ನೋಟಿಸ್‌ಗೂ ಕಿಮ್ಮತ್ತಿಲ್ಲ । ಕ್ರಷರ್ ಸದ್ದಿಗೆ ಜನರ ನಿದ್ದೆ ಭಂಗ | ಎಂಡಿಪಿ ವಂಚಿಸಿ ಎಂ.ಸ್ಯಾಂಡ್ ಸಾಗಣೆ ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ರಾತ್ರಿ ೧೦ ಗಂಟೆ ಬಳಿಕ ಕ್ರಷರ್ ಕ್ರಷಿಂಗ್ ಮಾಡುವ ಹಾಗಿಲ್ಲ ಎಂದು ಜಿಲ್ಲಾ ಕಲ್ಲು ಪುಡಿ ನಿಯಂತ್ರಣ ಪ್ರಾಧಿಕಾರ ನೋಟಿಸ್ ನೀಡಿದ್ದರೂ ತಾಲೂಕಿನ ಹಿರೀಕಾಟಿ ಬಳಿಯ ಕ್ರಷರ್‌ಗಳು ನಿಯಮ ಉಲ್ಲಂಘಿಸಿ ರಾತ್ರಿ ಸದ್ದು ಮಾಡುತ್ತಿವೆ. ತಾಲೂಕಿನ ಹಿರೀಕಾಟಿ ಗೇಟ್ ಸುತ್ತ ಮುತ್ತಲಿನ ಕೆಲ ಕ್ರಷರ್‌ಗಳು ಬೆಳಗಿನ ಮೂರು ಗಂಟೆಯ ತನಕ ಎಡ ಬಿಡದೆ ಕ್ರಷರ್ ಕೆಲಸ ಮಾಡುತ್ತಿರುವ ಕಾರಣ ಜಿಲ್ಲಾ ಕಲ್ಲು ಪುಡಿ ನಿಯಂತ್ರಣ ಪ್ರಾಧಿಕಾರ ನೀಡಿದ ನೋಟಿಸ್‌ಗೆ ಮೂರು ಕಾಸಿನ ಬೆಲೆ ತೋರುತ್ತಿಲ್ಲ. ಕ್ರಷರ್‌ಗಳು ನಿಯಮ ಮೀರಿ ರಾತ್ರಿ ಸಮಯದಲ್ಲಿ ಕ್ರಷಿಗ್ ಮಾಡುವುದರಿಂದ ಅವುಗಳ ಸದ್ದಿಗೆ ಹಿರೀಕಾಟಿ ಗ್ರಾಮದ ಜನರ ನಿದ್ರಾಭಂಗಕ್ಕೆ ಕಾರಣವಾಗಿದ್ದರೂ ಅಧಿಕಾರಿಗಳು ಮಾತ್ರ ನೋಟಿಸ್ ನೀಡಿ ಕೈ ತೊಳೆದುಕೊಂಡಿದ್ದಾರೆ. ಹಿರೀಕಾಟಿ ಬಳಿಯ ಕ್ರಷರ್‌ಗಳು ರಾತ್ರಿ ಕ್ರಷಿಗ್ ಮಾಡುತ್ತಿವೆ. ಜನರ ನಿದ್ರೆಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಲ್ಲದೆ ಬೇಗೂರು ಪೊಲೀಸರಿಗೂ ಮೌಖಿಕವಾಗಿ ಹೇಳಿದ್ದಾರೆ. ಮೈಸೂರು-ಊಟಿ ಹೆದ್ದಾರಿಯ ಬದಿಯಿರುವ ಕ್ರಷರ್‌ಗಳು ರಾತ್ರಿ ವೇಳೆ ಕ್ರಷಿಂಗ್ ಮಾಡುತ್ತಿವೆ ಎಂದು ಹೆದ್ದಾರಿಯಲ್ಲಿ ಬೆಳಗಿನ ಜಾವದ ತನಕವೂ ಕೆಲಸ ಮಾಡುತ್ತಿವೆ ಎಂದು ಹೇಳುತ್ತಿದ್ದಾರೆ. ರಾತ್ರಿ ಕೆಲಸ ನಿಲ್ಲಿಸಲಿ ಹಿರೀಕಾಟಿ ಗ್ರಾಮದಲ್ಲಿ ಜನರು ನೆಮ್ಮದಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ. ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಪತ್ರಿಕೆಗಳಲ್ಲಿ ಬಂದಾಗ ಅಥವಾ ದೂರು ನೀಡಿದಾಗ ನಿದ್ದೆಯಿಂದೆದ್ದ ರೀತಿ ಕ್ರಷರ್ ಮಾಲೀಕರಿಗೆ ನೋಟಿಸ್ ನೀಡುತ್ತಾರೆ. ಜಿಲ್ಲಾ ಕಲ್ಲು ಪುಡಿ ಪ್ರಾಧಿಕಾರ ನೋಟಿಸ್ ನೀಡಿದ್ದರೂ ರಾತ್ರಿಯಲ್ಲೂ ಕ್ರಷರ್ ಕೆಲಸ ಮಾಡುವುದು ನಿಂತಿಲ್ಲ. ಇನ್ನಾದರೂ ಎಚ್ಚೆತ್ತು ರಾತ್ರಿ ೧೦ ರ ಬಳಿಕ ಕ್ರಷರ್‌ಗಳು ಕೆಲಸ ಮಾಡುವುದನ್ನು ನಿಲ್ಲಿಸಲಿ ಎಂದು ಗ್ರಾಮದ ಯುವಕರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಆದಾಯವೂ ಸೋರಿಕೆ ರಾತ್ರಿ ಕ್ರಷರ್‌ಗಳು ಕ್ರಷಿಂಗ್ ಮಾಡುತ್ತಿವೆ. ಜತೆಗೆ ರಾತ್ರಿಯ ವೇಳೆ ರಾಯಲ್ಟಿ ಇಲ್ಲದೆ ಕಲ್ಲು ಬರುತ್ತದೆ ಹಾಗೂ ಕ್ರಷರ್‌ನ ಎಂ.