ಗ್ಯಾರಂಟಿ ಜಪದೊಂದಿಗೆ ನಿರುದ್ಯೋಗ, ನೀರಾವರಿ ಸಮಸ್ಯೆಗಳನ್ನು ಪರಿಹರಿಸಿ: ಎಚ್ಡಿಕೆ

KannadaprabhaNewsNetwork | Published : Mar 17, 2025 12:30 AM

ಸಾರಾಂಶ

ಗ್ಯಾರಂಟಿ ಯೋಜನೆಗಳಿಂದ ಜನರು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಬರೀ ಗ್ಯಾರಂಟಿ ಯೋಜನೆಗಳ ಹೆಸರು ಹೇಳಿಕೊಂಡು ಹೋದರೆ ಜತೆಗೆ ಜನರ ಬದುಕನ್ನು ಸರಿಪಡಿಸಲು, ಸಮಸ್ಯೆಗಳಿಗೆ ಪರಿಹಾರ ದೊರೆಯುವುದಿಲ್ಲ. ನೀರಾವರಿ, ಮಕ್ಕಳ ಉದ್ಯೋಗ, ರೈತರು ಸೇರಿದಂತೆ ರಾಜ್ಯದಲ್ಲಿ ಹಲವು ಸಮಸ್ಯೆಗಳಿವೆ. ಇವುಗಳಿಗೆ ಪರಿಹಾರ ತರುವುದರಲ್ಲಿ ಸರ್ಕಾರ ವಿಫಲವಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸರ್ಕಾರ ಗ್ಯಾರಂಟಿ ಜಪ ಮಾಡುವ ಜತೆಗೆ ನಿರುದ್ಯೋಗ, ನೀರಾವರಿ ಸಮಸ್ಯೆಗಳ ಪರಿಹಾರಕ್ಕೂ ಮುಂದಾಗಬೇಕು ಎಂದು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.

ತಾಲೂಕಿನ ದೊಡ್ಡಬ್ಯಾಡರಹಳ್ಳಿಯಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡ ಶ್ರೀಶಂಕರ ಮಠವನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಕೆಲವು ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಲು ಹೊರಟಿರುವುದು ಒಂದು ಭಾಗ. ಆದರೆ, ನಾವು ಅಷ್ಟಕ್ಕೆ ಸಮಾಧಾನಪಟ್ಟುಕೊಳ್ಳಲು ಸಾಧ್ಯವಿಲ್ಲ ಎಂದರು.

ಗ್ಯಾರಂಟಿ ಯೋಜನೆಗಳಿಂದ ಜನರು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಬರೀ ಗ್ಯಾರಂಟಿ ಯೋಜನೆಗಳ ಹೆಸರು ಹೇಳಿಕೊಂಡು ಹೋದರೆ ಜತೆಗೆ ಜನರ ಬದುಕನ್ನು ಸರಿಪಡಿಸಲು, ಸಮಸ್ಯೆಗಳಿಗೆ ಪರಿಹಾರ ದೊರೆಯುವುದಿಲ್ಲ. ನೀರಾವರಿ, ಮಕ್ಕಳ ಉದ್ಯೋಗ, ರೈತರು ಸೇರಿದಂತೆ ರಾಜ್ಯದಲ್ಲಿ ಹಲವು ಸಮಸ್ಯೆಗಳಿವೆ. ಇವುಗಳಿಗೆ ಪರಿಹಾರ ತರುವುದರಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟಾಂಗ್ ನೀಡಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ನಿರೀಕ್ಷತ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ. ರಾಜ್ಯದ ಅಭಿವೃದ್ಧಿಯಲ್ಲಿ ಸಾಕಷ್ಟು ಲೋಪದೋಷಗಳು ಕಾಣುತ್ತಿವೆ ಎಂದು ದೂರಿದರು.

ಕಳೆದ ಲೋಕಸಭಾ ಚುನಾವಣೆ ವೇಳೆ ನಾನು ಮೂರನೇ ಬಾರಿಗೆ ಹೃದಯಶಸ್ತ್ರ ಚಿಕಿತ್ಸೆ ಒಳಗಾದೆ. ನಿಮ್ಮೆಲ್ಲರ ಒತ್ತಾಯದ ಮೇರೆಗೆ ಚಿಕಿತ್ಸೆ ಪಡೆದು ಎರಡೇ ದಿನಕ್ಕೆ ಚುನಾವಣಾ ಪ್ರಚಾರಕ್ಕೆ ದುಮುಕಿದೆ. ನಿಮ್ಮಲ್ಲರ ಆಶೀರ್ವಾದದಿಂದ ಗೆದ್ದು ಕೇಂದ್ರದ ಮಂತ್ರಿ ಆಗಿಯೂ ಕೆಲಸ ಮಾಡುತ್ತಿದ್ದೇನೆ ಎಂದರು.

ಆರೋಗ್ಯದ ಸಮಸ್ಯೆ ನಡುವೆಯೂ ಕಳೆದೊಂದು ವರ್ಷದಿಂದ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ. ಆದರೆ, ಮತ್ತೆ ನನಗೆ ಅನಾರೋಗ್ಯದ ಸಮಸ್ಯೆಯಿಂದ ಕಳೆದ ಹತ್ತು ದಿನಗಳಿಂದ ಪ್ರವಾಸ ಮಾಡಿಲ್ಲ. ಕಾರ್ಯಕ್ರಮಗಳಲ್ಲೂ ಪಾಲ್ಗೊಂಡಿಲ್ಲ. ನಿಮ್ಮಲ್ಲರ ಒತ್ತಡಕ್ಕೆ ಮಣಿದು ಶ್ರೀಶಂಕರ ಮಠ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ ಎಂದರು.

Share this article