ಕನ್ನಡಪ್ರಭ ವಾರ್ತೆ ಶಿವಮೊಗ್ಗ/ ಭದ್ರಾವತಿ
ಚರಕ ಸುತ್ತಿದವನ ಬಗ್ಗೆ (ಗಾಂಧೀಜಿ) ತಿರಸ್ಕಾರ ಮಾಡುವಷ್ಟು ಕೆಲವರ ಮನಸ್ಸುಗಳು ಕುಬ್ಜಗೊಂಡಿವೆ ಎಂದು ತುಮಕೂರು ವಿವಿಯ ಉಪನ್ಯಾಸಕ ಪ್ರೊ.ನಿತ್ಯಾನಂದ ಬಿ.ಶೆಟ್ಟಿ ಹೇಳಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನದ ವತಿಯಿಂದ ಆಚರಿಸುತ್ತ ಬಂದಿರುವ ಗಾಂಧಿ ಜಯಂತಿಯ 77ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಾಂಧೀಜಿಯವರನ್ನು ಇತ್ತೀಚಿಗೆ ಕಡೆಗಾಣಿಸುತ್ತಿರುವುದು ನೋವಿನ ಸಂಗತಿ ಯಾಗಿದೆ.ಹಲವು ಮನಸ್ಸುಗಳು ಗಣ್ಯ ವ್ಯಕ್ತಿಗಳನ್ನು ಕುಬ್ಜಗೊಳಿಸುತ್ತಿದ್ದಾರೆ. ಪ್ರಪಂಚದ ಸಂಕಟಗಳನ್ನು ನೋಡದಿರುವವರಿಗೆ ಆನಂದ ಹುಟ್ಟಲು ಸಾಧ್ಯವಿಲ್ಲ. ದುಃಖಗಳನ್ನು ಗುರುತಿಸುವ ಶಕ್ತಿಯಿರಬೇಕು. ಅದು ಬುದ್ಧನಿಗೆ ಇತ್ತು ಮತ್ತು ಗಾಂಧೀಜಿಯವರಿಗಿತ್ತು ಎಂದರು.
ದೇಶ ವಿಭಜನೆಯಾದಾಗ ಗಾಂಧೀಜಿಯವರು ಮುಸ್ಲಿಂ ಸಮುದಾಯದ ಪರವಾಗಿ ೫ ಪ್ರಮುಖ ಬೇಡಿಕೆಗಳನ್ನು ಇಟ್ಟು ಉಪವಾಸಕ್ಕೆ ಕೂತಿದ್ದರು. ಅದನ್ನು ಆಗಲೂ ಹಲವರು ಜೀರ್ಣಿಸಿಕೊಳ್ಳಲಿಲ್ಲ, ಈಗಲೂ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಇದು ರಾಜಕೀಯ ಸೂಕ್ಷ್ಮ ಪ್ರಸಂಗ ಎನ್ನುವುದು ಅರ್ಥವಾಗುವುದಿಲ್ಲ. ಆಳುವವರಿಗೆ ರಾಜಧರ್ಮ ಇರಬೇಕು ಎಂದು ಹೇಳಿದರು.ಮಾದ್ರಿಯ ಮಕ್ಕಳು ಇಂದಿಗೂ ಇದ್ದಾರೆ. ಸಂಕಟಗಳು, ಸಂತ್ರಸ್ತರು, ಶೋಷಿತರು, ಧ್ವನಿಕಳೆದುಕೊಂಡವರು, ಮುಟ್ಟಿಸಿಕೊಳ್ಳದವರು ಇವರಿಗೆಲ್ಲ ಗಾಂಧೀಜಿಯವರ ಆದರ್ಶಗಳೇ ಬೇಕಾಗುತ್ತದೆ. ಸನಾತನ ಧರ್ಮ ಸೇರಿದಂತೆ ಎಲ್ಲಾ ಧರ್ಮಗಳ ಸಾರವೂ ಗಾಂಧಿಯ ತತ್ವದಲ್ಲೇ ಅಡಗಿದೆ ಎಂದರು.