ಸ್ಯಾಂಡ್, ಜಲ್ಲಿ, ಎಂಡಿಟಿಪಿ ಹಾಕದೆ ಅಕ್ರಮವಾಗಿ ಸಾಗಾಣಿಕೆ ಆಗುತ್ತಿದೆ. ಕ್ರಷರ್‌ಗಳಲ್ಲಿ ಬೆಳಗಿನ ವೇಳೆಯೇ ಟಿಪ್ಪರ್‌ಗಳಲ್ಲಿ ೨೦ ರಿಂದ ೨೫ ಟನ್‌ಗೂ ಮೀರಿ ತುಂಬಿದ ಎಂ.ಸ್ಯಾಂಡ್, ಜಲ್ಲಿಗೆ ೯ ಟನ್ ಎಂಡಿಟಿಪಿ ಹಾಕಿಕೊಂಡು ಸಾಗಾಣಿಕೆಯಾಗುತ್ತಿದೆ. ಇನ್ನೂ ರಾತ್ರಿ ವೇಳೆ ಕ್ರಷರ್‌ಗಳಲ್ಲಿ ಹೇಳೋರು, ಕೇಳೋರು ಇರದ ಕಾರಣ ಆದಾಯ ಕೂಡ ಸೋರಿಕೆ ಆಗುತ್ತಿದೆ. ೧ ರಾಯಲ್ಟಿ/ಎಂಡಿಟಿಪಿ ಕ್ವಾರಿಗಳಿಂದ ಕ್ರಷರ್‌ಗಳಿಗೆ ಬರುವ ಕಲ್ಲಿಗೆ ಒಂದು ಟ್ರಿಪ್‌ಗೆ ರಾಯಲ್ಟಿ/ಎಂಡಿಪಿ ಪಡೆದು ಬೆಳಿಗ್ಗೆಯಿಂದ ಸಂಜೆಯ ತನಕ ಒಂದೇ ಒಂದು ರಾಯಲ್ಟಿ/ಎಂಡಿಟಿಪಿಯಲ್ಲಿ ಹತ್ತಾರು ಟ್ರಿಪ್ ಕಲ್ಲು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿದೆ. ಹೆಚ್ಚು ಅಕ್ರಮ ತಾಲೂಕಿನ ಹಿರೀಕಾಟಿ, ತೊಂಡವಾಡಿ ಹಾಗೂ ಗುಂಡ್ಲುಪೇಟೆ ಬಳಿ ಸುತ್ತಮುತ್ತ ಆರೇಳು ಕ್ರಷರ್‌ಗಳಿರುವ ಕಾರಣ ಹಿರೀಕಾಟಿ ಹಾಗೂ ಮಡಹಳ್ಳಿ ಕ್ವಾರಿಯಿಂದ ಬರುವ ಕಲ್ಲಿಗೆ ರಾಯಲ್ಟಿ ಇಲ್ಲದೆ ಕಲ್ಲು ಕ್ರಷರ್‌ಗೆ ಟಿಪ್ಪರ್‌ಗಳು ತೆರಳುತ್ತಿವೆ. ಕೇಳೋರು ಯಾರು? ಕಲ್ಲು ಸಾಗಾಣಿಕೆಗೆ ರಾಯಲ್ಟಿ ಇಲ್ಲದೆ ಕಲ್ಲು ತುಂಬಿದ ಟಿಪ್ಪರ್‌ಗಳು ತೆರಳುತ್ತವೆ. ಆದರೆ ತಪಾಸಣೆ ಅಧಿಕಾರಿಗಳು ರಸ್ತೆಯಲ್ಲಿದ್ದಾರೆ ಎಂದಾಕ್ಷಣ ಟಿಪ್ಪರ್ ಬರುವುದೇ ನಿಲ್ಲುತ್ತವೆ. ಎಂಡಿಟಿಪಿ ಇಲ್ಲದೆ ಹಾಗೂ ಎಂ.ಸ್ಯಾಂಡ್, ಜಲ್ಲಿಗೆ ೮ ರಿಂದ ೯ ಟನ್ ರ‍್ಮಿಟ್ ಇಟ್ಟುಕೊಂಡು ೨೦ ರಿಂದ ೨೫ ಟನ್‌ಗೂ ಹೆಚ್ಚು ಸಾಗಾಣಿಕೆಯಾದರೂ ತಡೆದು ಕೇಳೋರು ಯಾರು ಎಂದು ಸಾರ್ವಜನಿಕರು ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ. ತಾಲೂಕಿನ ಕೆಲ ಕ್ರಷರ್‌ಗಳು ರಾತ್ರಿ ವೇಳೆ ಕ್ರಷಿಂಗ್ ಮಾಡುತ್ತಿವೆ ಎಂದು ಸಾರ್ವಜನಿಕರು ಹಾಗೂ ಕನ್ನಡಪ್ರಭ ಪತ್ರಿಕೆ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪತ್ರ ಬರೆಯುತ್ತೇನೆ. ಟಿ.ರಮೇಶ್ ಬಾಬು, ತಹಸೀಲ್ದಾರ್.