ಸಭೆಯಲ್ಲಿ ಕುಂದುಕೊರತೆಗೆ ಸಂಬಂಧಿಸಿದ 48 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಕಂದಾಯ ದುರಸ್ತಿ, ಹಕ್ಕುಪತ್ರ ವಿತರಿಸುವುದು, ಮನೆ ದಾಖಲಾತಿ, ಅಕ್ರಮ ಸಕ್ರಮ, ಜಾಗ ಅತಿಕ್ರಮಣ ತೆರವುಗೊಳಿಸುವುದು, ಜಮೀನಿಗೆ ತೆರಳಲು ದಾರಿ ಬಿಡಿಸುವುದು, ಸಮಾಜ ಕಲ್ಯಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪೊಲೀಸ್, ಕೃಷಿ, ಆಹಾರ, ಸೆಸ್ಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹೀಗೆ ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 40 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿ, ಹಕ್ಕುಪತ್ರ, ನಿವೇಶನ ಒದಗಿಸುವುದು, ಮನೆ ನಿರ್ಮಾಣ, ಕೃಷಿ ಭೂಮಿ ಅತಿಕ್ರಮಣ ಮಾಡಿಕೊಂಡಿರುವುದು ಸಭೆಯಲ್ಲಿ ಹೆಚ್ಚಾಗಿ ಕೇಳಿಬಂದವು. ಈ ಸಂದರ್ಭ ಮಾತನಾಡಿದ ಕುಂಬೂರಿನ ಸೋಮಪ್ಪ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹಲವು ಸಮಸ್ಯೆಗಳಿದ್ದು, ಇವುಗಳನ್ನು ಪರಿಹರಿಸಬೇಕು. ಇಂದಿಗೂ ಸಹ ನಿವೇಶನ ಹಾಗೂ ಹಕ್ಕುಪತ್ರ ಇಲ್ಲದೆ ಮನೆ ನಿರ್ಮಾಣ ಕಷ್ಟವಾಗಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು ಎಂದು ಕೋರಿದರು. ಭೂಮಿ ಇರುವವರಿಗೆ ಹಕ್ಕುಪತ್ರ ನೀಡಬೇಕು. ಭೂಮಿ ಅತಿಕ್ರಮಣ ಮಾಡಿಕೊಂಡಿರುವವರನ್ನು ತೆರವುಗೊಳಿಸಬೇಕು. ಪರಿಶಿಷ್ಟರು ಇತರರಂತೆ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಬೇಕು ಎಂದು ಕೋರಿದರು. ಬಸವಯ್ಯ ಅವರು ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಇಂದಿಗೂ ಸಹ ಸಂಕಷ್ಟದಲ್ಲಿ ಜೀವನ ದೂಡುತ್ತಿದ್ದು, ಇವರಿಗೆ ಕನಿಷ್ಠ ಮೂಲ ಸೌಲಭ್ಯವನ್ನಾದರೂ ಒದಗಿಸಬೇಕು ಎಂದು ಅವರು ಮನವಿ ಮಾಡಿದರು. ಕೊಡ್ಲಿಪೇಟೆ, ಶನಿವಾರಸಂತೆ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟರು ಇದ್ದು, ಈ ಜನರಿಗೆ ನಿವೇಶನ ಹಾಗೂ ಜಮೀನು ಒದಗಿಸಬೇಕು. ಆ ನಿಟ್ಟಿನಲ್ಲಿ ಸಮಸ್ಯೆಗಳನ್ನು ಪರಿಹರಿಸುವಂತಾಗಬೇಕು ಎಂದು ಕೋರಿದರು. ಉದಯ ಕುಮಾರ್ ಅವರು ಮಾತನಾಡಿ ಪರಿಶಿಷ್ಟರ ಶ್ರೇಯೋಭಿವೃದ್ಧಿಗೆ ಪೊಲೀಸ್ ಇಲಾಖೆಯ ಪಾತ್ರ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯವರು ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಿದ್ದಲ್ಲಿ ಹಲವು ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ. ಆ ನಿಟ್ಟಿನಲ್ಲಿ ನಡೆದುಕೊಳ್ಳುವಂತಾಗಬೇಕು ಎಂದು ಕೋರಿದರು. ಆರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಹಸೀಲ್ದಾರ್ ಮತ್ತು ತಾ.ಪಂ.ಇಒಗಳು ತಿಂಗಳಿಗೊಮ್ಮೆಯಾದರೂ ಪರಿಶಿಷ್ಟರ ಕುಂದುಕೊರತೆ ಸಭೆ ಏರ್ಪಡಿಸುವಂತಾಗಬೇಕು ಹಾಗಾದಲ್ಲಿ ಮಾತ್ರ ಆ ಸಮಾಜದ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಬಹುದು ಎಂದು ಸೂಚಿಸಿದರಲ್ಲದೇ ಸಭೆಯಲ್ಲಿ ತಿಂಗಳಿಗೊಮ್ಮೆ ಸಭೆ ನಡೆಸಲು ನಿರ್ದೇಶನ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್, ತಹಸೀಲ್ದಾರರಾದ ಕೃಷ್ಣಮೂರ್ತಿ, ಕಿರಣ್ ಗೌರಯ್ಯ, ತಾ.ಪಂ.ಇಒ ಪರಮೇಶ್ ಅವರು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು. ತಾಲೂಕು ಮಟ್ಟದ ಅಧಿಕಾರಿಗಳು, ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನ ಸಾರ್ವಜನಿಕರು ಪಾಲ್ಗೊಂಡು ಲಿಖಿತವಾಗಿ ಮಾಹಿತಿ ನೀಡಿ ಗಮನ ಸೆಳೆದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.