ಕಾರ್ಯಕ್ರಮದಲ್ಲಿ ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪಿ.ವಾಸುದೇವ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲರಾದ ಡಾ. ಗಾಯತ್ರಿ ಸಜ್ಜನ್, ಗಾಂಧೀಜಿಯವರ ದೃಷ್ಠಿಯಲ್ಲಿ ಮಹಿಳೆಯರು ಕುರಿತಂತೆ ಉಪನ್ಯಾಸ ನೀಡಿದರು.ಇದೇ ಸಂದರ್ಭದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಯ ಕೆ.ವಿ.ವಸಂತಕುಮಾರ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅನುಷಾ ಸ್ವಾಗತಿಸಿದರು. ಕೆ.ಸಿ.ಜಯಣ್ಣ ಪ್ರಾಸ್ತಾವಿಕ ಮಾತನಾಡಿದರು. ಎಸ್.ಬಿ.ಅಶೋಕ್‌ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಎಸ್.ಬಿ.ಸತೀಶ್ ವಂದಿಸಿದರು. ಗಾಂಧಿಬಸಪ್ಪ ಕುಟುಂಬದವರು ಪ್ರಾರ್ಥನಾಗೀತೆ ಹಾಡಿದರು.ವಿಐಎಸ್‌ಎಲ್ ಸೇರಿ ವಿವಿಧೆಡೆ ರಾಷ್ಟ್ರಪಿತನ ಸ್ಮರಣೆ
ಭದ್ರಾವತಿ: ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಬಿಜೆಪಿ ತಾಲೂಕು ಮಂಡಲ, ಲಯನ್ಸ್ ಕ್ಲಬ್ ಶುಗರ್ ಟೌನ್, ಬಿಪಿಎಲ್ ಸಂಘ ಸೇರಿದಂತೆ ವಿವಿಧೆಡೆ ಬುಧವಾರ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಆಚರಿಸಲಾಯಿತು.ನ್ಯೂಟೌನ್ ವಿಐಎಸ್‌ಎಲ್ ಭದ್ರಾ ಅತಿಥಿ ಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿಜೀಯವರ ಭಾವಚಿತ್ರಕ್ಕೆ ಪುಷ್ಪನಮನ, ನಂತರ ವಿಶೇಷವಾಗಿ ಈ ಬಾರಿ ಮಕ್ಕಳಿಂದ ಧರ್ಮ ಗ್ರಂಥಗಳಾದ ಭಗವದ್ಗೀತೆ, ಕುರಾನ್ ಮತ್ತು ಬೈಬಲ್ ಸಂದೇಶ ವಾಚನ ನಡೆಯಿತು.ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ, ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರಾ, ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್ ಮತ್ತು ರವಿಚಂದ್ರನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳಾದ ಎಲ್. ಪ್ರವೀಣ್‌ಕುಮಾರ್, ಮೋಹನ್‌ರಾಜ್ ಶೆಟ್ಟಿಪಾಲ್ಗೊಂಡಿದ್ದರು.
