ಸ್ಕೂಟರ್‌ನಲ್ಲಿ ತಾಯಿಗೆ ತೀರ್ಥಯಾತ್ರೆ ಮಾಡಿಸಿದ ಪುತ್ರ

KannadaprabhaNewsNetwork |  
Published : May 13, 2025, 01:17 AM ISTUpdated : May 13, 2025, 11:41 AM IST
11ಕೆಜಿಎಫ್‌1 | Kannada Prabha

ಸಾರಾಂಶ

ದೇಶ ಪರ್ಯಟನೆ ಮಾಡಬೇಕೆಂಬ 75 ವರ್ಷದ ತಾಯಿ ಚೂಡಾರತ್ನ ರವರ ಬಯಕೆಯನ್ನು ತೀರಿಸಲು ಕೃಷ್ಣಕುಮಾರ್ 2018ರ ಜನವರಿ 16 ರಂದು ತಮ್ಮ ತೀರ್ಥಯಾತ್ರೆಯನ್ನು ಪ್ರಾರಂಭಿಸಿ ದ್ದರು

 ಕೆಜಿಎಫ್ : ತ್ರೇತಾಯುಗದಲ್ಲಿ ಶ್ರವಣಕುಮಾರ ತನ್ನ ಅಂಧ ತಂದೆ-ತಾಯಿಯರನ್ನು ತಕ್ಕಡಿಯಲ್ಲಿ ಕೂರಿಸಿಕೊಂಡು ಹೆಗಲ ಮೇಲೆ ಹೊತ್ತುಕೊಂಡು ತೀರ್ಥಯಾತ್ರೆಗೆ ಹೊರಟ ಕಥೆ ಎಲ್ಲರಿಗೂ ಗೊತ್ತೇ ಇದೆ.

 ಈ ಕಲಿಯುಗದಲ್ಲಿಯೂ ಕೈತುಂಬ ಸಂಬಳ ಬರುತ್ತಿದ್ದ ಕೆಲಸವನ್ನು ಬಿಟ್ಟು ಮಾತೃ ಸಂಕಲ್ಪ ಯಾತ್ರೆ ಕೈಗೊಂಡು ತಂದೆ ಕೊಡಿಸಿದ್ದ ಸ್ಕೂಟರ್ ಮೇಲೆಯೇ ತನ್ನ ತಾಯಿಯನ್ನು ಕೂರಿಸಿಕೊಂಡು ತೀರ್ಥಯಾತ್ರೆ ಮಾಡಿಸುತ್ತಿರುವ ಮೈಸೂರಿನ ಕೃಷ್ಣಕುಮಾರ್ ತಾಯಂದಿರ ದಿನವಾದ ಭಾನುವಾರ ಕೆಜಿಎಫ್ ನಗರಕ್ಕೆ ಆಗಮಿಸಿದರು. 

ದೇಶ ಪರ್ಯಟನೆ ಮಾಡಬೇಕೆಂಬ 75 ವರ್ಷದ ತಾಯಿ ಚೂಡಾರತ್ನ ರವರ ಬಯಕೆಯನ್ನು ತೀರಿಸಲು ಕೃಷ್ಣಕುಮಾರ್ ೨೦೧೮ರ ಜನವರಿ ೧೬ ರಂದು ತಮ್ಮ ತೀರ್ಥಯಾತ್ರೆಯನ್ನು ಪ್ರಾರಂಭಿಸಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಆಂಧ್ರ ಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ, ಒಡಿಶಾ, ಮಿಜೋರಾಂ, ಮೇಘಾಲಯ, ತ್ರಿಪುರಾ, ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರು.

