ಕನ್ನಡಪ್ರಭ ವಾರ್ತೆ ಮೈಸೂರುಬೆಂಗಳೂರಿನ ನಂತರ ಮೈಸೂರಿನಲ್ಲೂ ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಗರ ಪಾಲಿಕೆಯು ಆರಂಭಿಸಿದ್ದು, ಸುಪ್ರೀಂಕೋರ್ಟ್ ನಿರ್ದೇಶನದಂತೆ ವಿವಿಧೆಡೆ ಫುಟ್ ಪಾತ್ ಒತ್ತುವರಿ ತೆರವುಗೊಳಿಸುತ್ತಿದೆ.ಮೈಸೂರು ಮಹಾನಗರ ಪಾಲಿಕೆಯು ಒತ್ತುವರಿ ತೆರವು ಕಾರ್ಯಾಚರಣೆ ಮೊದಲ ಹಂತವಾಗಿ ವಲಯ 4 ಮತ್ತು 5ರ ವ್ಯಾಪ್ತಿಯ ಕೆಆರ್ ಎಸ್ ರಸ್ತೆಯಲ್ಲಿ ಫುಟ್ ಪಾತ್ ಒತ್ತುವರಿ ತೆರವುಗೊಳಿಸುವ ಕಾರ್ಯ ಆರಂಭಿಸಿದೆ. ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗಿದ್ದ ನೂರಾರು ಅನಧಿಕೃತ ಅಂಗಡಿ-ಮುಂಗಟ್ಟುಗಳನ್ನು ತೆರವುಗೊಳಿಸಲಾಗಿದೆ.ವಲಯ-5ರ ವ್ಯಾಪ್ತಿಯ ಜಯದೇವ ಆಸ್ಪತ್ರೆ ಜಂಕ್ಷನ್ ನಿಂದ ಬಸವನ ವಿಗ್ರಹ ಬಳಿಯ ಬೃಂದಾವನ ಎಕ್ಸ್ ಟೆನ್ಶನ್ ಪ್ರವೇಶದ್ವಾರದವರೆಗಿನ ರಸ್ತೆ ಬದಿಯ ಅತಿಕ್ರಮಣಗಳನ್ನು ತೆರವುಗೊಳಿಸಲಾಯಿತು. ರಸ್ತೆ ಬದಿಯಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಚಾಟ್ ಸೆಂಟರ್ ಗಳು, ಟೀ ಅಂಗಡಿಗಳು, ಬಿದಿರಿನ ಸ್ಟಾಲ್ ಗಳು, ಹೊಟೇಲ್ ಗಳು ಮತ್ತು ಇತರ ಅನಧಿಕೃತ ವಾಣಿಜ್ಯ ಮಳಿಗೆಗಳನ್ನು ಪಾಲಿಕೆ ಸಿಬ್ಬಂದಿ ಜೆಸಿಬಿ ಯಂತ್ರಗಳ ಸಹಾಯದಿಂದ ಧ್ವಂಸಗೊಳಿಸಿದರು.ಈ ವೇಳೆ ಕೆಲವು ವ್ಯಾಪಾರಿಗಳು ಪ್ರತಿರೋಧ ಒಡ್ಡಿದರಾದರೂ, ಪಾಲಿಕೆ ಗ್ಯಾಂಗ್ ಮೆನ್ ಗಳು ಅತಿಕ್ರಮಿತ ಪರಿಕರ ಹಾಗೂ ಸಾಮಗ್ರಿಗಳನ್ನು ವಶಪಡಿಸಿಕೊಂಡರು.ಕೆಆರ್ ಎಸ್ ರಸ್ತೆಯಲ್ಲಿ ಫುಟ್ ಪಾತ್ ವ್ಯಾಪಾರಿಗಳು ಬಸ್ ತಂಗುದಾಣದ ಮುಂಭಾಗವನ್ನೇ ಸಂಪೂರ್ಣವಾಗಿ ಆಕ್ರಮಿಸಿಕೊಂಡಿದ್ದರು. ಇದರಿಂದಾಗಿ ಪ್ರಯಾಣಿಕರು ಬಸ್ ನಿಲ್ದಾಣದ ಒಳಗೆ ಹೋಗಲು ಜಾಗವಿಲ್ಲದೆ ಪರದಾಡುವಂತಾಗಿತ್ತು. ಇದರೊಂದಿಗೆ ಖಾಸಗಿ ಕಂಪನಿಗಳು ಅಳವಡಿಸಿದ್ದ ಅನಧಿಕೃತ ಜಾಹೀರಾತು ಫಲಕಗಳು ಮತ್ತು ಫ್ಲೆಕ್ಸ್ ಬೋರ್ಡ್ ಗಳನ್ನು ಸಹ ತೆರವುಗೊಳಿಸಿದರು.ಗೋಕುಲಂ ಮುಖ್ಯ ರಸ್ತೆಯಲ್ಲಿ ಈಗಾಗಲೇ ಶೇ.85 ರಷ್ಟು ಅತಿಕ್ರಮಣ ತೆರವುಗೊಳಿಸಲಾಗಿದೆ. ಪದೇ ಪದೇ ಎಚ್ಚರಿಕೆ ನೀಡಿದ್ದರೂ ಜಾಗ ಖಾಲಿ ಮಾಡದವರ ವಿರುದ್ಧ ಕಠಿಣ ಕ್ರಮ ಜರುಗಿಸಿ, ಪಾದಚಾರಿ ಮಾರ್ಗದ ಮೇಲಿದ್ದ ಕಾಂಕ್ರೀಟ್ ರಚನೆಗಳು ಹಾಗೂ ವಿಸ್ತರಿತ ಶೀಟ್ ಗಳನ್ನು ತೆರವುಗೊಳಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.ಕೆಆರ್ ಎಸ್ ರಸ್ತೆ- ಹೆಬ್ಬಾಳ್ ರಸ್ತೆ ಮತ್ತು ವಿಜಯನಗರದ ಕಾಳಿದಾಸ ರಸ್ತೆಯಲ್ಲೂ ಒತ್ತುವರಿ ತೆರವು ಕಾರ್ಯಾಚರಣೆ ತೀವ್ರಗೊಂಡಿದೆ. ವಲಯ-5ರ ವ್ಯಾಪ್ತಿಯಲ್ಲೇ ಶೇ.20 ರಷ್ಟು ಫುಟ್ ಪಾತ್ ಅನ್ನು ಫಾಸ್ಟ್ ಫುಡ್ ಅಂಗಡಿಗಳೇ ಆಕ್ರಮಿಸಿಕೊಂಡಿದ್ದವು. ಕಾರ್ಯಾಚರಣೆ ನಡುವೆಯೂ ಪಾಲಿಕೆ ಅಧಿಕಾರಿಗಳು ಮಾನವೀಯತೆ ಮೆರೆದಿದ್ದು, ವಯೋವೃದ್ಧ ಮಹಿಳೆ ಹಾಗೂ ವಿಕಲಚೇತನ ವ್ಯಾಪಾರಿಯೊಬ್ಬರಿಗೆ ಬೇರೆಡೆಗೆ ಸ್ಥಳಾಂತರಗೊಳ್ಳಲು ಕಾಲಾವಕಾಶ ನೀಡಿದ್ದಾರೆ.