ಚಿತ್ರದುರ್ಗ: ಖ್ಯಾತ ಸಂಶೋಧಕ ಸೋಮೇನಹಳ್ಳಿಯ ಎಚ್.ಶ್ರೀಶೈಲ ಆರಾಧ್ಯ(78)ಗುರುವಾರ ಮುಂಜಾನೆ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪತ್ನಿ ಹಾಗೂ ಇಬ್ಬರು ಪುತ್ರಿಯರ ಅಗಲಿದ್ದಾರೆ. ಅಂತ್ಯಕ್ರಿಯೆ ಶುಕ್ರವಾರ ಚಿತ್ರದುರ್ಗದ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ.
ಚಿತ್ರದುರ್ಗ ಜಿಲ್ಲೆಯಾದ್ಯಂತ ಹರಡಿರುವ ಬೆಟ್ಟಗುಡ್ಡಗಳ ಗವಿಗಳಲ್ಲಿ ಶಿಲಾಯುಗದ ಮಾನವರಚಿತ ರೇಖಾಚಿತ್ರಗಳು, ನೆರಳು ಚಿತ್ರಗಳಿರುವ ಬಗ್ಗೆ, ಹುಟ್ಟು ಬಂಡೆಗಳು ಮೇಲೆ ಪ್ರಾಣಿ ಮನುಷ್ಯಾಕೃತಿಗಳನ್ನು ಉಜ್ಜಿ ಸಂಶೋಧನೆ ಜಾಡು ಹಿಡಿದಿದ್ದರು. 1983ರಲ್ಲಿ ಮೊತ್ತ ಮೊದಲಿಗೆ ಸಂಶೋಧನೆಯ ಹಾದಿಯಲ್ಲಿ ಎಂಬ ಕೃತಿಯ ಮೂಲಕ ಪುರಾತನ ಇತಿಹಾಸದ ಅಧ್ಯಯನಕ್ಕಾಗಿ ಬಾಗಿಲನ್ನು ತೆರೆದಿಟ್ಟಿದ್ದರು.
ದೇಶ ವಿದೇಶಗಳ ಗಮನ ಸೆಳೆದ ಈ ಶೋಧನೆ ನನ್ನ ಜೀವನದ ಒಂದು ಮೈಲಿಗಲ್ಲು . ಜ್ಯೋತಿಷ್ಯ, ರತ್ನಶಾಸ್ತ್ರ, ಭಾರತೀಯ ಪ್ರಾಚೀನ ಆಚರಣೆಗಳು, ನಂಬಿಕೆಗಳು, ಹಳೆಯ ಕಾಗದ ಪತ್ರಗಳ ಅಧ್ಯಯನ ನನ್ನ ಒಲವು ಹಾಗೂ ಅಭಿರುಚಿಗಳೆಂದು ಶ್ರೀಶೈಲ ಆರಾಧ್ಯ ಹೇಳುತ್ತಿದ್ದರು. ಕಾಶಿ ಸಾಹಿತ್ಯ ಸಮೀಕ್ಷೆ (ಸಂಭಾವನ ಕೃತಿ- ಸಂಪಾದನೆ)ಸಂಶೋದನೆಯ ಹಾದಿಯಲ್ಲಿ (ಪ್ರಾಚೀನ ಗುಹಾಚಿತ್ರಗಳ ಬಗೆಗೆ),ಸೀಮೇಗಿಲ್ಲದೋರ ಸೂರಿನ ಕೆಳಗೆ (ನಗೆ ಲೇಖನಗಳು)ಕೃತಿ ರಚಿಸಿದ್ದರು. ತರಾಸು ಅವರ ಸ್ಮರಣ ಸಂಪುಟ(ಗಿರಿ ಮಲ್ಲಿಗೆ) ಸಂಪಾದನೆ ಮಾಡಿದ್ದರು.
2015 ರಲ್ಲಿ ಚಿತ್ರದುರ್ಗದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಿಂದ “ಮುರುಘಾಶ್ರೀ” ಪ್ರಶಸ್ತಿ ನೀಡಿ ಆರಾಧ್ಯರ ಗೌರವಿಸಲಾಗಿತ್ತು. ಆದರೆ ಚಿತ್ರದುರ್ಗ ಜಿ್ಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವ ಮಾತ್ರ ಆರಾಧ್ಯರಿಗೆ ಲಭ್ಯವಾಗಲೇ ಇಲ್ಲ. ಇದೊಂದ ಕೊರಗು ಅವರನ್ನು ಸದಾ ಕಾಡುತ್ತಿತ್ತು.