ಹಾಸನ: ಜಿಲ್ಲೆಯ ಪ್ರಮುಖ ಜ್ವಲಂತ ಸಮಸ್ಯೆಗಳಲ್ಲಿ ಕಾಡಾನೆ ಸಮಸ್ಯೆಯೇ ಪ್ರಮುಖವಾದುದು. ಜಿಲ್ಲೆಯ ಆಲೂರು, ಬೇಲೂರು ತಾಲೂಕಿನಲ್ಲಿ ಕಾಡಾನೆಗಳಿಂದಾಗಿ ಒಂದಲ್ಲಾ ಒಂದು ಸಮಸ್ಯೆ ತಲೆದೋರುತ್ತಿದೆ. ಕಳೆದ ಒಂದೂವರೆ ತಿಂಗಳಿನಲ್ಲಿ ನಾಲ್ಕು ಸಾವು ಸಂಭವಿಸಿದೆ. ಸಾವು ಸಂಭವಿಸಿದಾಗ ಮಾತ್ರ ಚುರುಕಾಗುವ ಅರಣ್ಯ ಇಲಾಖೆ ಉಳಿದಂತೆ ನಿರುಮ್ಮಳವಾಗಿರುತ್ತದೆ.
ಬಜೆಟ್‌ನಲ್ಲಿ ಆನೆಧಾಮದ ಭರವಸೆ:
ಈ ಬಾರಿಯ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಜಿಲ್ಲೆಯ ಕಾಡಾನೆ ಸಮಸ್ಯೆ ಬಗೆಹರಿಸುವ ನಿಟ್ಟಿನ್ಲಲಿ ಭದ್ರಾ ಅರಣ್ಯದಲ್ಲಿ ಕಾಡಾನೆಗಳ ಧಾಮ ನಿರ್ಮಾಣ ಮಾಡುವುದಾಗಿ ಭರವಸೆ ನೀಡಲಾಗಿದೆ. ಜಿಲ್ಲೆಯಲ್ಲಿರುವ ಕಾಡಾನೆಗಳಲ್ಲಿ ಬಹುತೇಕ ಕಾಡಾನೆಗಳು ಉಪಟಳ ನೀಡುತ್ತಿವೆ. ಹಾಗೆಂದ ಮಾತ್ರಕ್ಕೆ ಅವುಗಳನ್ನೆಲ್ಲಾ ಹಿಡಿದು ಸ್ಥಳಾಂತರ ಮಾಡಲು ವನ್ಯಜೀವಿ ಕಾಯ್ದೆಯಡಿ ಅವಕಾಶ ಇಲ್ಲ. ಇದಕ್ಕೆ ಸ್ಥಳೀಯರು ಅದಕ್ಕೆ ಒಪ್ಪುತ್ತಿಲ್ಲ. ಹಾವಳಿ ಮಾಡುತ್ತಿರುವ ಎಲ್ಲಾ ಕಾಡಾನೆಗಳನ್ನೂ ಹಿಡಿದು ಸ್ಥಳಾಂತರ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.ಇದೀಗ ಅರಣ್ಯ ಇಲಾಖೆ ಮತ್ತದೇ ಕಾರ್ಯಾಚರಣೆ ಆರಂಭಿಸಿದೆ. ಅದಕ್ಕೆ ಸಂಂಬಂಧಪಟ್ಟ ನೋಟಿಫಿಕೇಷನ್ ಕೂಡ ನೀಡಿದೆ. ಆದರೆ ಈ ಭಾಗದ ಜನರು ಇಂತಹ ಹಲವು ಕಾರ್ಯಾಚರಣೆಗಳನ್ನು ನೋಡಿದ್ದಾರೆ. ಯಾವ ಕಾರ್ಯಾಚರಣೆಯಿಂದಲೂ ಯಾವುದೇ ಪ್ರಯೋಜನ ಆಗಿಲ್ಲ. ಇದನ್ನು ಅರಿತಿರುವುದರಿಂದಲೇ ಈ ಭಾಗದ ಜನರು ಅರಣ್ಯ ಇಲಾಖೆಯ ಕಾಡಾನೆ ಹಿಡಿಯುವ ಅಥವಾ ಹಿಡಿದು ರೇಡಿಯೋಕಾಲರ್ ಅಳವಡಿಸುವ ಕಾರ್ಯಾಚರಣೆ ಬಗ್ಗೆ ನಂಬಿಕೆ ಕಳೆದುಕೊಂಡಿದ್ದಾರೆ. ಜನರಷ್ಟೇ ಅಲ್ಲ ಸ್ವತಃ ಬೇಲೂರು ಕ್ಷೇತ್ರದ ಶಾಸಕರಾದ ಹುಲ್ಲಳ್ಳಿ ಸುರೆಶ್ ಕೂಡ ಈ ಕಾರ್ಯಾಚರಣೆ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದು, ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೊಶ ವ್ಯಕ್ತಪಡಿಸುತ್ತಿದ್ದಾರೆ.