ಕನ್ನಡಪ್ರಭ ವಾರ್ತೆ ಉಡುಪಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ದಾಖಲೆಯ 15ನೇ ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಜನರ ಬೇಡಿಕೆಯ, ನಿರೀಕ್ಷಿತ ಯೋಜನೆಗಳು ಸಿಕ್ಕಿಲ್ಲ, ಆದರೆ ಅನಿರೀಕ್ಷಿತ ಕೆಲವು ಯೋಜನೆಗಳು ಸಿಕ್ಕಿವೆ.ಜಿಲ್ಲೆಯ ಪ್ರವಾಸೋದ್ಯಮಕ್ಕೆ ನಿರ್ದಿಷ್ಟ ಯೋಜನೆ, ಬಹುವರ್ಷಗಳ ಬೇಡಿಕೆಯಾದ ಸರ್ಕಾರಿ ಮೆಡಿಕಲ್ ಕಾಲೇಜು - ಎಂಜಿನಿಯರಿಂಗ್ ಕಾಲೇಜು ಇತ್ಯಾದಿಗಳು ಈ ಬಾರಿಯ ಬಜೆಟ್‌ನಲ್ಲಿ ಘೋಷಣೆಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದ್ಯಾವುದೂ ಆಗಿಲ್ಲ, ಎಂದಿನಂತೆ ಮೀನುಗಾರರಿಗೆ ಒಂದೆರಡು ಯೋಜನೆಗಳು ಸಿಕ್ಕಿವೆ.ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕ್ರಿಟಿಕಲ್ ಕೇರ್ ಸೆಂಟರ್‌ನ ಸ್ಥಾಪನೆ ಮತ್ತು ಸ್ತನ-ಗರ್ಭಕಂಠ ಕ್ಯಾನ್ಸರ್ ಪತ್ತೆಗೆ ಕ್ಯಾಲ್ಪೋಸ್ಕೋಪಿ ಉಪಕರಣಗಳು ಅಳವಡಿಕೆ ಘೋಷಿಸಲಾಗಿದೆ. ಆದರೆ ಅತ್ಯಂತ ಉಪಯುಕ್ತ, ಸ್ವಾಗತಾರ್ಹವಾದ ಈ ಯೋಜನೆಗಳಿಗೆ ಅನುದಾನವನ್ನು ಘೋಷಿಸಿಲ್ಲ.ಮಲ್ಪೆ ಬಂದರಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಬೋಟುಗಳನ್ನು ನಿಲ್ಲಿಸುವ ಬರ್ತ್ ಸ್ಥಾಪನೆ ಮಾಡುವುದಾಗಿಯೂ ಭರವಸೆ ನೀಡಲಾಗಿದೆ. ಹಂಗಾರಕಟ್ಟೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಹಡಗು ನಿರ್ಮಾಣ ಕೇಂದ್ರ ಆರಂಭಿಸುವುದಾಗಿಯೂ ಹೇಳಲಾಗಿದೆ. ಆದರೆ ಇವೆರಡೂ ಖಾಸಗಿ ಸಹಭಾಗಿತ್ವದಲ್ಲಿ ನಡೆಯುವ ಯೋಜನೆಗಳಾಗಿವೆ. ಆದ್ದರಿಂದ ಈ ಯೋಜನೆಗಳಿಗೂ ಸರ್ಕಾರ ಅನುದಾನ ಮೀಸಲಿಟ್ಟಿಲ್ಲ.ಜಿಲ್ಲೆಯ ಸಾರಿಗೆ ಇಲಾಖೆಯಲ್ಲಿ ಸಸುಜ್ಜಿತ ಚಾಲಕರ ಪರೀಕ್ಷಾ ಪಥದ ದೊಡ್ಡ ಕೊರತೆಯಿತ್ತು. ಇದೀಗ ಜಿಲ್ಲೆಯಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ಸ್ಥಾಪನೆಯ ಘೋಷಣೆ ಮಾಡಿರುವುದು ಕೂಡ ಸ್ವಾಗತಾರ್ಹವಾಗಿದೆ.ಉಡುಪಿ ನಗರಕ್ಕೆ ನೀರು ಪೂರೈಕೆ ಮಾಡುತ್ತಿರುವ ಸ್ವರ್ಣಾನದಿ ಮತ್ತು ಸಿದ್ಧಾಪುರದಲ್ಲಿರುವ ಏತ ನೀರಾವರಿ ಯೋಜನೆಗಳ ಪುನಶ್ಚೇತನ ಘೋಷಿಸಲಾಗಿದೆ. ತಕ್ಷಣ ಇದು ಜಾರಿಯಾದರೆ ಕುಡಿಯುವ ನೀರಮನ ಸಮಸ್ಯೆಗೆ ಉತ್ತರವಾಗಬಹುದು.* ಮೀನುಗಾರರಿಗೆ ಲಾಭಸಮುದ್ರದಲ್ಲಿ ಸಂಭವಿಸುವ ಅವಘಢಗಳ ಸಂದರ್ಭದಲ್ಲಿ ತುರ್ತು ಸ್ಪಂದನೆಗೆ ಸೀ ಆ್ಯಂಬ್ಯುಲೆನ್ಸ್, ಇದು ಮೀನುಗಾರರ ಬಹುಕಾಲದ ಬೇಡಿಕೆ, ಬಜೆಟ್‌ನಲ್ಲಿ ಇದಕ್ಕೆ 7 ಕೋಟಿ ರು. ಅನುದಾನ ಘೋಷಿಸಲಾಗಿದೆ.ಉಡುಪಿಯೂ ಸೇರಿದಂತೆ ಕರಾವಳಿಯ 3 ಜಿಲ್ಲೆಗಳಿಗೆ ಅನ್ವಯವಾಗುವಂತೆ ಮಳೆಗಾಲದ 2 ತಿಂಗಳ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಮೀನುಗಾರರಿಗೆ ನೀಡುವ 1,500 ರು. ಪರಿಹಾರವನ್ನು 3,000 ರು.ಗೇರಿಸಿದ್ದು ಕೂಡ ಮೀನುಗಾರರ ಸಂತಸಕ್ಕೆ ಕಾರಣವಾಗಿದೆ.ಅಲ್ಲದೇ ವಸತಿರಹಿತ 10,000 ಮೀನುಗಾರರಿಗೆ ಮನೆ ನಿರ್ಮಾಣಕ್ಕೆ ಸಹಾಯಧನ ಘೋಷಿಸಲಾಗಿದೆ. ಇದು ಜಾರಿಯಾದರೆ ಉಡುಪಿ ಜಿಲ್ಲೆಯ ಸಾಕಷ್ಟು ಬಡ ಮೀನುಗಾರರಿಗೆ ಲಾಭವಾಗಲಿದೆ.