ಬಿಜೆಪಿ ಮಂಡಲದಿಂದ ಜಯಂತಿ:ಮಂಡಲದ ಅಧ್ಯಕ್ಷ ಜಿ.ಧರ್ಮಪ್ರಸಾದ್ ನೇತೃತ್ವದಲ್ಲಿ ಗಾಂಧಿಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನದ ಪ್ರಯುಕ್ತ ಹಾಗೂ ಸೇವಾ ಪಾಕ್ಷಿಕ ಅಂಗವಾಗಿ ನಗರದ ತರೀಕೆರೆ ರಸ್ತೆಯ ಮಹಾತ್ಮ ಗಾಂಧಿ ವೃತ್ತದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಖಾದಿ ಗ್ರಾಮೋದ್ಯೋಗ ಭವನದಲ್ಲಿ ಖಾದಿ ಖರೀದಿಸಲಾಯಿತು.ಪ್ರಧಾನ ಕಾರ್ಯದರ್ಶಿಗಳಾ ಚನ್ನೇಶ್ ಮತ್ತು ಮೊಸರಳ್ಳಿ ಅಣ್ಣಪ್ಪ, ಮುಖಂಡರಾದ ಮಂಗೋಟೆ ರುದ್ರೇಶ್, ಎಚ್.ತೀರ್ಥಯ್ಯ, ರಾಜಶೇಖರ್ ಉಪ್ಪಾರ, ಧನುಷ್ ಬೋಸ್ಲೆ, ಜಿ. ಆನಂದ್‌ಕುಮಾರ್, ಸರಸ್ವತಿ, ರವಿಕುಮಾರ್, ರಘುರಾವ್, ನಿರಂಜನ್ ಗೌಡ, ಕಾ.ರಾ ನಾಗರಾಜ್, ಸುಲೋಚನಾ ಪ್ರಕಾಶ್, ಮಂಜುಳಾ, ಡಾ. ಜಿ.ಎಂ ನಟರಾಜ್, ಬಸವರಾಜ್ ಆಚಾರ್ ಪಾಲ್ಗೊಂಡಿದ್ದರು.ಶುಗರ್ ಟೌನ್‌ನಲ್ಲೂ ಕಾರ್ಯಕ್ರಮ:
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ೧೫೫ನೇ ಜನ್ಮದಿನ ಹಾಗು ಲಾಲ್ ಬಹದ್ದೂರ್ ಶಾಸ್ತ್ರಿಯವರ ೧೨೦ನೇ ಜನ್ಮದಿನ ನಗರದ ನ್ಯೂಟೌನ್ ಲಯನ್ಸ್ ಕ್ಲಬ್ ಶುಗರ್ ಟೌನ್ ಸಮುದಾಯ ಭವನದಲ್ಲಿ ಆಚರಿಸಲಾಯಿತು.ಕ್ಲಬ್ ಆವರಣದಲ್ಲಿರುವ ಕೋಟಾ ಶಿವರಾಮ ಕಾರಂತ ವನದಲ್ಲಿ ಶ್ರಮದಾನ ನಡೆಸಲಾಯಿತು. ಅಂತರಾಷ್ಟ್ರೀಯ ಹಿರಿಯ ನಾಗರಿಕ ದಿನಾಚರಣೆ ಅಂಗವಾಗಿ ಕ್ಲಬ್ ಮಹಾಪೋಷಕರಾದ ಡಾ.ಟಿ.ನರೇಂದ್ರ ಭಟ್, ಕೆ.ಅನಂತ ಕೃಷ್ಣನಾಯಕ್ ಮತ್ತು ಮದಿಯಲಗನ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕ್ಲಬ್ ಅಧ್ಯಕ್ಷ ಆರ್. ಉಮೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮೇಗೌಡ, ಎಂ.ಸಿ ಯೋಗೀಶ್ ಇನ್ನಿತರರು ಪಾಲ್ಗೊಂಡಿದ್ದರು.ಬಿಪಿಎಲ್ ಸಂಘದಿಂದ ಜಯಂತಿ:
ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಪ್ರಜಾ ವಿಮೋಚನಾ ಸಂಘ(ಬಿಪಿಎಲ್)ದಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ಆಚರಿಸಲಾಯಿತು. ಸಂಘದ ಅಧ್ಯಕ್ಷ ಬಿ. ಜಗದೀಶ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮಕ್ಳಳು, ಸಂಘದ ಪದಾಧಿಕಾರಿಗಳು, ನಿರ್ದೇಶಕರು ಹಾಗು ಸ್ಥಳೀಯರು ಪಾಲ್ಗೊಂಡಿದ್ದರು.