ಬಿಜೆಪಿಗೆ ಕೈಕೊಟ್ಟ ಸೋಮಶೇಖರ್‌, ಹೆಬ್ಬಾರ್‌ ಸದನಕ್ಕೆ ಗೈರು

KannadaprabhaNewsNetwork |  
Published : Feb 29, 2024, 02:05 AM IST
ಶಿವರಾಂ ಹೆಬ್ಬಾರ್‌ | Kannada Prabha

ಸಾರಾಂಶ

ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಶಾಸಕ ಎಸ್‌.ಟಿ.ಸೋಮಶೇಖರ್‌, ಮತದಾನಕ್ಕೆ ಗೈರಾದ ಶಾಸಕ ಶಿವರಾಂ ಹೆಬ್ಬಾರ್‌ ಮಂಗಳವಾರ ಅಧಿವೇಶನದ ಕಲಾಪಕ್ಕೆ ಗೈರಾಗಿದ್ದರು.

ಕನ್ನಡಪ್ರಭ ವಾರ್ತೆ ವಿಧಾನಸಭೆ/ಯಲ್ಲಾಪುರ

ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಶಾಸಕ ಎಸ್‌.ಟಿ.ಸೋಮಶೇಖರ್‌, ಮತದಾನಕ್ಕೆ ಗೈರಾದ ಶಾಸಕ ಶಿವರಾಂ ಹೆಬ್ಬಾರ್‌ ಮಂಗಳವಾರ ಅಧಿವೇಶನದ ಕಲಾಪಕ್ಕೆ ಗೈರಾಗಿದ್ದರು. ಮಂಗಳವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ನೀಡಿದ್ದ ವಿಪ್‌ ಉಲ್ಲಂಘಿಸಿ ಕಾಂಗ್ರೆಸ್‌ಗೆ ಮತದಾನ ಮಾಡಿದ ಎಸ್‌.ಟಿ.ಸೋಮಶೇಖರ್‌ ಮತ್ತು ಮತದಾನದಿಂದ ದೂರ ಉಳಿದಿದ್ದ ಶಿವರಾಂ ಹೆಬ್ಬಾರ್‌ ಸದನಕ್ಕೆ ಆಗಮಿಸಲಿದ್ದಾರೆಯೇ ಎಂಬ ಕುತೂಹಲ ಮೂಡಿತ್ತು. ಅಲ್ಲದೇ, ಶಾಸಕರ ನಡೆಯ ಬಗ್ಗೆ ವಿಧಾನಸಭೆಯ ಮೊಗಸಾಲೆಯಲ್ಲಿ ಚರ್ಚೆಗೆ ಗ್ರಾಸವಾಯಿತು.ಅನಾರೋಗ್ಯದಿಂದ ರಾಜ್ಯಸಭಾ ಚುನಾವಣೆಗೆ ಗೈರಾದೆ: ಹೆಬ್ಬಾರ್‌

ಆರೋಗ್ಯದಲ್ಲಿ ಏರುಪೇರಾದ ಕಾರಣ ವೈದ್ಯರ ಸಲಹೆಯಂತೆ ಬೆಂಗಳೂರಿನಲ್ಲಿಯೇ ಇದ್ದರೂ ರಾಜ್ಯಸಭಾ ಚುನಾವಣೆಗೆ ಮತದಾನ ಮಾಡಲು ಹೋಗಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ್‌ ರಾಜ್ಯಸಭಾ ಚುನಾವಣೆಯಿಂದ ದೂರ ಉಳಿದಿರುವ ಕುರಿತು ಸ್ಪಷ್ಟನೆ ನೀಡಿದ್ದಾರೆ.ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಶಾಸಕನಾಗಿರುವ ನನಗೆ ಕಾಂಗ್ರೆಸ್ ಸೇರುವ ಅಗತ್ಯವೇ ಇಲ್ಲ. 40 ವರ್ಷದ ಸುದೀರ್ಘ ರಾಜಕೀಯ ಅನುಭವವಿರುವ ನನಗೆ, ಕಾನೂನಿನ ತಿಳುವಳಿಕೆಯೂ ಇದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನನ್ನನ್ನು ಕೆಲವು ಬಿಜೆಪಿ ಮುಖಂಡರೇ ಸೋಲಿಸಲು ಹರಸಾಹಸ ಪಟ್ಟಿದ್ದರು. ಚುನಾವಣೆಯಲ್ಲಿ ನನ್ನ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದವರ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ಕೆಲವರಿಗೆ ಶೋಕಾಸ್ ನೋಟಿಸ್‌ ನೀಡಿ ವಾಪಸ್ ಪಡೆದರು. ನಾನು ಇನ್ನೂ ತಾಳ್ಮೆ ಕಳೆದುಕೊಳ್ಳದೆ ಪಕ್ಷದಲ್ಲಿ ಮುಂದುವರಿದಿದ್ದು, ಪಕ್ಷದ ನಾಯಕರ ನಿರ್ಣಯಗಳ ಬಗ್ಗೆ ಸಮಾಧಾನದಿಂದ ಕಾದು ನೋಡುತ್ತೇನೆ. ನನ್ನ ಬೇಡಿಕೆಗೆ ಪಕ್ಷ ಇನ್ನಾದರೂ ಸ್ಪಂದಿಸುತ್ತದೆ ಎಂಬ ವಿಶ್ವಾಸ ನನಗಿದೆ. ನೂತನ ಜಿಲ್ಲಾಧ್ಯಕ್ಷರು, ತಾಲೂಕಾಧ್ಯಕ್ಷರ ನಿಯೋಜನೆ ಸಂದರ್ಭದಲ್ಲಿ ಸೌಜನ್ಯಕ್ಕಾಗಿಯೂ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ವಾಸ್ತವಿಕವಾಗಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ನನ್ನ ಮತದ ಅಗತ್ಯವಿರಲಿಲ್ಲವೆಂಬ ಸಂಗತಿ ಎಲ್ಲರಿಗೂ ಗೊತ್ತಿದೆ. ಜೆಡಿಎಸ್‌ನ 5ನೇ ಅಭ್ಯರ್ಥಿ ಸೋಲುವರೆಂಬ ಲೆಕ್ಕಾಚಾರವೂ ಇತ್ತು. ನನ್ನ ಒಂದು ಮತದಿಂದ ಅವರ ಗೆಲುವು ಅಸಾಧ್ಯವೆಂಬ ಪರಿಜ್ಞಾನ ನನಗಿದೆ. ನಾನು ಪಕ್ಷಕ್ಕೆ ನಿಷ್ಟನಾಗಿದ್ದೇನೆ. ಹಾಗಂತ ನನಗೆ ಯಾರ ಬಗೆಗೂ ಭಯ, ಆತಂಕಗಳಿಲ್ಲ. ನನ್ನ ಕುರಿತು ಆಕ್ಷೇಪಿಸುವವರು ಉತ್ತರ ಪ್ರದೇಶ, ಹಿಮಾಚಲ ಪ್ರದೇಶದಲ್ಲಿ ಇದೇ ಚುನಾವಣೆ ಹೇಗೆ ನಡೆದಿದೆ ಎಂಬುದನ್ನು ಅವಲೋಕಿಸಬೇಕು. ಈ ದೃಷ್ಟಿಯಿಂದ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳಿಂದ ಜನರಿಗೆ ಮತ್ತಷ್ಟು ಗೊಂದಲವಾಗಬಾರದೆಂಬ ಉದ್ದೇಶದಿಂದ ಈ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ಹೆಬ್ಬಾರ್‌ ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