ಅಧಿಕಾರಿಗಳು ಜನಸ್ನೇಹಿಯಾದಾಗ ಸಮಸ್ಯೆಗಳಿಗೆ ಪರಿಹಾರ

KannadaprabhaNewsNetwork | Published : Jun 19, 2024 1:01 AM

ಸಾರಾಂಶ

ನಾಗಮಂಗಲ ತಾಲೂಕಿನಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು.

ಕನ್ನಡಪ್ರಭವಾರ್ತೆ ನಾಗಮಂಗಲ

ಕಂದಾಯ ಇಲಾಖೆ ಹಾಗೂ ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಬರುವ ಸಮಸ್ಯೆಗಳು ಬಗೆಹರಿದರೆ ತಾಲೂಕಿನ ಬಹುತೇಕ ಸಮಸ್ಯೆಗಳು ಇತ್ಯರ್ಥವಾದಂತೆ. ಈ ಎರಡೂ ಇಲಾಖೆಗಳ ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಜನಸ್ನೇಹಿಯಾಗಿ ಕೆಲಸ ಮಾಡಬೇಕೆಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಂದಾಯ ಇಲಾಖೆ, ತಾಪಂ ಸೇರಿ ಹಲವು ಇಲಾಖೆಗಳ ಅಧಿಕಾರಿಗಳು ತಾಲೂಕಿನ ಕೇಂದ್ರ ಸ್ಥಾನದಲ್ಲಿರುವ ತಮ್ಮ ಕಚೇರಿಗಳಲ್ಲಿ ಕೂರುವುದನ್ನು ಬಿಟ್ಟು ಹಳ್ಳಿಗಳಿಗೆ ತೆರಳಿ ಸಾರ್ವಜನಿಕರ ಕೆಲಸ ಕಾರ್ಯ ಮಾಡಿಕೊಡುವ ಮೂಲಕ ಜನರು ಕಚೇರಿಗಳಿಗೆ ಅಲೆಸುವುದಕ್ಕೆ ಅಂತ್ಯವಾಡಬೇಕು ಎಂದರು.

ಅರ್ಜಿಯ ಸ್ಥಿತಿ-ಗತಿ ಪರಿಶೀಲಿಸಿ:

ಸಮಸ್ಯೆ ಹೊತ್ತು ಬರುವ ಜನರಿಂದ ಅರ್ಜಿಗಳನ್ನು ಸ್ವೀಕರಿಸಿದ ಬಳಿಕ ಅದು ಯಾವ ಹಂತದಲ್ಲಿದೆ ಅಥವಾ ಬಗೆಹರಿಸಲಾಗಿದೆಯೇ ಎಂಬುದನ್ನು ಒಂದು ನಕಲು ಪ್ರತಿಯೊಂದಿಗೆ ಅರ್ಜಿಯ ಸ್ಥಿತಿಗತಿಯನ್ನು ತಿಂಗಳ ಅಂತ್ಯದೊಳಗೆ ನನ್ನ ಕಚೇರಿಗೆ ತಲುಪಿಸಬೇಕು ಎಂದು ಎಲ್ಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಚಿವರು, ಇದರ ಮೇಲ್ವಿಚಾರಣೆಯನ್ನು ತಹಸೀಲ್ದಾರ್ ಮತ್ತು ತಾಪಂ ಇಒಗೆ ವಹಿಸಿದರು. ಕಂದಾಯ ಇಲಾಖೆ ನೌಕರರು ಸರಿಯಾದ ಸಮಯಕ್ಕೆ ಕಚೇರಿಗೆ ಬರುತ್ತಿಲ್ಲವೆಂದು ದೂರುಗಳು ಕೇಳಿಬರುತ್ತಿವೆ ಅಂತಹ ನೌಕರರ ವಿರುದ್ಧ ಕ್ರಮ ಜರುಗಿಸುವಂತೆ ತಹಸೀಲ್ದಾರ್‌ಗೆ ಸೂಚಿಸಿದರು.

