ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಕಾಡು ಬೆಳೆಸಿ-ನಾಡು ಉಳಿಸಿ... ಅರಣ್ಯ ನಾಶ ಮಾಡಬೇಡಿ... ಹೆಚ್ಚಿನ ಗಿಡ ಮರಗಳನ್ನು ನೆಟ್ಟು ಪೋಷಿಸಿ.... ಹೀಗೆ ಹತ್ತಾರು ಬಗೆಯ ಸಂದೇಶ ಸಾರುವ ಬಗೆ ಬಗೆಯ ಮಕ್ಕಳು ಬಿಡಿಸಿದ ವರ್ಣಚಿತ್ರಗಳು ಗಮನ ಸೆಳೆಯಿತು.ಕನ್ನಡಪ್ರಭ ಅರ್ಪಿಸುವ ಶನಿವಾರಸಂತೆ ಸುಪ್ರಜ ಗುರುಕುಲ ಆಂಗ್ಲಮಾಧ್ಯಮ ಶಾಲೆ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಮಂಗಳವಾರ ಸುಪ್ರಜ ಗುರುಕುಲ ಆಂಗ್ಲಮಾಧ್ಯಮ ಶಾಲೆಯಲ್ಲಿ ಚಿಣ್ಣರು ಅರಣ್ಯ, ವನ್ಯಜೀವಿ ಕುರಿತಂತೆ ವಿವಿಧ ಚಿತ್ರಗಳನ್ನು ರಚಿಸುವ ಮೂಲಕ ಅರಣ್ಯದ ಮಹತ್ವದ ಬಗ್ಗೆ ಸಂದೇಶ ಸಾರಿದರು.
ಕನ್ನಡಪ್ರಭ ಆಯೋಜಿಸಿದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಗೆ ಮೆಚ್ಚುಗೆ ವ್ಯಕ್ತವಾಯಿತು. ಸ್ಪರ್ಧೆಯಲ್ಲಿ ಸೋಮವಾರಪೇಟೆ ತಾಲೂಕಿನ ವಿವಿಧ ಶಾಲೆಯ ಸುಮಾರು 60ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಪ್ರತಿಭೆ ಅನಾವರಣಗೊಳಿಸಿದರು.4 ಮತ್ತು 5ನೇ ತರಗತಿ, 6 ಮತ್ತು 7 ಹಾಗೂ 8ರಿಂದ 10 ನೇ ತರಗತಿ ವರೆಗೆ ಮೂರು ವಿಭಾಗದಲ್ಲಿ ಸ್ಪರ್ಧೆಗಳು ನಡೆದಿದ್ದು, ವಿದ್ಯಾರ್ಥಿಗಳು ಉತ್ಸುಕತೆಯಿಂದ ಪಾಲ್ಗೊಂಡರು.
ಸ್ಪರ್ಧೆಯಲ್ಲಿ ಭಾಗವಹಿಸುವು ಮುಖ್ಯ:ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಶನಿವಾರಸಂತೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸರ್ದಾರ್ ಅಹಮದ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕನ್ನಡಪ್ರಭ ಪತ್ರಿಕೆ ಈ ಚಿತ್ರಕಲಾ ಸ್ಪರ್ಧೆ ಆಯೋಜಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಮೊದಲು ಸ್ಪರ್ಧೆಯಲ್ಲಿ ಭಾಗವಹಿಸುವು ಮುಖ್ಯ. ಗೆಲುವು-ಸೋಲು ಮುಖ್ಯವಲ್ಲ ಎಂದು ಕರೆ ನೀಡಿದರು.
