ಸೋಮವಾರಪೇಟೆ : ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷ ಜಿ.ಎಂ. ಕಾಂತರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು.
ಗೃಹಜ್ಯೋತಿ ಯೋಜನೆಯಡಿ ಸೋಮವಾರಪೇಟೆ ಉಪ ವಿಭಾಗಕ್ಕೆ ಒಳಪಟ್ಟಂತೆ 29, 220 ಮನೆಗಳಿದ್ದು, ಇದರಲ್ಲಿ 28,070 ವೆರಿಫಿಕೇಷನ್ ಪೂರ್ಣಗೊಂಡಿದೆ ಎಂದು ಸೆಸ್ಕ್ ಇಲಾಖೆಯ ಯಶಸ್ವಿನಿ ಸಭೆಗೆ ಮಾಹಿತಿ ನೀಡಿದರು.ಗಂಗಾ ಕಲ್ಯಾಣ ಯೋಜನೆಯಡಿ 48 ಫಲಾನುಭವಿಗಳ ಪೈಕಿ 42 ಫಲಾನುಭವಿಗಳ ಐಪಿ ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದರು. ದೊಡ್ಡಬ್ಬೂರು ಗ್ರಾಮದಲ್ಲಿ ವಿದ್ಯುತ್ ಲೈನ್ ಮೇಲೆ ಬೃಹತ್ ನೇರಳೆ ಮರ ಬೀಳುವ ಹಂತದಲ್ಲಿದೆ. ಒಂದು ವೇಳೆ ಮರ ಬಿದ್ದರೆ ಹತ್ತಾರು ಕಂಬಗಳು ಜಖಂಗೊಳ್ಳಲಿವೆ. ಮನೆಗಳಿಗೂ ಅಪಾಯ ಸಂಭವಿಸಲಿದೆ ಎಂದು ಸದಸ್ಯ ಎಸ್.ಎಂ. ಡಿಸಿಲ್ವಾ ಹೇಳಿದರು.
ತಾಲೂಕಿನಲ್ಲಿ ಬಿಪಿಎಲ್ ನಿಂದ ಎಪಿಎಲ್‌ಗೆ ವರ್ಗವಾಗಿದ್ದ 124 ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ಥಳ ಮಹಜರು ನಡೆಸಿ, ವಾಪಸ್ ಬಿಪಿಎಲ್ ಮಾಡಲಾಗಿದೆ ಎಂದು ಆಹಾರ ನಿರೀಕ್ಷಕಿ ಯಶಸ್ವಿನಿ ಸಭೆಗೆ ತಿಳಿಸಿದರು.ಇದೀಗ ಆಯಾ ತಾಲೂಕು ತಹಸೀಲ್ದಾರ್‌ಗಳೇ ಸ್ಥಳ ಮಹಜರು ನಡೆಸಬೇಕು ಎಂದು ಸರ್ಕಾರಿ ಆದೇಶ ಬಂದಿದೆ. ತಹಸೀಲ್ದಾರ್‌ಗೆ ಎಲ್ಲರ ಮನೆಗೆ ಭೇಟಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಆಯಾ ಹೋಬಳಿ ಕೇಂದ್ರದಲ್ಲಿರುವ ಉಪ ತಹಸೀಲ್ದಾರ್‌ಗಳಿಗೆ ಮಹಜರು ನಡೆಸುವ ಅಧಿಕಾರ ನೀಡಲು ಸರ್ಕಾರದ ಗಮನ ಸೆಳೆಯಬೇಕು. ಈ ಬಗ್ಗೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಬೇಕಿದೆ ಅಧ್ಯಕ್ಷ ಜಿ.ಎಂ. ಕಾಂತರಾಜ್ ಹೇಳಿದರು.ಬಿಪಿಎಲ್ ಕಾರ್ಡ್ ವಿತರಣೆ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಸದಸ್ಯ ವೀರೇಂದ್ರ ಹೇಳಿದರು. ಪಡಿತರ ಚೀಟಿ ಇಲ್ಲದೇ ಇರುವುದರಿಂದ ಸರ್ಕಾರದ ವಿವಿಧ ಯೋಜನೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸದಸ್ಯ ಎಸ್.ಎಂ. ಡಿಸಿಲ್ವಾ ಹೇಳಿದರು.
ಗೃಹಲಕ್ಷ್ಮೀ ಯೋಜನೆಯಡಿ ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳ ಹಣ ಫಲಾನುಭವಿಗಳ ಖಾತೆಗೆ ಸಂದಾಯವಾಗಿಲ್ಲ. ಮೇ-ಜೂನ್ ತಿಂಗಳಲ್ಲಿ ಕೆಲವರ ಖಾತೆಗೆ ಮಾತ್ರ ಹಣ ಬಂದಿದೆ. ಉಳಿದವರ ಖಾತೆಗೆ ಹಣ ಬಂದಿಲ್ಲ ಎಂದು ಇಲಾಖಾಧಿಕಾರಿ ಶ್ರೀದೇವಿ ಮುಧೋಳ್ ತಿಳಿಸಿದರು.ತಾಲೂಕು ವ್ಯಾಪ್ತಿಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಹೆಸರು ನೋಂದಾಯಿಸಿಕೊಂಡಿದ್ದವರಲ್ಲಿ ಹಲವರು ಮೃತಪಟ್ಟಿದ್ದಾರೆ. 62 ಪ್ರಕರಣಗಳನ್ನು ವೆರಿಫಿಕೇಷನ್ ಮಾಡಲಾಗುತ್ತಿದೆ. ಈಗಾಗಲೇ 211 ಮಂದಿಯ ಹೆಸರನ್ನು ಡಿಲೀಟ್ ಮಾಡಲಾಗಿದೆ ಎಂದರು.ಅಬ್ಬೂರುಕಟ್ಟೆ ಅಂಗನವಾಡಿಯಲ್ಲಿ ಗರ್ಭಿಣಿ ಸ್ತ್ರೀಯರಿಗೆ ಹುಳುಮಿಶ್ರಿತ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ ಎಂದು ಸದಸ್ಯ ಎಸ್.ಎಂ. ಡಿಸಿಲ್ವಾ ಅವರು ಆರೋಪಿಸಿದರು. ಗರ್ಭಿಣಿಯರಿಗೆ, ಮಕ್ಕಳಿಗೆ ಹುಳು ಹಿಡಿದ ಆಹಾರ ಧಾನ್ಯಗಳ ವಿತರಣೆ ಆಗುತ್ತಿದ್ದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು. ಮುಂದಿನ ದಿನಗಳಲ್ಲಿ ಇಲಾಖಾಧಿಕಾರಿಗಳು ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ತೆರಳಿ ಪರಿಶೀಲನೆ ನಡೆಸಬೇಕೆಂದು ಅಧ್ಯಕ್ಷರು ಸೂಚಿಸಿದರು.ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿ. ಪರಮೇಶ್‌ಕುಮಾರ್, ಸದಸ್ಯರಾದ ರಂಗಸ್ವಾಮಿ, ಶೀಲಾ ಡಿಸೋಜ, ರಾಜಮ್ಮ ರುದ್ರಯ್ಯ, ಗೌತಮ್ ಶಿವಪ್ಪ, ರಾಜು, ಬೋಜಪ್ಪ, ವೀರೇಂದ್ರ, ರಾಜಪ್ಪ, ಅವರು ಭಾಗಿಯಾಗಿದ್ದರು.