ದೃಷ್ಟಿ ವಿಶೇಷಚೇತನರ ಅನುಕೂಲಕ್ಕಾಗಿ ಬಸ್‌ಗಳಲ್ಲಿ ಧ್ವನಿ ಸ್ಪಂದನ ಅಳವಡಿಕೆ: ರಾಮಲಿಂಗಾರೆಡ್ಡಿ

KannadaprabhaNewsNetwork |  
Published : Jul 15, 2025, 01:03 AM ISTUpdated : Jul 15, 2025, 01:41 PM IST
4 | Kannada Prabha

ಸಾರಾಂಶ

ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ದೃಷ್ಟಿ ವಿಶೇಷಚೇತನರಿಗಾಗಿ ಧ್ವನಿ ಸ್ಪಂದನವನ್ನು ಬಸ್‌ ಗಳಲ್ಲಿ ಅಳವಡಿಸಲಾಗಿದ್ದು, ಪ್ರತಿಯೊಬ್ಬ ವಿಕಲಚೇತನರು ಧ್ವನಿ ಸ್ಪಂದನದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.

  ಮೈಸೂರು :  ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ದೃಷ್ಟಿ ವಿಶೇಷಚೇತನರಿಗಾಗಿ ಧ್ವನಿ ಸ್ಪಂದನವನ್ನು ಬಸ್‌ ಗಳಲ್ಲಿ ಅಳವಡಿಸಲಾಗಿದ್ದು, ಪ್ರತಿಯೊಬ್ಬ ವಿಕಲಚೇತನರು ಧ್ವನಿ ಸ್ಪಂದನದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.

ನಗರ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ ಟಿಸಿ ಮೈಸೂರು ನಗರ ವಿಭಾಗ ಮತ್ತು ಜಿಐಜಡ್ ಇಂಡಿಯಾ ಆಯೋಜಿಸಿದ್ದ ದೃಷ್ಟಿ ವಿಶೇಷಚೇತನರ ಅನುಕೂಲಕ್ಕಾಗಿ ವಿಶೇಷ ಉಪಕರಣವನ್ನು ಅಳವಡಿಸಿರುವ ಬಸ್ ಗಳನ್ನು ಅವರು ಸೋಮವಾರ ಲೋಕಾರ್ಪಣೆ ಮಾಡಿ ಮಾತನಾಡಿದರು.

ಮಾರ್ಗಗಳನ್ನು ಗುರುತಿಸಲು ಸಹಾಯಕ್ಕಾಗಿ ಇತರರನ್ನು ಅವಲಂಬಿಸದೆ ಅಂಧ ಮತ್ತು ದೃಷ್ಟಿ ವಿಶೇಷಚೇತನ ವ್ಯಕ್ತಿಗಳು ಸಾರ್ವಜನಿಕ ಬಸ್‌ ಗಳಲ್ಲಿ ವಿಶ್ವಾಸದಿಂದ ಧ್ವನಿ ಸ್ಪಂದನವನ್ನು ಬಳಸಬಹುದಾಗಿದೆ. ಬಸ್ ಯಾವ ಸಮಯಕ್ಕೆ ಬರುತ್ತದೆ. ಯಾವ ಮಾರ್ಗಕ್ಕೆ ಹೋಗಬೇಕು ಎಂಬುವುದನ್ನು ಈ ಡಿವೈಸ್ ಮೂಲಕ ತಿಳಿದುಕೊಳ್ಳಬಹುದಾಗಿದೆ ಎಂದರು.

ಬೆಂಗಳೂರಿನಲ್ಲಿ 500 ಬಸ್‌ ಗಳಿಗೆ ಧ್ವನಿ ಸ್ಪಂದನ ಅಳವಡಿಸಲಾಗಿದ್ದು, ಮೈಸೂರಿನಲ್ಲಿ 200 ಬಸ್‌ ಗಳಿಗೆ ಅಳವಡಿಸಲಾಗಿದೆ. ದೃಷ್ಟಿ ವಿಕಲಚೇತನರು ಯಾರ ಸಹಾಯವು ಇಲ್ಲದೆ ಬಸ್ ಗಳಲ್ಲಿ ತೆರಳಲು ಈ ಯೋಜನೆ ಸಹಾಯವಾಗುತ್ತದೆ ಎಂದು ಅವರು ಹೇಳಿದರು.

ಶಾಸಕ ತನ್ವೀರ್ ಸೇಠ್ ಮಾತನಾಡಿ, ಸಾರಿಗೆ ಇಲಾಖೆಯು ಮಾಹಿತಿ ತಂತ್ರಜ್ಞಾನ ಸದ್ಬಳಕೆಯನ್ನು ಮಾಡಿ ದೃಷ್ಟಿ ವಿಶೇಷಚೇತನರಿಗೆ ಅನುಕೂಲ ಮಾಡಿಕೊಟ್ಟಿರುವುದು ಬಹಳ ಸಂತೋಷದ ವಿಷಯ. ಅನೇಕ ಅಂಗವಿಕಲರು ದೃಷ್ಟಿ ವಿಕಲಚೇತನರಿಗೆ ಅನುಕೂಲವಾಗುವಂತಹ ಒಂದು ಮಾದರಿ ಯೋಜನೆ ಇದಾಗಿದ್ದು, ಸಾರಿಗೆ ವ್ಯವಸ್ಥೆ ಇಂದು ಎಲ್ಲಾ ಹಂತದಲ್ಲಿಯೂ ದೃಷ್ಟಿ ವಿಕಲ ಚೇತನರಿಗೆ ಸಹಕಾರಿಯಾಗಿ ನಿಂತಿದೆ ಎಂದು ಶ್ಲಾಘಿಸಿದರು.

