ರೇಷ್ಮೆ ಬೆಳೆಗಾರರು, ರೀಲರ್ಸ್‌ಗಳ ಸಮಸ್ಯೆ ಪರಿಹರಿಸಿ

KannadaprabhaNewsNetwork | Published : Sep 10, 2024 1:36 AM

ಸಾರಾಂಶ

ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಅನೇಕ ಮೂಲ ಸೌಕರ್ಯಗಳ ಕೊರತೆ ಇದೆ. ವಿಶೇಷವಾಗಿ ಕುಡಿಯುವ ನೀರಿನ ಸಮಸ್ಯೆ ಇದ್ದು ಇಲ್ಲಿ ಶುದ್ದ ನೀರಿನ ಘಟಕ ಅಳವಡಿಸಬೇಕು, ಮಾರುಕಟ್ಟೆಯಲ್ಲಿ ಹೊರಗುತ್ತಿಗೆಯಡಿ ಕೆಲಸ ಮಾಡುವ ನೌಕರರಿಗೂ ಸಕಾಲದಲ್ಲಿ ವೇತನ ಪಾವತಿಸಬೇಕು

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೀಲರ್ಸ್‌ಗಳು ಹಾಗೂ ರೇಷ್ಮೆಗೂಡು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಕಲ್ಪಿಸಬೇಕೆಂದು ಶಾಸಕ ಮೇಲೂರು ರವಿಕುಮಾರ್ ಅಧಿಕಾರಿಗಳಿಗೆ ತಾಕೀತು ಮಾಡಿದರು. ನಗರದ ರೇಷ್ಮೆಗೂಡು ಮಾರುಕಟ್ಟೆಗೆ ಸೋಮವಾರ ದಿಢೀರ್ ಭೇಟಿ ನೀಡಿ ಸ್ಥಳೀಯ ರೇಷ್ಮೆ ಮಾರುಕಟ್ಟೆ ಅಧಿಕಾರಿಗಳ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಬಹುದಿನಗಳಿಂದ ಇರುವ ವೈಫೈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಬೇಕೆಂದರು. ಶುದ್ಧ ನೀರಿನ ಘಟಕ ಅಳವಡಿಸಿ

ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಅನೇಕ ಮೂಲ ಸೌಕರ್ಯಗಳ ಕೊರತೆ ಇದೆ. ವಿಶೇಷವಾಗಿ ಕುಡಿಯುವ ನೀರಿನ ಸಮಸ್ಯೆ ಇದ್ದು ಇಲ್ಲಿ ಶುದ್ದ ನೀರಿನ ಘಟಕ ಅಳವಡಿಸಬೇಕು, ಮಾರುಕಟ್ಟೆಯಲ್ಲಿ ಹೊರಗುತ್ತಿಗೆಯಡಿ ಕೆಲಸ ಮಾಡುವ ನೌಕರರಿಗೂ ಸಕಾಲದಲ್ಲಿ ವೇತನ ಪಾವತಿಸಬೇಕೆಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಎಚ್.ಡಿ.ಎಫ್.ಸಿ ಬ್ಯಾಂಕ್ ಶಾಖೆ ತೆರೆದು ವ್ಯಾಪಾರಿಗಳಿಗೆ ಹಾಗೂ ರೈತರಿಗೆ ತ್ವರಿತವಾಗಿ ಹಣ ವಿಲೇವಾರಿಗೆ ಕ್ರಮ ವಹಿಸಬೇಕೆಂದ ಅವರು, ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಸ್ವಚ್ಛತೆ, ನೈರ್ಮಲ್ಯ ಕಾಪಾಡಬೇಕೆಂದರು. ಮಾರುಕಟ್ಟೆಯಲ್ಲಿ ಏನೇ ಸಮಸ್ಯೆ ಇದ್ದರೂ ತಕ್ಷಣ ತಮ್ಮ ಗಮನಕ್ಕೆ ತಂದರೆ ಸಂಬಂಧಪಟ್ಟ ಅಧಿಕಾರಿಗಳ ಅಥವಾ ಸಚಿವರ ಗಮನಕ್ಕೆ ತಂದು ಬಗೆಹರಿಸುವುದಾಗಿ ಭರವಸೆ ನೀಡಿದರು.ಅಧಿಕಾರಿಗಳು ಕಾಳಜಿ ವಹಿಸಲಿ

ರೇಷ್ಮೆ ಬೆಳೆಗಾರರ ಸಮಸ್ಯೆ ಬಗ್ಗೆಯು ನಾನು ಈ ಹಿಂದೆ ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿ ಸರ್ಕಾರದ ಗಮನ ಸೆಳೆದಿದ್ದೇನೆ. ಸರ್ಕಾರದ ಇಲಾಖೆಗಳ ಪರಿಸ್ಥಿತಿ ಬಗ್ಗೆ ನಾನು ಇಲ್ಲಿ ಮಾತನಾಡುವುದಿಲ್ಲ. ಮಾರುಕಟ್ಟೆಯಲ್ಲಿನ ಸಮಸ್ಯೆಗಳನ್ನು ಸುಧಾರಿಸಬೇಕಿದೆ. ಅಧಿಕಾರಿಗಳು ಕೂಡ ಈ ಬಗ್ಗೆ ಬದ್ಧತೆ, ಕಾಳಜಿಯಿಂದ ಕೆಲಸ ಮಾಡಬೇಕೆಂದು ಶಾಸಕ ರವಿಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಬಿ.ಎನ್.ಸ್ವಾಮಿ, ಶಿಡ್ಲಘಟ್ಟ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಹದೇವಯ್ಯ, ನಗರ ಠಾಣೆ ಪಿಎಸ್‌ಐ ವೇಣುಗೋಪಾಲ್, ಜಿಪಂ ಮಾಜಿ ಸದಸ್ಯ ಬಂಕ್ ಮುನಿಯಪ್ಪ, ಮತ್ತಿತರರು ಇದ್ದರು.

Share this article