ಶನಿವಾರಸಂತೆ ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಎನ್ ರಘು ಮಾತನಾಡಿ ವನ್ಯಜೀವಿ ಸಂರಕ್ಷಣಾ ಬಗ್ಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳು ನಾಡಿಗೆ ಯಾಕೆ ಬರುತ್ತಿದೆ ಎಂಬುದರ ಬಗ್ಗೆ ಚಿಂತಿಸಬೇಕಾಗಿದೆ. ಮನುಷ್ಯ ಸ್ವಾರ್ಥದಿಂದ ತನ್ನ ತನವನ್ನು ಕಳೆದುಕೊಳ್ಳುತ್ತಿದ್ದಾನೆ. ಅರಣ್ಯದಲ್ಲೇ ಆಹಾರ ಹಾಗೂ ನೀರು ವನ್ಯಜೀವಿಗಳಿಗೆ ದೊರಕಬೇಕು. ಅರಣ್ಯದಲ್ಲಿ ನೀಲಗಿರಿ, ಅಕೇಶಿಯ ಮರಗಳನ್ನು ಬೆಳೆದು ಪ್ರಾಣಿಗಳಿಗೆ ಆಹಾರ ಇಲ್ಲದಂತಾಗಿದೆ. ಆದ್ದರಿಂದ ಕಾಡಿನಲ್ಲೇ ಆಹಾರ ಸಿಗುವಂತಹ ವಾತಾವರಣ ಸೃಷ್ಟಿ ಮಾಡಬೇಕಿದೆ ಎಂದರು.ಪ್ಲಾಸ್ಟಿಕ್ ಬಳಸದಂತೆ ಕರೆ:
ಅರಣ್ಯ ಇಲಾಖೆಯ ಡಿ.ಆರ್.ಎಫ್.ಓ ಪುನಿತ್ ಮಾತನಾಡಿ ಹೆಚ್ಚುತ್ತಿರುವ ಅರಣ್ಯ ನಾಶ, ಒತ್ತುವರಿಯಿಂದ ಕಾಡಿನಿಂದ ವನ್ಯಪ್ರಾಣಿಗಳು ನಾಡಿಗೆ ಬರುತ್ತಿವೆ. ಜಾಗತಿಕ ತಾಪಮಾನವು ಹೆಚ್ಚಾಗುತ್ತಿದೆ. ಹವಮಾನ ವೈಪರೀತ್ಯಗಳು ಸಂಭವಿಸುತ್ತಿದೆ. ಪ್ಲಾಸ್ಟಿಕ್ ಬಳಕೆ ಅರಣ್ಯದ ಮೇಲೆ ಗಂಭೀರ ಪರಿಣಮ ಬೀರುತ್ತಿದೆ. ಆದ್ದರಿಂದ ಪ್ಲಾಸ್ಟಿಕ್ ಬಳಸದಂತೆ ಕರೆ ನೀಡಿದರು.ಶಿಕ್ಷಣ ಇಲಾಖೆಯ ಸಿ.ಆರ್ .ಪಿ ದಿನೇಶ್ ಮಾತನಾಡಿ ಕನ್ನಡಪ್ರಭ ಪತ್ರಿಕೆ ಮಕ್ಕಳಲ್ಲಿ ಇಂತಹ ಚಟುಚಟಿಕೆ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಪರಿಸರವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದರು.
ಸುಪ್ರಜ ಗುರುಕುಲ ಸಂಸ್ಥೆಯ ಮುಖ್ಯಸ್ಥೆ ಸುಜಲಾ ದೇವಿ ಮಾತನಾಡಿ ನಮ್ಮ ಶಾಲೆಯಲ್ಲಿ ಕನ್ನಡಪ್ರಭ ಪತ್ರಿಕೆಯಿಂದ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಅರಣ್ಯದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅನಿವಾರ್ಯವಾಗಿದೆ ಎಂದು ಹೇಳಿದರು.ದುಂಡಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಅಬ್ಬಾಸ್ ಮಾತನಾಡಿ ಇದೊಂದು ಉತ್ತಮ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು. ಇದರಿಂದ ಈಗಿನ ವಿದ್ಯಾರ್ಥಿಗಳಿಗೆ ಅರಣ್ಯದ ಬಗ್ಗೆ ಕಾಳಜಿ ಬರುತ್ತದೆ ಎಂದರು.ಕಾರ್ಯಕ್ರಮದಲ್ಲಿ ಪ್ರಶಸ್ತಿಗೆ ಭಾಜನರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕುವೆಂಪು ವಿದ್ಯಾಸಂಸ್ಥೆಯ ಉಪನ್ಯಾಸಕ ಲಾಂಚನ್ ಮತ್ತಿತರರು ಪಾಲ್ಗೊಂಡಿದ್ದರು.
ಕನ್ನಡಪ್ರಭ ಜಿಲ್ಲಾ ವರದಿಗಾರ ವಿಘ್ನೇಶ್ ಭೂತನಕಾಡು ಪ್ರಾಸ್ತಾವಿಕ ಮಾತನಾಡಿ, ಸೋವಾರಪೇಟೆ ತಾಲೂಕು ವರದಿಗಾರ ಎಸ್.ಎ. ಮುರುಳೀಧರ್ ನಿರೂಪಿಸಿ, ಶನಿವಾರಸಂತೆ ವರದಿಗಾರ ಹೆಚ್.ಆರ್. ಹರೀಶ್ ಕುಮಾರ್ ಸ್ವಾಗತಿಸಿದರು.ವನ್ಯಜೀವಿ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೆ ಅರಣ್ಯ ಇಲಾಖೆಯು ಸಹಕಾರ ನೀಡಿದೆ. ಮಕ್ಕಳಲ್ಲಿ ಪರಿಸರ ಪ್ರೇಮ ಹೆಚ್ಚಾಗಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ.-ಪುನಿತ್ , ಡಿ.ಆರ್.ಎಫ್.ಓ ಅರಣ್ಯ ಇದ್ದರೆ ಮಾತ್ರ ನಾವು ಉಳಿಯಲು ಸಾಧ್ಯ. ಆದ್ದರಿಂದ ಅರಣ್ಯ ಉಳಿಸುವಲ್ಲಿ ಮಕ್ಕಳ ಪಾತ್ರ ಕೂಡ ಪ್ರಮುಖವಾಗಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶವಿದೆ. ಮಕ್ಕಳು ಇಂತಹ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕು.
