ಬಸವ ಜಯಂತಿ । ಆಶಾ ಕಾರ್‍ಯಕರ್ತೆಯರಿಗೆ ಗೌರವ । ಬಸವೇಶ್ವರ ಬಳಗ ಆಯೋಜನೆ
ಕನ್ನಡಪ್ರಭ ವಾರ್ತೆ ಮಲೇಬೆನ್ನೂರುಹನ್ನೆರಡನೇ ಶತಮಾನದ ಕ್ರಾಂತಿಪುರುಷ ಬಸವೇಶ್ವರರನ್ನು ಕೆಲವರು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಳ್ಳಲು ಹವಣಿಸುತ್ತಿದ್ದು, ಕಮುನಿಸ್ಟ್ ಮಾಡಲು ಹೊರಟಿದ್ದಾರೆ ಎಂದು ವಿಜಯಪುರ ಶಾಸಕ ಬಸವನಗೌಡ ಯತ್ನಾಳ್ ಆರೋಪಿಸಿದರು.
ಸಮೀಪದ ದೇವರಬೆಳಕರೆ ಗ್ರಾಮದಲ್ಲಿ ಬಸವೇಶ್ವರ ಬಳಗ ಹಮ್ಮಿಕೊಂಡ ಬಸವೇಶ್ವರರ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ಅಖಿಲ ಭಾರತ ಮಹಾಸಭಾ ಎಂಬುದು ಒಂದು ಕುಟುಂಬದ ಗ್ಯಾಂಗ್ ಆಗಿದೆ. ಅವರಿಂದ ಸನಾತನ ಉಳಿಸಲು ಸಾಧ್ಯವಿಲ್ಲ. ಭಾತ ಉಳಿಯಲು ಸನಾತನ ಧರ್ಮ ಉಳಿಸಬೇಕು ಎಂದು ಹೇಳಿದರು.ನಾನು ಮತ್ತು ಕೆಎಸ್ ಈಶ್ವರಪ್ಪನವರು ಒಂದಾಗಿ ಆಡಳಿತ ಚುಕ್ಕಾಣಿ ಹಿಡಿದು ಒಟ್ಟಾಗಿ ಈ ನಾಡಿನಲ್ಲಿ ಡಾ,ಅಂಬೇಡ್ಕರ್ ಮತ್ತು ಬಸವಣ್ಣನವರ ವಿಚಾರಗಳನ್ನು ಹರಡುವ ಕಾರ್ಯ ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ಅರ್ಹತೆ ಇರುವವರಿಗೆ ಕೋಟಿ ರು. ಲಂಚೆ ಪಡೆಯುವ ದುರದೃಷ್ಟ ಪರಿಸ್ಥಿತಿ ಇದೆ. ಪ್ರಸ್ತುತ ಲಂಚಮುಕ್ತ ಲೋಕಸೇವಾ ಆಯೋಗದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ರಾಜ್ಯದಲ್ಲಿ ಹಿಂದೂಗಳ ಹತ್ಯೆಯಾದರೆ ೧೦ ಲಕ್ಷ ರು., ಬೇರೆ ರಾಜ್ಯದಲ್ಲಿ ಹತ್ಯೆಯಾದರೆ ೨೫ ಲಕ್ಷ ರು. ಪರಿಹಾರ ನೀಡಿದರೆ, ಯಾವ ನ್ಯಾಯ ಸ್ವಾಮಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಶ್ನಿಸಿದ ಅವರು, ಹಿಂದೂ ಸಂಸ್ಕೃತಿ ಮತ್ತು ಧರ್ಮ ಒಡೆಯಲು ರಾಜಕಾರಣ ನಡೆಯುತ್ತಿರುವುದು ಮೇಲೆಯೇ ಗೋಚರಿಸುತ್ತಿದೆ ಎಂದು ದೂರಿದರು.