ಶಾಸಕ ಜಿ.ಟಿ. ದೇವೇಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಪ್ಪಾ ಅಮರನಾಥ್, ಜಿಲ್ಲಾಧ್ಯಕ್ಷ ಎಸ್. ಅರುಣ್ ಕುಮಾರ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕೆಎಸ್ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಎಚ್.ಟಿ. ವೀರೇಶ್, ಶ್ರೀನಿವಾಸ್ ಮೊದಲಾದವರು ಇದ್ದರು.

ರಾಜ್ಯದಲ್ಲಿ ಯಾವ ಕ್ರಾಂತಿಯೂ ಆಗೋದಿಲ್ಲ: ರಾಮಲಿಂಗಾರೆಡ್ಡಿ

 ಮೈಸೂರು :  ರಾಜ್ಯದಲ್ಲಿ ಯಾವ ಕ್ರಾಂತಿಯೂ ಆಗೋದಿಲ್ಲ. ನಾನೇ 5 ವರ್ಷ ಸಿಎಂ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ ನಾನೇನು ಹೇಳುವ ಅವಶ್ಯಕತೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರ ಸಂಬಂಧಿಸಿದಂತೆ ಈಗಾಗಲೇ ಸಿದ್ದರಾಮಯ್ಯ ಉತ್ತರ ಕೊಟ್ಟಿದ್ದಾರೆ. ಪವರ್ ಶೇರಿಂಗ್ ಬಗ್ಗೆ ನಾಲ್ಕು ಗೋಡೆಗಳ ಮಧ್ಯೆ ಹೈಕಮಾಂಡ್ ನಲ್ಲಿ ಏನು ಚರ್ಚೆ ಆಗಿತ್ತು ಎಂಬುದು ನನಗೆ ಗೊತ್ತಿಲ್ಲ ಎಂದರು.

ಸುರ್ಜೇವಾಲ ಶಾಸಕರ ಅಹವಾಲು ಕೇಳಿದ್ದಾರೆ. ಯಾವ ಮಂತ್ರಿ ಬಗ್ಗೆ ದೂರು ಬಂದಿದೆ ಎಂಬುದು ಗೊತ್ತಿಲ್ಲ. ಎಲ್ಲವನ್ನೂ ಪಕ್ಷದ ಹೈಕಮಾಂಡ್ ಸರಿ ಮಾಡುತ್ತದೆ ಎಂದು ಅವರು ಹೇಳಿದರು.

ಹೊರಗಿನಿಂದ ಬಂದು ಸಿದ್ದರಾಮಯ್ಯ 2 ಬಾರಿ ಸಿಎಂ ಎಂಬ ಕಾಂಗ್ರೆಸ್ ಕೆಲ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲಿಂದ ಬಂದಿದ್ದರೂ ಅವರು ಈಗ ಕಾಂಗ್ರೆಸ್ ಪಕ್ಷದ ನಾಯಕರು. ಅವರು ಜನಪ್ರಿಯ ನಾಯಕರಾಗಿದ್ದರು, ಮಾಸ್ ಲೀಡರ್, ಹೀಗಾಗಿ ಸಿಎಂ ಆದರು. ಸಿಎಂ ಆಗಿ ಜನರಿಗೆ ಕೆಲಸ ಮಾಡಿಲ್ವಾ ಎಂದು ಪ್ರಶ್ನಿಸಿದರು.

ಡಿ.ಕೆ. ಶಿವಕುಮಾರ್ ಹುಟ್ಟು ಕಾಂಗ್ರೆಸ್ಸಿಗರು, ವಿದ್ಯಾರ್ಥಿ ದಿಸೆಯಿಂದಲೇ ಕಾಂಗ್ರೆಸ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಅವರೂ ಸಿಎಂ ಆಗ್ತಾರೆ, ಯಾವಾಗ ಏನು ಗೊತ್ತಿಲ್ಲ. ಅದಕ್ಕೂ ಕಾಲ ಬರುತ್ತದೆ. ಈ ಅವಧಿಯಲ್ಲೇ ಸಿಎಂ ಆಗ್ತಾರಾ? ಎಂಬ ಪ್ರಶ್ನೆಗೆ ಅದೆಲ್ಲಾ ನನಗೆ ಗೊತ್ತಿಲ್ಲ ಎಂದರು.

PREV
Read more Articles on

Latest Stories

ಅಂಗನವಾಡಿ ಮಕ್ಕಳ ಅನುಕೂಲಕ್ಕಾಗಿ 'ಅಪಾರ್‌ ಐಡಿ': ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿ
ರಾಜ್ಯದ 14 ಜಿಲ್ಲೆಗಳಲ್ಲಿ 2 ದಿನ ಭಾರೀ ಮಳೆ
ಲಾಕ್ಡೌನ್ನಿಂದ ಹುಟ್ಟಿ, ಕಪೆಕ್ನಿಂದ ಬೆಳೆದು ನಿಂತ ಉದ್ಯಮ