ಅನಾಮಧೇಯ ಪತ್ರಗಳನ್ನು ನಿರ್ಲಕ್ಷಿಸಿ:

ಯಾವುದೇ ಇಲಾಖೆಗಳಿಗೆ ಅನಾಮಧೇಯ ಪತ್ರಗಳು ಬಂದರೆ ಅವುಗಳಿಗೆ ಕಿವಿಗೊಡದೆ ತಮ್ಮ ಕೆಲಸ ಮುಂದುವರೆಸಿಕೊಂಡು ಹೋಗಿ. ಕೆಲವರು ತಾಲೂಕು ಆಡಳಿತ ವ್ಯವಸ್ಥೆಯನ್ನು ಗೊಂದಲ ಮಾಡಲೆಂದು ಮಾಡುತ್ತಾರೆ. ಅವುಗಳನ್ನು ನಿರ್ಲಕ್ಷ್ಯ ಮಾಡಿ. ಸೂಕ್ತ ದಾಖಲೆಗಳ ಮೂಲಕ ಅಥವಾ ವಿಳಾಸದೊಂದಿಗೆ ಬರುವಂತಹ ಅರ್ಜಿಗಳಿಗೆ ಮಾನ್ಯತೆ ನೀಡಿ. ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಸಾಮಾಜಿಕವಾಗಿ ವ್ಯವಸ್ಥೆಯನ್ನು ಗೊಂದಲಪಡಿಸುತ್ತಿರುವುದು ಗಮನಕ್ಕೆ ಬಂದಿದೆ. ಆ ರೀತಿ ಮಾಡುವವರು ಪತ್ರಕರ್ತರಾಗಿರಲಿ, ರಾಜಕಾರಣಿಗಳಾಗಿರಲಿ ಅಥವಾ ನಮ್ಮ ಪಕ್ಷದ ಕಾರ್ಯಕರ್ತರೇ ಆಗಿರಲಿ ಅಂತಹವರ ವಿರುದ್ದ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕೆಂದು ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಎಇಇ ವಿರುದ್ಧ ಸಚಿವರು ಗರಂ:

ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಹಲವು ಗ್ರಾಮಗಳಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಅವುಗಳು ಯಾವು ಎಂದು ಇಲಾಖೆಯ ಎಇಇ ನಂದಕುಮಾರ್ ಅವರನ್ನು ಪ್ರಶ್ನಿಸಿದರು. ಸರಿಯಾದ ಮಾಹಿತಿ ನೀಡಲು ತಡಬಡಾಯಿಸಿದ ನಂದಕುಮಾರ್ ವಿರುದ್ಧ ಗರಂ ಆದ ಸಚಿವರು, ಸುಖಧರೆ-ಮಾರನಾಯಕನಹಳ್ಳಿ ರಸ್ತೆ ಕಾಮಗಾರಿ ಒಂದು ವಾರದೊಳಗೆ ಆರಂಭವಾಗದಿದ್ದರೆ ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸಿ. ಶ್ರವಣಬೆಳಗೊಳ ರಸ್ತೆ ಒಂದು ತಿಂಗಳೊಳಗೆ ಪೂರ್ಣಗೊಳ್ಳದಿದ್ದರೆ ರೀ-ಟೆಂಡರ್ ಮಾಡಿ. ಯಾವ ಹಳ್ಳಿಗಳಲ್ಲಿ ರಸ್ತೆ ಕಾಮಗಾರಿ ಬಾಕಿ ಇದೆ ಎಂಬುದೇ ನಿನಗೆ ಗೊತ್ತಿಲ್ಲವೆಂದರೆ ಯಾವ ರೀತಿ ಕೆಲಸ ಮಾಡುತ್ತಿದ್ದೀಯಾ. ಪಾಪ ನಿನಗೆ ಸಮಯ ಸಿಗ್ತಿಲ್ಲ ಅನಿಸುತ್ತದೆ ಬಿಡು. ನಿನಗಿಂತ ನನಗೆ ಮಾಹಿತಿ ಹೆಚ್ಚು ಇದೆ ಎಂದು ಎಇಇ ನಂದಕುಮಾರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಸೋಲಾರ್‌ ಪ್ಲಾಂಟ್‌ಗೆ ಜಾಗ ನಿಗದಿ:

