಚಿ ಹಾಕುವ ಯತ್ನ
ತಾಲೂಕು ಆಡಳಿತದ ಬೇಜವಾಬ್ದಾರಿಯಿಂದ ನೀರು ಕಲುಷಿತ