ವಿದೇಶಿ ಯಾತ್ರಾಸ್ಥಳಗಳಿಗೆ ಭೇಟಿ

ಬಳಿಕ ದೇಶದ ಗಡಿ ದಾಟಿ ನೇಪಾಳ, ಭೂತಾನ್, ಮ್ಯಾನ್ಮಾರ್‌ ದೇಶಗಳಿಗೂ ಸ್ಕೂಟರ್‌ನಲ್ಲೇ ತೇರಳಿ ಇದುವರೆಗೆ 98,800ಕಿಲೋಮೀಟರ್ ಪ್ರಯಾಣ ಮಾಡಿ ತಮ್ಮ ತಾಯಿಗೆ ಪುಣ್ಯಕ್ಷೇತ್ರಗಳ ದರ್ಶನ ಮಾಡಿಸಿದ್ದಾರೆ. 2001 ರಲ್ಲಿ ಕೃಷ್ಣಕುಮಾರ್ ತಮ್ಮ ತಂದೆ ದಕ್ಷಿಣಮೂರ್ತಿ ಮೊದಲ ಉಡುಗೊರೆಯಾಗಿ ಸ್ಕೂಟರ್ ಕೊಡಿಸಿದ್ದರು. 2015 ರಲ್ಲಿ ದಕ್ಷಿಣಮೂರ್ತಿ ನಿಧನರಾದರು. ತಮ್ಮ ಇಡೀ ಯಾತ್ರೆಯಲ್ಲಿ ಸ್ಕೂಟರ್ ಅನ್ನು ತಮ್ಮ ತಂದೆಯ ಪ್ರತಿರೂಪ ಎಂದೇ ಭಾವಿಸಿ ಕೃಷ್ಣ ಕುಮಾರ್ ತಮ್ಮ ತಾಯಿಯನ್ನು ಸ್ಕೂಟರ್ ಮೇಲೆಯೇ ಕುಳ್ಳರಿಸಿಕೊಂಡು ದೇಶ ಪರ್ಯಟನೆ ಮಾಡುತ್ತಿರುವುದಾಗಿ ತಿಳಿಸಿದರು. 

ಮಾತೃ ಸಂಕಲ್ಪ ಯಾತ್ರೆ

2018 ರಲ್ಲಿ ಮಾತೃ ಸಂಕಲ್ಪ ಯಾತ್ರೆಯನ್ನು ಪ್ರಾರಂಭಿಸಿದ 2- 3 ವರ್ಷಗಳ ಬಳಿಕ ಕೊರೊನಾ ವೈರಸ್ ಬಂದ ಹಿನ್ನಲೆಯಲ್ಲಿ ಭೂತಾನ್‌ನಲ್ಲಿ ಒಂದೂವರೆ ತಿಂಗಳ ಕಾಲ ತಂಗಿದ್ದು, ಲಾಕ್ ಡೌನ್ ಮುಗಿದ ಬಳಿಕ ಪಾಸ್ ಪಡೆದು ಮತ್ತೆ ಪ್ರಯಾಣ ಆರಂಭಿಸಿ ಮೈಸೂರಿನ ತಮ್ಮ ಮನೆಗೆ ವಾಪಸ್ಸಾಗಿದ್ದರು.

2022ರಲ್ಲಿ ಮುಂದುವರಿದ ಯಾತ್ರೆ

ಬಳಿಕ 2022 ರಲ್ಲಿ ಮತ್ತೆ ಜಮ್ಮು, ಕಾಶ್ಮೀರ, ಉತ್ತರಾಖಂಡ ಸೇರಿದಂತೆ ಈಶಾನ್ಯ ಭಾರತದ ಎಲ್ಲ ತೀರ್ಥಕ್ಷೇತ್ರಗಳ ದರ್ಶನ ಪಡೆದು ಒಂದು ಲಕ್ಷ ಕಿಲೋ ಮೀಟರ್ ಸನಿಹ ಬಂದು ತಲುಪಿದ್ದಾರೆ. ಕೆಜಿಎಫ್‌ನ ವಿವಿಧೆಡೆ ಅ‍ವರಿಗೆ ಸನ್ಮಾನಗಳು ನಡೆಯುತ್ತಿದ್ದು, ಬಳಿಕ ಇಲ್ಲಿಂದ ಅ‍ವರು ಮೈಸೂರಿಗೆ ತೆರಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