ತಹಸೀಲ್ದಾರ್ ನಯೀಂ ಉನ್ನಿಸಾ ಮಾತನಾಡಿ, ಪಿಎಂ ಕಿಸಾನ್ ಯೋಜನೆಯ ಸೋಲಾರ್ ಪವರ್ ಪ್ಲಾಂಟ್‌ಗೆ ಸರ್ಕಾರದಿಂದ ಜಾಗ ನೀಡಲಾಗಿದೆ. ರೈತ ಸಂಪರ್ಕ ಕೇಂದ್ರಕ್ಕೆ ಬೆಳ್ಳೂರು, ಹೊಣಕೆರೆಯಲ್ಲಿ ಜಾಗ ನಿಗಧಿ ಮಾಡಲಾಗಿದ್ದು, ದೇವಲಾಪುರದಲ್ಲಿ ಮುಂದಿನ ಒಂದು ವಾರದೊಳಗೆ ಜಾಗ ಕುರಿತಾಗಿ ಇರುವಂತಹ ಸಮಸ್ಯೆಯನ್ನು ಬಗೆಹರಿಸಿಕೊಡಲಾಗುವುದು. ತಹಸೀಲ್ದಾರ್ ನ್ಯಾಯಾಲಯದಲ್ಲಿ 400ಕ್ಕೂ ಹೆಚ್ಚು ಪ್ರಕರಣಗಳಿದ್ದವು, ಆದರೆ ಈಗ ಎಲ್ಲವನ್ನು ಇತ್ಯರ್ಥಪಡಿಸಿದ್ದು ಪ್ರಸ್ತುತ 52 ಪ್ರಕರಣಗಳು ಮಾತ್ರ ಬಾಕಿ ಉಳಿದಿವೆ. ಕಂದಾಯ ಗ್ರಾಮಗಳ ನೋಂದಣಿ ಆಗುತ್ತಿದೆ. 740 ಕಂದಾಯ ಗ್ರಾಮಗಳಿಗೆ ಹಕ್ಕುಪತ್ರ ನೀಡಲು ಮುಂದಾಗಿದ್ದು, ಸ್ಥಳ ಪರಿಶೀಲನೆ ಮಾಡಿ ನಂತರ ಹಕ್ಕುಪತ್ರ ನೀಡಲಾಗುವುದು. ಸರ್ವೆ ಇಲಾಖೆಗೆ ಸಂಬಂಧಿಸಿದಂತೆ ಪ್ರತಿ ತಿಂಗಳಿಗೆ 150ಕ್ಕೂ ಹೆಚ್ಚು ಅರ್ಜಿಗಳು ಬರುತ್ತಿವೆ. ಆದರೆ ಒಬ್ಬ ಸರ್ವೆಯರ್ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು ಕೆಲಸ ಮಾಡಲು ಒತ್ತಡ ಹೆಚ್ಚಾಗುತ್ತಿದ್ದು ಮತ್ತೊಬ್ಬ ಸರ್ವೆಯರ್‌ನ್ನು ನಿಯೋಜಿಸಿಕೊಡಲು ಮನವಿ ಮಾಡಿದರು.27 ಗ್ರಾಪಂಗೆ 14 ಜನ ಪಿಡಿಒ:

