ಸಿಎಂ ಸಿದ್ದು ಸಾಮಾಜಿಕ ನ್ಯಾಯದ ವಿರೋಧಿ

KannadaprabhaNewsNetwork | Published : Mar 17, 2025 12:30 AM

ಸಾರಾಂಶ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಓರ್ವ ಡೊಂಗಿ ವ್ಯಕ್ತಿಯಾಗಿದ್ದು, ಸಾಮಾಜಿಕ ನ್ಯಾಯದ ವಿರೋಧಿಯಾಗಿದ್ದಾರೆ. ಇದಕ್ಕೆ ಮಾದಿಗ ಸಮುದಾಯಕ್ಕೆ ನ್ಯಾಯಯುತವಾಗಿ ಧಕ್ಕಬೇಕಾದ ಒಳ ಮೀಸಲಾತಿಯನ್ನು ಜಾರಿಗೆ ತರಲು ಮೀನಾಮೇಷ ಎಣಿಸುತ್ತಿರುವುದೇ ಸಾಕ್ಷಿಯಾಗಿದೆ ಎಂದು ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆಯ ರಾಜ್ಯ ಸಂಚಾಲಕ ಎಸ್.ಅರುಣ್‌ಕುಮಾರ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಓರ್ವ ಡೊಂಗಿ ವ್ಯಕ್ತಿಯಾಗಿದ್ದು, ಸಾಮಾಜಿಕ ನ್ಯಾಯದ ವಿರೋಧಿಯಾಗಿದ್ದಾರೆ. ಇದಕ್ಕೆ ಮಾದಿಗ ಸಮುದಾಯಕ್ಕೆ ನ್ಯಾಯಯುತವಾಗಿ ಧಕ್ಕಬೇಕಾದ ಒಳ ಮೀಸಲಾತಿಯನ್ನು ಜಾರಿಗೆ ತರಲು ಮೀನಾಮೇಷ ಎಣಿಸುತ್ತಿರುವುದೇ ಸಾಕ್ಷಿಯಾಗಿದೆ ಎಂದು ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆಯ ರಾಜ್ಯ ಸಂಚಾಲಕ ಎಸ್.ಅರುಣ್‌ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಮುಂದೆ ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟಿನ ಏಳು ನ್ಯಾಯಾಧೀಶರು ತೀರ್ಪು, ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಉಪಸಮಿತಿ ವರದಿಯ ಅಂಕಿ ಅಂಶಗಳಿದ್ದರೂ, ಎಂಪೇರಿಕಲ್ ಡಾಟಾ ಹೆಸರಿನಲ್ಲಿ ಅನಗತ್ಯ ವಿಳಂಬ ಮಾಡುವ ಮೂಲಕ ಮಾದಿಗ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಇದಕ್ಕೆ ಬೆಂಬಲವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಡಾ.ಜಿ.ಪರಮೇಶ್ವರ್ ಮತ್ತು ಡಾ.ಎಚ್.ಸಿ.ಮಹದೇವಪ್ಪ ನಿಂತಿದ್ದಾರೆ ಎಂದು ಆರೋಪಿಸಿದರು.

ಮಾದಿಗರು ಒಳ ಮೀಸಲಾತಿಗಾಗಿ ಕಳೆದ 35 ವರ್ಷಗಳಿಂದಲೂ ಹೋರಾಟ ನಡೆಸುತ್ತಾ ಬಂದಿದ್ದು, 2000ನೇ ಇಸವಿಯ ಇ.ವಿ.ಚನ್ನಯ್ಯ ವಿರುದ್ದ ಆಂಧ್ರಪ್ರದೇಶ ಕೇಸ್, ಮತ್ತು 2020ರ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ 5 ಜನರ ನ್ಯಾಯಾಧೀಶರ ತೀರ್ಪಿನ ಹಿನ್ನೆಲೆಯಲ್ಲಿ 2024ರ ಆಗಸ್ಟ್ 1ರಂದು ಡಿ.ವೈ.ಚಂದ್ರಚೂಡ್ ನೇತೃತ್ವದ 7ಜನರ ನ್ಯಾಯಾಧೀಶರ ಬೆಂಚ್ ನೀಡಿದ ತೀರ್ಪಿನ ಪ್ರಕಾರ ಎಂಪೆರಿಕಲ್ ಡಾಟಾ ಸಂಗ್ರಹಕ್ಕೆ ಸಿದ್ದರಾಮಯ್ಯ ಸರಕಾರ ಕಾಟಾಚಾರಕ್ಕೆ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ಆಯೋಗ ನೇಮಕ ಮಾಡಿ, ಸರಿಯಾದ ರೀತಿಯಲ್ಲಿ ಸ್ಪಂದಿಸದೆ ಮಾದಿಗ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದರು.

ನಾನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಹೇಳುವ ಮುಖ್ಯಮಂತ್ರಿಗಳು, ಒಳಮೀಸಲಾತಿ ವಿರೋಧಿ ನಿಲುವೇ, ಅವರನ್ನು ಡೊಂಗಿ ಸಾಮಾಜಿಕ ನ್ಯಾಯ ಪ್ರತಿಪಾದಕರು ಎಂಬುದನ್ನು ತೋರಿಸುತ್ತದೆ. ಹಾಲಿ ಸರಕಾರದ ಕೈಯಲ್ಲಿರುವ ಅಂಕಿ ಅಂಶಗಳನ್ನೇ ಮುಂದಿಟ್ಟುಕೊಂಡು ನೆರೆಯ ಆಂಧ್ರಪ್ರದೇಶ ಹಾಗೂ ಹರಿಯಾಣ ಸರಕಾರ ಜಾರಿಗೆ ತಂದಿರುವಂತೆ ಒಳಮೀಸಲಾತಿಯನ್ನು ಜಾರಿಗೊಳಿಸದೆ ಇದ್ದಲ್ಲಿ ಪ್ರತಿ ಹಂತದಲ್ಲಿಯು ಸಿದ್ದರಾಮಯ್ಯ ಅವರ ಮಾದಿಗ ವಿರೋಧಿ ನಿಲುವುಗಳನ್ನು ಜನತೆಯ ಮುಂದೆ ತೆರೆದಿಡಲಾಗುವುದು. ಇದನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಮುಂಬರುವ ಎಲ್ಲಾ ಚುನಾವಣೆಗಳಲ್ಲಿಯೂ ಸಿದ್ದರಾಮಯ್ಯ ವಿರುದ್ದವಾಗಿ ಪ್ರಚಾರವನ್ನು ನಮ್ಮ ವೇದಿಕೆ ಮಾಡಲಿದೆ ಎಂದು ಅರುಣ್ ಕುಮಾರ್ ಎಚ್ಚರಿಸಿದರು.

ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆಯ ಸದಸ್ಯ ಶಿವಕುಮಾರ್ ಮಾತನಾಡಿ, ಒಳಮೀಸಲಾತಿ ಜಾರಿಯಾಗುವವರೆಗೂ ಯಾವುದೇ ಹುದ್ದೆ ಭರ್ತಿ ಮಾಡುವುದಿಲ್ಲ ಎಂದು ಹೇಳಿದ ಸರಕಾರ, ಒಳಗೊಳಗೆ ಸಚಿವಾಲಯದ ಸುಮಾರು 73 ವಿವಿಧ ಹುದ್ದೆಗಳಿಗೆ ಅರ್ಜಿ ಕರೆದಿದ್ದು, ಇದರ ಪರೀಕ್ಷೆ ಮುಂದಿನ 23ರ ಭಾನುವಾರ ನಡೆಯಲಿದೆ. ಸರಕಾರವೇ ನೀಡಿರುವ ಭರವಸೆಯಂತೆ ಯಾವ ಹುದ್ದೆಗಳಿಗೆ ಅರ್ಜಿ ಕರೆಯಬಾರದು. ಹಾಗೆಯೇ ಬ್ಯಾಕ್‌ಲಾಗ್ ಹುದ್ದೆಗಳಿಗೆ ನಡೆಸುತ್ತಿರುವ ಪರೀಕ್ಷೆಯನ್ನು ಮುಂದೂಡಬೇಕು, ಇಲ್ಲವೇ ರದ್ದು ಮಾಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಬೂದಿತಿಟ್ಟು ರಾಜೇಂದ್ರ.ಎಲ್, ಮಾಳಪ್ಪ ಕುರ್ಕಿ, ಎಂಆರ್.ಸುರೇಂದ್ರ ಕುಮಾರ್, ರಂಗಧಾಮಯ್ಯ, ಸಿದ್ದಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this article