ಅಶೋಕ ಸೊರಟೂರ ಲಕ್ಷ್ಮೇಶ್ವರ
ಕಳೆದ 7 ವರ್ಷಗಳಿಂದ ಪಟ್ಟಣದ ಸೋಮೇಶ್ವರ ದೇವಾಲಯದ ಆವರಣದಲ್ಲಿ ಇನ್ಫೋಸಿಸ್ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ ಹಾಗೂ ಸೋಮೇಶ್ವರ ಭಕ್ತರ ಸೇವಾ ಸಮಿತಿ ಸಹಯೋಗದಲ್ಲಿ ನಡೆಯಲಿರುವ ಪುಲಿಗೆರೆ ಉತ್ಸವವು ಶುಕ್ರವಾರದಿಂದ 3 ದಿನಗಳ ಕಾಲ ನಡೆಯಲಿದ್ದು, ಸಂಗೀತ, ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕಳೆಗಟ್ಟಲಿದೆ.ಇತಿಹಾಸ ಪ್ರಸಿದ್ಧವಾದ ಸೋಮೇಶ್ವರ ದೇವಾಲಯವು ಬಾದಾಮಿ ಚಾಲುಕ್ಯರ ಕಾಲದಲ್ಲಿ ಪ್ರಸಿದ್ಧವಾದ ಪುಲಿಗೆರೆ 300 ಎನ್ನುವ ಈ ಪ್ರದೇಶದಲ್ಲಿ ಸಾಮಂತರು ಆಳುತ್ತಿದ್ದರು. ಚಾಲುಕ್ಯರ ಸಾಮಂತ ರಾಜು ಲಕ್ಷ್ಮಣೇಶ್ವರ ಎನ್ನುವ ಅರಸ ಕ್ರಿಶ 5-6 ಶತಮಾನದಲ್ಲಿ ಪುಲಿಗೆರೆ ಆಳುತ್ತಿದ್ದರು ಎಂದು ಇತಿಹಾಸದಿಂದ ತಿಳಿದು ಬರುತ್ತದೆ.
ಲಕ್ಷ್ಮಣೇಶ್ವರ ಎಂಬ ರಾಜನು ಆಳುತ್ತಿದ್ದ ಸಂದರ್ಭದಲ್ಲಿ ಸುಂದರವಾದ ಸೋಮೇಶ್ವರ ದೇವಸ್ಥಾನ ನಿರ್ಮಾಣ ಮಾಡಿದ್ದೇನು ಎನ್ನುವ ದಾಖಲೆಗಳು ಸಿಗುತ್ತವೆ. ಚಾಲುಕ್ಯರ ಶೈಲಿಯಲ್ಲಿ ನಿರ್ಮಿಸಲಾಗಿರುವ ಸುಂದರವಾದ ಸೋಮೇಶ್ವರ ದೇವಾಲಯವು ಪೂರ್ವ. ಉತ್ತರ ಹಾಗೂ ದಕ್ಷಿಣ ಭಾಗಗಳಲ್ಲಿ ಪ್ರವೇಶ ದ್ವಾರ ಹೊಂದಿದ್ದು. ದೇವಾಲಯದ ಸುತ್ತಲೂ ರಾಮಾಯಣ ಮಹಾಭಾರತದ ದೃಶ್ಯ ಕೆತ್ತಲಾಗಿದ್ದು. ಆನೆ ಸಾಲು, ಕುದುರೆ ಸಾಲು ಚಿತ್ರಿಸಲಾಗಿದೆ.ಸುಂದರವಾದ ಬಳ್ಳಿ ಹಾಗೂ ಲತೆಗಳನ್ನು ಕೆತ್ತಲಾಗಿದೆ. ದೇವಾಲಯದಲ್ಲಿ ನವರಂಗ, ಅಂತರಾಳ ಹಾಗೂ ಗರ್ಭಗುಡಿಯಲ್ಲಿ ಸೋಮೇಶ್ವರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು. ಸೋಮೇಶ್ವರನ ಮೂರ್ತಿಯು ವೃಷಭದ ಮೇಲೆ ಕುಳಿತ ಭಂಗಿಯಲ್ಲಿ ಇದ್ದು. ಸೋಮೇಶ್ವರನ ಹಿಂದೆ ಪಾರ್ವತಿ ದೇವಿಯು ಕುಳಿತು ಜಗತ್ತನ್ನು ಸುತ್ತಲು ಹೊರಟಂತೆ ಭಾಸವಾಗುತ್ತದೆ. ಇಂತಹ ಸುಂದರವಾದ ಸೋಮೇಶ್ವರ ದೇವಾಲಯವು ಕಾಲನ ಹೊಡೆತಕ್ಕೆ ಸಿಕ್ಕು ಅವಸಾನದ ಅಂಚಿಗೆ ಹೋಗುತ್ತಿತ್ತು. ಈ ವೇಳೆ ಸೋಮೇಶ್ವರ ದೇವಸ್ಥಾನಕ್ಕೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸುಧಾಮೂರ್ತಿ ಭೇಟಿ ನೀಡಿ ದೇವಾಲಯದ ಅವಸಾನ ಕಂಡು ಮರುಗಿದ ಅವರು ಸುಮಾರು ₹5 ಕೋಟಿ ವೆಚ್ಚದಲ್ಲಿ ದೇವಾಲಯದ ಪುನರುಜ್ಜೀವನಗೊಳಿಸುವ ಕಾರ್ಯಕ್ಕೆ ಮುಂದಾಗಿ ಮತ್ತೆ ಸೋಮೇಶ್ವರ ದೇವಾಲಯದ ಗತವೈಭವ ಮರಳುವಂತೆ ಮಾಡಿದ್ದು ಸಣ್ಣ ಸಾಧನೆಯಲ್ಲ.
ಕಳೆದ 2016-17 ಸಾಲಿನಲ್ಲಿ ಸೋಮೇಶ್ವರ ದೇವಸ್ಥಾನದಲ್ಲಿ ಪುಲಿಗೆರೆ ಉತ್ಸವವನ್ನು ಆಚರಣೆ ಮಾಡುವ ಮೂಲಕ ಸಂಗೀತ. ನೃತ್ಯ ಮತ್ತು ಕಲಾ ವೈಭವಗಳ ಪ್ರದರ್ಶನ ಏರ್ಪಡಿಸುವ ಕಾರ್ಯ ಮಾಡುತ್ತ ಕಲಾವಿದರನ್ನು ಗುರುತಿಸಿ ಬೆಳೆಸುವ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಇನ್ಫೋಸಿಸ್ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ ಮಾಡಿ ಸಂಗೀತ ಪ್ರೇಮಿಗಳ ಪಾಲಿಗೆ ರಸದೌತಣ ನೀಡಲಿದ್ದಾರೆ.ಏ.19 ರಿಂದ 21 ವರೆಗೆ ನಡೆಯುವ ಪುಲಿಗೆರೆ ಉತ್ಸವವನ್ನು ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಸೋಮೇಶ್ವರ ಭಕ್ತರ ಸೇವಾ ಸಮಿತಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಶ್ರಮಿಸುತ್ತಿರುವುದು ಎದ್ದು ಕಾಣುವ ಸಂಗತಿಯಾಗಿದೆ.