-ಸುಜಲಾ ದೇವಿ, ಮುಖ್ಯಸ್ಥೆ ಸುಪ್ರಜ ಗುರುಕುಲ ವಿದ್ಯಾಸಂಸ್ಥೆ ಶನಿವಾರಸಂತೆ ಚಿತ್ರಕಲಾ ಸ್ಪರ್ಧಾ ವಿಜೇತರುಸೋಮವಾರಪೇಟೆ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯ 4 ಮತ್ತು 5ನೇ ತರಗತಿ ವಿಭಾಗದಲ್ಲಿ ಕೊಡ್ಲಿಪೇಟೆ ಎಸ್.ಕೆ.ಎಸ್. ಕಲ್ಮಠ ಶಾಲೆಯ ಮೊಹಮ್ಮದ್ ಝೈಮ್ (ಪ್ರ), ಶನಿವಾರಸಂತೆ ಶ್ರೀ ವಿಘ್ನೇಶ್ವರ ಗೋಲ್ಡನ್ ಶಾಲೆಯ ಎಂ. ಆರ್. ಕನ್ನಿಕಾ(ದ್ವಿ), ಸುಪ್ರಜ ಗುರುಕುಲ ಆಂಗ್ಲಮಾಧ್ಯಮ ಶಾಲೆಯ ಬಿ.ಡಿ. ಧನ್ಯ(ತೃ), ಕೆ.ಎಸ್. ಕೌಶಿಕ್ ಹಾಗೂ ಕೊಡ್ಲಿಪೇಟೆ ಸೇಂಟ್ ಆನ್ಸ್ ಶಾಲೆಯ ಎಂ.ವಿ. ಆಯುಷ್ ಗೌಡ ಸಮಾಧಾನಕರ ಬಹುಮಾನ ಪಡೆದುಕೊಂಡರು.
6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಕೊಡ್ಲಿಪೇಟೆ ಸೆಂಟ್ ಆನ್ಸ್ ಶಾಲೆಯ ಕೆ.ವೈ. ನೌಶಿಯ(ಪ್ರ), ಎಸ್.ಕೆ.ಎಸ್. ಕಲ್ಮಠ ಶಾಲೆಯ ಅಕ್ಷತಾ ಎಸ್. (ದ್ವಿ), ಕೊಡ್ಲಿಪೇಟೆ ಸೇಂಟ್ ಆನ್ಸ್ ಶಾಲೆಯ ಕೆ.ಡಿ. ದಿಶಾ(ತೃ), ಸುಪ್ರಜ ಗುರುಕುಲ ಶಾಲೆಯ ತೇಜಸ್ ಗೌಡ ಡಿ ಹಾಗೂ ಕಾವೇರಿ ವಿದ್ಯಾಸಂಸ್ಥೆಯ ಸಮೃದ್ಧಿ ಪಿ.ಗೌಡ ಸಮಾಧಾನಕರ ಬಹುಮಾನ ಪಡೆದುಕೊಂಡರು.8ರಿಂದ 10ನೇ ತರಗತಿ ವರೆಗೆ ನಡೆದ ಸ್ಪರ್ಧೆಯಲ್ಲಿ ಭಾರತಿ ವಿದ್ಯಾಸಂಸ್ಥೆಯ ಮೊಹಮ್ಮದ್ ಸಫೀರ್ (ಪ್ರ), ವಿಘ್ನೇಶ್ವರ ಬಾಲಿಕ ಪ್ರೌಢಶಾಲೆಯ ಅಜ್ಮಿಯಾ ಎ.(ದ್ವಿ), ವಿಘ್ನೇಶ್ವರ ಗೋಲ್ಡನ್ ಶಾಲೆಯ ಎಂ.ಪಿ. ಲಕ್ಷ್ಯ(ತೃ), ಕೊಡ್ಲಿಪೇಟೆಯ ಸೇಂಟ್ ಆನ್ಸ್ ಶಾಲೆಯ ಸೂರಜ್ ಹಾಗೂ ಸುಪ್ರಜ ಗುರುಕುಲ ಶಾಲೆಯ ಎಂ.ವಿ. ಯಶಸ್ ಸಮಾಧಾನಕರ ಬಹುಮಾನ ಗಳಿಸಿದರು.