ಬಸವೇಶ್ವರರು ಎಂದೂ ತಮ್ಮ ಜೀವನದಲ್ಲಿ ಜಾತಿ ನೋಡಲಿಲ್ಲ, ಸಮಾನತೆಯನ್ನು ಜಾಗೃತಿಗೊಳಿಸಿದರು. ಭಾರತದ ಭೂಪಟದಲ್ಲಿ ಭಾರತಕ್ಕೆ ಮಾತ್ರ ಸ್ಥಾನ, ಉಗ್ರವಾದಕ್ಕೆ ಪ್ರೋತ್ಸಾಹ ನೀಡುವ, ಹಿಂದೂಗಳನ್ನು ಕೊಲೆ ಮಾಡುವ ಪಾಕಿಸ್ಥಾನಕ್ಕೆ ಕೆಲ ದಿನಗಳಲ್ಲಿ ಹೆಸರಿಲ್ಲವಾಗಲಿದೆ ಎಂದು ಭವಿಷ್ಯ ನುಡಿದರು.ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಬಸವೇಶ್ವರರ ಜಯಂತಿಗಳು ಹಿಂದೆ ಬಸವಕಲ್ಯಾಣ, ವಿಜಯಪುರ, ಊಟಿಯಲ್ಲಿ ಮಾತ್ರ ಜರುಗುತ್ತಿದ್ದವು. ಮಧ್ಯ ಕರ್ನಾಟಕದಲ್ಲಿ ಶರಣ ಹರ್ಡೇಕರ್ ಮಂಜಪ್ಪನವರು ಬಸವ ಜಯಂತಿಗೆ ಚಾಲನೆ ನೀಡಿದ್ದು ೧೩೦ ವರ್ಷಗಳ ನಂತರ ದೇವರಬೆಳಕೆರೆಯಲ್ಲಿ ಅದ್ಧೂರಿಯಾಗಿ ನಡೆದಿದೆ ಎಂದರು.
ಈ ನಾಡಿಗೆ ಬಸವಣ್ಣನವರು ಅನ್ನ ಮತ್ತು ಜ್ಞಾನವನ್ನು ನೀಡಿ, ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಿ ಸಂಸ್ಕೃತಿ ಮತ್ತು ಸಮಾಜವನ್ನು ಒಂದು ಮಾಡುವ ಮೂಲಕ ಬೆಳಕಾಗಿದ್ದಾರೆ. ಡಾ ಅಂಬೇಡ್ಕರ್, ಬಸವಣ್ಣನವರು ಇಲ್ಲದಿದ್ದರೆ ಬಡತನ ಹೆಚ್ಚಾಗಿ ಎಲ್ಲರೂ ಮತಾಂತರ ಆಗುವ ಸನ್ನಿವೇಷ ಇತ್ತು ಎಂದು ವಿಷಾದಿಸಿದರು.ಆರಂಭದಲ್ಲಿ ಬಸವೇಶ್ವರರ ಮೂರ್ತಿಗೆ ಪುಷ್ಪಾರ್ಚನೆ ಮಾಡಲಾಯಿತು. ಆಶಾ ಕಾರ್ಯಕರ್ತೆಯರನ್ನು ಗೌರವಿಸಲಾಯಿತು. ಪೋಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಹೆಬ್ಬಾಳು ವಿರಕ್ತಮಠದ ಮಹಂತ ರುದ್ರೇಶ್ವರ ಸ್ವಾಮೀಜಿ, ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ, ಸೇಡಂ ಮಲ್ಲಿಕಾರ್ಜುನ್ ಸ್ವಾಮೀಜಿ, ಮಾಜಿ ಶಾಸಕ ಶಿವಶಂಕರ್, ವಿಜಯಕುಮಾರ್ ಗುರೂಜಿ, ಸಂದೀಪ್ ಗುರೂಜಿ, ಅಶೋಕ್, ನಟ ಪೃಥ್ವಿ, ಗೌರಿ, ಸಂಘಟಕ ವೀರೆಶ್, ಗ್ರಾಮದ ಮುಖಂಡ ಕರಿಬಸಪ್ಪ, ಶಿವಕುಮಾರ್ ಹಾಗೂ ನಾಲ್ಕು ಜಿಲ್ಲೆಗಳ ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದರು.೧೭-ಎಂಬಿಆರ್೧: ಮಲೇಬೆನ್ನೂರಿನಲ್ಲಿ ಬಸವೇಶ್ವರ ಬಳಗ ಹಮ್ಮಿಕೊಂಡ ಬಸವೇಶ್ವರರ ಜಯಂತ್ಯುತ್ಸವವನ್ನು ಶಾಸಕ ಬಸವನಗೌಡ ಯತ್ನಾಳ್ ಉದ್ಘಾಟಿಸಿದರು.