ಕನ್ನಡಪ್ರಭ ವಾರ್ತೆ ಬೆಂಗಳೂರು
ಬೇವಿನಮರದ ಕಾಲೋನಿ ನಿವಾಸಿ ಭಾಗ್ಯಮ್ಮ (60) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತಳ ಪುತ್ರ ಬಾಲಾಜಿಯನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. 3 ದಿನಗಳ ಹಿಂದೆ ಮನೆಯಲ್ಲಿ ತನ್ನ ತಾಯಿ ಮೇಲೆ ಮನಬಂಬದಂತೆ ಹಲ್ಲೆ ನಡೆಸಿ ಆರೋಪಿ ಹತ್ಯೆಗೈದಿದ್ದಾನೆ. ಬಳಿಕ ಮೃತಳ ಅಂತ್ಯಕ್ರಿಯೆಗೆ ತನ್ನ ಸೋದರರು ಜತೆ ಸೇರಿ ಆರೋಪಿ ಯತ್ನಿಸಿದ್ದಾಗ ಪೊಲೀಸರಿಗೆ ಸ್ಥಳೀಯ ವ್ಯಕ್ತಿಯೊಬ್ಬರು ಕರೆ ಮಾಡಿದ್ದರು. ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಅಂತ್ಯಕ್ರಿಯೆ ತಡೆದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿದಾಗ ಸತ್ಯ ಬಯಲಾಗಿದೆ.
ಮಂಚದಿಂದ ಬಿದ್ದು ಸಾವು ಸುಳ್ಳಿನ ಕತೆ:ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಾಲಾಜಿ, ತನ್ನ ಕುಟುಂಬದ ಜತೆ ಬೇವಿನಮರದ ಕಾಲೋನಿಯಲ್ಲಿ ನೆಲೆಸಿದ್ದಾನೆ. ತಮ್ಮ ಪತಿ ಸಾವನ್ನಪ್ಪಿದ ಬಳಿಕ ಮಕ್ಕಳಿಂದ ಪ್ರತ್ಯೇಕವಾಗಿ ಮೃತ ಭಾಗ್ಯಮ್ಮ ನೆಲೆಸಿದ್ದರು. ವಿಪರೀತ ಮದ್ಯ ವ್ಯಸನಿಯಾಗಿದ್ದ ಅವರು ಪ್ರತಿ ದಿನ ಪಾನಮತ್ತಳಾಗಿ ಗಲಾಟೆ ಮಾಡುತ್ತಿದ್ದರು. ಇತ್ತ ಕೌಟುಂಬಿಕ ವಿಚಾರವಾಗಿ ಪುತ್ರ ಬಾಲಾಜಿ ಹಾಗೂ ತಾಯಿ ಮಧ್ಯೆ ಮನಸ್ತಾಪ ಬೆಳೆದಿತ್ತು. ತನ್ನ ಚಿನ್ನದ ಸರವನ್ನು ಪಡೆದು ಅಡಮಾನವಿಟ್ಟಿದ್ದಾನೆ ಎಂದು ಪುತ್ರನ ಮೇಲೆ ಭಾಗ್ಯಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ತನ್ನ ಚಿನ್ನ ಮರಳಿಸುವಂತೆ ಮಗನಿಗೆ ಅವರು ತಾಕೀತು ಮಾಡಿದ್ದರು. ಇದೇ ವಿಷಯವಾಗಿ ಆಗಾಗ್ಗೆ ಪರಸ್ಪರ ಜಗಳವಾಡುತ್ತಿದ್ದರು.
ಅನಾಮಧೇಯನ ಕರೆ:
ಈ ಮಾಹಿತಿ ಲಭ್ಯವಾದ ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಅಂತ್ಯಕ್ರಿಯೆಯನ್ನು ತಡೆದು ಮೃತದೇಹವನ್ನು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆಗ ಮರಣೋತ್ತರ ವರದಿಯಲ್ಲಿ ಕೊಲೆ ನಡೆದಿರುವುದು ಖಚಿತವಾಗಿದೆ. ಬಳಿಕ ಬಾಲಾಜಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.
ನನ್ನ ತಾಯಿ ನಡವಳಿಕೆ ಸಿಟ್ಟು ತರಿಸಿತ್ತು. ಮದ್ಯ ವ್ಯಸನಿ ಮಾತ್ರವಲ್ಲದೆ ಅಪರಿಚಿತ ವ್ಯಕ್ತಿ ಜತೆ ಸ್ನೇಹವಿತ್ತು. ತಂದೆ ಮೃತಪಟ್ಟ ಬಳಿಕ ಪ್ರತಿದಿನ ಆತ ಮನೆ ಬಳಿ ಬರುತ್ತಿದ್ದ. ಇದರಿಂದ ನೆರೆಹೊರೆಯವರಲ್ಲಿ ಕುಹುಕಗಳು ಕೇಳಿ ಬರುತ್ತಿದ್ದವು. ಈ ನಡವಳಿಕೆಯಿಂದ ಬೇಸತ್ತು ತನ್ನ ತಾಯಿಯನ್ನು ಹತ್ಯೆ ಮಾಡಿದ್ದಾಗಿ ಆರೋಪಿ ಬಾಲಾಜಿ ಹೇಳಿದ್ದಾನೆ ಎನ್ನಲಾಗಿದೆ.