ತಾಲೂಕಿನ 27 ಗ್ರಾಮ ಪಂಚಾಯಿತಿಗಳ ಪೈಕಿ ಕೇವಲ 14 ಮಂದಿ ಪಿಡಿಒಗಳು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಒಬ್ಬ ಪಿಡಿಒಗೆ ಎರಡು ಗ್ರಾ.ಪಂ.ನಂತೆ ಹಂಚಿಕೆ ಮಾಡಲಾಗಿದ್ದು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಮುಂದಿನ ತಿಂಗಳು ಮೂವರು ಪಿಡಿಒಗಳು ವರ್ಗಾವಣೆ ಮತ್ತು ನಿವೃತ್ತಿಯಾಗುತ್ತಿದ್ದು ಮತ್ತಷ್ಟು ಕಷ್ಟವಾಗಲಿದೆ. ಪಿಡಿಒಗಳನ್ನು ನಿಯೋಜಿಸಿಕೊಡುವಂತೆ ತಾ.ಪಂ.ಇಒ ಚಂದ್ರಮೌಳಿ ಸಚಿವರ ಬಳಿ ಮನವಿ ಮಾಡಿಕೊಂಡರು.ಯಾರ ಒತ್ತಡಕ್ಕೂ ಮಣಿಯದೆ ಕ್ರಮ ಜರುಗಿಸಿ:

ಅಬಕಾರಿ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಿಂದ ಪ್ರತಿನಿತ್ಯ ದೂರುಗಳು ಕೇಳಿಬರುತ್ತಿವೆ. ಎಲ್ಲಾ ಮದ್ಯದ ಅಂಗಡಿ ಮಾಲೀಕರ ಸಭೆ ಕರೆದು ಹಳ್ಳಿಗಳಲ್ಲಿರುವ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿದರೆ ಮಾರಾಟ ಮಾಡುವವರ ಹಾಗೂ ಸರಬರಾಜು ಮಾಡುವವರ ವಿರುದ್ದ ಕ್ರಮ ಜರುಗಿಸುತ್ತೇವೆ ಎಂದು ಸಭೆಯಲ್ಲಿ ತಿಳಿಸಿ ಅವರಿಗೆ 10 ದಿನಗಳ ಕಾಲ ಗಡುವು ನೀಡಿ. ಆನಂತರ ಯಾವುದೇ ಮುಲಾಜಿಲ್ಲದೆ ದಾಳಿಮಾಡಿ. ಈ ವಿಚಾರದಲ್ಲಿ ನಾನೂ ಕೂಡ ಕರೆ ಮಾಡಲ್ಲ, ಯಾರ ಒತ್ತಡಕ್ಕೂ ಮಣಿಯಬೇಡಿ. ಒಟ್ಟಾರೆ ಗ್ರಾಮೀಣ ಪ್ರದೇಶದ ಸಣ್ಣ ಪುಟ್ಟ ಅಂಗಡಿಗಳಲ್ಲಿನ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಅಬಕಾರಿ ನಿರೀಕ್ಷಕಿ ಗೀತಾ ಅವರಿಗೆ ಖಡಕ್ ಸೂಚನೆ ನೀಡಿದರು.ಸಭೆಯಲ್ಲಿ ಶಿಕ್ಷಣ, ಅರಣ್ಯ, ಕೃಷಿ, ತೋಟಗಾರಿಕೆ, ರೇಷ್ಮೆ, ಆರೋಗ್ಯ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡರು. ಕೆಡಿಪಿ ಸದಸ್ಯರಾದ ಎಂ.ಪ್ರಸನ್ನ, ಎನ್.ಜೆ.ರಾಜೇಶ್, ಮಹಮ್ಮದ್ ಸಕಿಲ, ಮೂಡ್ಲೀಗೌಡ, ಆರ್.ಆಶಾಲತಾ, ತಹಸೀಲ್ದಾರ್ ನಯಿಂ ಉನ್ನಿಸಾ, ತಾ.ಪಂ.ಇಓ ಚಂದ್ರಮೌಳಿ ಸೇರಿದಂತೆ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಇದ್ದರು.

Share this article