ನಿಗದಿಪಡಿಸಿದ ಅವಧಿಯಲ್ಲಿ ಸಾರ್ವಜನಿಕರ ಸಮಸ್ಯೆ ಪರಿಹರಿಸಿ

KannadaprabhaNewsNetwork |  
Published : Jun 20, 2024, 01:02 AM IST
ಗುಬ್ಬಿ ಪಟ್ಟಣದಲ್ಲಿ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ  ಜಿಲ್ಲಾಧಿಕಾರಿ  ಜಿಲ್ಲಾಧಿಕಾರಿ ಶುಭಾಕಲ್ಯಾಣ್. | Kannada Prabha

ಸಾರಾಂಶ

ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದರು. ಪಟ್ಟಣದಲ್ಲಿ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧಿಕಾರಿಗಳು ಸಾರ್ವಜನಿಕರನ್ನು ಅನಗತ್ಯವಾಗಿ ಅಲೆದಾಡಿಸದೆ, ನಿಗದಿಪಡಿಸಿದ ಕಾಲಮಿತಿಯಲ್ಲಿ ಸಾರ್ವಜನಿಕರಿಗೆ ಸ್ಪಂದಿಸಿ ಕೆಲಸಗಳನ್ನು ಮಾಡಿಕೊಡಲೇಬೇಕು. ಎಲ್ಲಾ ಇಲಾಖೆಗಳಲ್ಲಿಯೂ ಅಗತ್ಯವಿರುವಷ್ಟು ಅನುದಾನ ಇರುವುದರಿಂದ ಅದನ್ನು ಬಳಸಿಕೊಂಡು ಅಭಿವೃದ್ಧಿ ಕಾರ್ಯಗಳ ಕ್ರಿಯಾಯೋಜನೆ ರೂಪಿಸಬೇಕಿದೆ ಎಂದರು.

ಸಾರ್ವಜನಿಕರು ಸಣ್ಣ, ಪುಟ್ಟ ವಿಷಯಗಳಿಗೂ ಜಿಲ್ಲಾಮಟ್ಟಕ್ಕೆ ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಿದಲ್ಲಿ ಜನಪರ ಆಡಳಿತ ನೀಡಲು ಸಾಧ್ಯವಾಗುವುದು ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಪ್ರಭು.ಜಿ ಮಾತನಾಡಿ, ಕಂದಾಯ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ದೂರುಗಳು ಬರುತ್ತಿದ್ದು, ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಗ್ರಾಮ ಮಟ್ಟಕ್ಕೆ ಹೋಗಿ ಕುಂದುಕೊರತೆ ಸಭೆಯನ್ನು ನಡೆಸಿದಾಗ ನಿಜವಾದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುವುದು ಎಂದರು. ಕಡ್ಡಾಯವಾಗಿ ತಿಂಗಳಿಗೆ 5 ಗ್ರಾಮ ಪಂಚಾಯಿತಿಯಲ್ಲಿ ಕುಂದುಕೊರತೆ ಸಭೆಯನ್ನು ನಡೆಸಿ ವರದಿ ಸಲ್ಲಿಸಬೇಕು. ಯಾವುದೇ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದಲ್ಲಿ ನಿರ್ದಾಕ್ಷಣ್ಯ ಕ್ರಮ ಕೈಕೊಳ್ಳಲಾಗುವುದು. ಜಲಜೀವನ್ ಕಾಮಗಾರಿಯಲ್ಲಿ ಯಾವುದೇ ಲೋಪ, ಕಳಪೆ ಕಂಡು ಬಂದಲ್ಲಿ ಸಾರ್ವಜನಿಕರು ನೇರವಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಕಚೇರಿಗೆ ಬಂದು ದೂರಿ ಸಲ್ಲಿಸಿದಲ್ಲಿ ಸಂಬಂಧಿಸಿದವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ಅಧಿಕಾರಿಗಳು ಜನಪರವಾಗಿದ್ದು, ಉತ್ತಮ ಆಡಳಿತ ನಡೆಸಲು ಬದ್ಧತೆ ತೋರಬೇಕು ಎಂದು ಕಿವಿಮಾತು ಹೇಳಿದರು.ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಪಂಚಾಯತ್ ರಾಜ್, ಬೆಸ್ಕಾಂ, ಕುಡಿಯುವ ನೀರು ಇಲಾಖೆಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕರು ದೂರು ಸಲ್ಲಿಸಿದರು. ಹಲವು ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ, ಸಿಇಒ ಸೂಚಿಸಿದರು.ಸ್ಥಳದಲ್ಲಿಯೇ ಅನೇಕ ರೈತರಿಗೆ ಆರ್‌ಟಿಸಿ, ಪಿಂಚಣಿದಾರರಿಗೆ ಮಂಜೂರಾತಿ ಪತ್ರ, ಕಣ್ಣಿನ ತೊಂದರೆ ಇದ್ದವರಿಗೆ ಕನ್ನಡಕ, ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಿಸಲಾಯಿತು. ಇದೇ ಮೊದಲ ಬಾರಿಗೆ ತಾಲೂಕಿನಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದ್ದರೂ, ತುಂಬಾ ಕಿರಿದಾದ ಜಾಗದಲ್ಲಿ ಆಯೋಜಿಸಿದ್ದರಿಂದ, ಸಾರ್ವಜನಿಕರಿಗೆ ತೊಂದರೆಯಾಗಿ ಬೇಸರ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಾದರೂ ವಿಶಾಲವಾದ ಜಾಗದಲ್ಲಿ ವ್ಯವಸ್ಥಿತವಾಗಿ ಏರ್ಪಡಿಸಲು ಸಂಬಂಧಿಸಿದವರು ಕ್ರಮ ತೆಗೆದುಕೊಂಡರೆ ಅನುಕೂಲವಾಗುವುದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟರು.ಉಪ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ತಹಸೀಲ್ದಾರ್ ಬಿ. ಆರತಿ, ಇಒ ಪರಮೇಶ್ ಕುಮಾರ್, ಬಿಇಒ ಲೇಪಾಕ್ಷಪ್ಪ, ಟಿಎಚ್‌ಒ ಡಾ.ಬಿಂದುಮಾಧವ್, ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಪಪಂ ಸದಸ್ಯರು, ಸಾರ್ವಜನಿಕರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