ದೇಶದ ಬಗ್ಗೆ ನಾವು ಪ್ರಶ್ನೆ ಕೇಳಬಾರದಾ?: ಲಾಡ್‌

KannadaprabhaNewsNetwork |  
Published : Jul 15, 2025, 01:02 AM IST
ಸಂತೋಷ ಲಾಡ್. | Kannada Prabha

ಸಾರಾಂಶ

ಅಧಿಕಾರಕ್ಕೆ ಬರುವ ಮುನ್ನ ಏನು ಭರವಸೆ ಕೊಟ್ಟಿದ್ದರೋ ಅದನ್ನೇ ಕೇಳುತ್ತೇವೆ. ಅದಕ್ಕೆ ಉತ್ತರಿಸುತ್ತಿಲ್ಲ. ಬದಲಿಗೆ ಮೈ ಪರಚಿಕೊಂಡಂತೆ ಮಾತನಾಡುತ್ತಾರೆ. ದೇಶ ಬಿಜೆಪಿ, ಕಾಂಗ್ರೆಸ್‌ಗೆ ಸೇರಿದ್ದಲ್ಲ. ದೇಶವನ್ನಾಳುವ ಪ್ರಧಾನಿಗೆ ಪ್ರಶ್ನೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ನಾವು ಕೇಳುತ್ತೇವೆ. ಅದಕ್ಕೆ ಉತ್ತರಿಸಲಿ.

ಹುಬ್ಬಳ್ಳಿ: ದೇಶದಲ್ಲಿ 1.14 ಲಕ್ಷ ಕೋಟಿ ಮೌಲ್ಯದ ₹500ರ ಖೋಟಾ ನೋಟುಗಳಿವೆ ಎಂದು ಆರ್‌ಬಿಐ ಹೇಳಿದೆ. ಕೇಂದ್ರ ಸರ್ಕಾರ ಏನು ಕ್ರಮ ಕೈಗೊಂಡಿದೆ. ಇದನ್ನು ನಾವು ಪ್ರಶ್ನಿಸಬಾರದಾ? ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಕೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖೋಟಾ ನೋಟು ಮತ್ತು ಭ್ರಷ್ಟಾಚಾರ ನಿಯಂತ್ರಿಸುತ್ತೇವೆ ಎಂದು ಪ್ರಧಾನಿ ಮೋದಿ ನೋಟು ಅಮಾನ್ಯ ಮಾಡಿದರು. ಆದರೆ, ಏನಾಯಿತು?. ಇದೀಗ ಆರ್‌ಬಿಐ ಬಿಡುಗಡೆ ಮಾಡಿರುವ ವರದಿಯಲ್ಲಿ 1.14 ಲಕ್ಷ ಕೋಟಿ ನಕಲಿ ನೋಟುಗಳು, 2 ಸಾವಿರಗಳ 26 ಸಾವಿರ ಕೋಟಿ ನಕಲಿ ನೋಟುಗಳಿವೆ. ಪ್ರಧಾನಿ ಮತ್ತು ಅವರ ಸಚಿವರು, ಸಂಸದರು ಯಾಕೆ ಮಾತನಾಡುತ್ತಿಲ್ಲ. ನಾವು ಈ ಬಗ್ಗೆ ಕೇಳಬಾರದಾ? ಎಂದರು.

ಅಧಿಕಾರಕ್ಕೆ ಬರುವ ಮುನ್ನ ಏನು ಭರವಸೆ ಕೊಟ್ಟಿದ್ದರೋ ಅದನ್ನೇ ಕೇಳುತ್ತೇವೆ. ಅದಕ್ಕೆ ಉತ್ತರಿಸುತ್ತಿಲ್ಲ. ಬದಲಿಗೆ ಮೈ ಪರಚಿಕೊಂಡಂತೆ ಮಾತನಾಡುತ್ತಾರೆ. ದೇಶ ಬಿಜೆಪಿ, ಕಾಂಗ್ರೆಸ್‌ಗೆ ಸೇರಿದ್ದಲ್ಲ. ದೇಶವನ್ನಾಳುವ ಪ್ರಧಾನಿಗೆ ಪ್ರಶ್ನೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ನಾವು ಕೇಳುತ್ತೇವೆ. ಅದಕ್ಕೆ ಉತ್ತರಿಸಲಿ ಎಂದು ಛೇಡಿಸಿದರು. ಇವರಿಗೆ ಮುಜುಗರ ತರುವಂತಹ ಪ್ರಶ್ನೆ ಕೇಳಿದರೆ ತ್ರಾಸ್‌ ಆಗುತ್ತದೆ ಎಂದು ಕಿಡಿಕಾರಿದರು.

ಭಾರತ- ಪಾಕಿಸ್ತಾನ ನಡುವಣ ಯುದ್ಧವನ್ನು ನಾನೇ ನಿಲ್ಲಿಸಿರುವುದಾಗಿ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕಳೆದ 40-50 ದಿನಗಳ ಅವಧಿಯಲ್ಲಿ ಕನಿಷ್ಠ 25 ಬಾರಿ ಹೇಳಿದ್ದಾರೆ. ಅದರ ಬಗ್ಗೆ ಪ್ರಧಾನಿ ಮೋದಿ, ಸಚಿವರು ಏಕೆ ತುಟಿ ಬಿಚ್ಚುತ್ತಿಲ್ಲ. ಗುಜರಾತ್ ಪೋರ್ಟ್‌ದಲ್ಲಿ ₹21 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ಸಿಕ್ಕಿತು. ಅದು ಭಯೋತ್ಪಾದಕ ಚಟುವಟಿಕೆಗೆ ಬಳಕೆಯಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ತಿಳಿಸಿದೆ. ಇದರ ಬಗ್ಗೆ ಪ್ರಧಾನಿಯವರು ಮಾಹಿತಿ ನೀಡಬೇಕು ಎಂದರು.

2014ರ ಮುನ್ನ ಅಭಿವೃದ್ಧಿಯಲ್ಲಿ 78ನೇ ಸ್ಥಾನದಲ್ಲಿದ್ದ ಭಾರತ ಈಗ 144ನೇ ಸ್ಥಾನಕ್ಕೆ ಕುಸಿದಿದೆ. ಕಳೆದ 11 ವರ್ಷಗಳಲ್ಲಿ ದೇಶವನ್ನು ಕೊಳ್ಳೆ ಹೊಡೆದಿದ್ದಾರೆ ಎಂದು ಆರೋಪಿಸಿದ ಸಚಿವ ಲಾಡ್, ಬಿಜೆಪಿ ಆಡಳಿತ ಇರುವ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶದಲ್ಲಿ 96 ಸಾವಿರ ಶಾಲೆಗಳಲ್ಲಿ 60 ಸಾವಿರ ಶಾಲೆಗಳನ್ನು ಮುಚ್ಚಿದ್ದು, 5ರಿಂದ 8ನೇ ತರಗತಿ ವರೆಗೆ 2.50 ಕೋಟಿ ಮಕ್ಕಳು ಶಾಲೆಯಿಂದ ವಂಚಿತರಾಗಿದ್ದಾರೆ. ಇದನ್ನು ನಾವು ಪ್ರಶ್ನಿಸಬಾರದೇ. ಬಿಜೆಪಿಯವರು ಯಾಕೆ ಮಾತನಾಡುವುದಿಲ್ಲ ಎಂದು ಕುಟುಕಿದರು.

ಎಲ್‌ಐಸಿ ಎಲ್ಲಿ..?: ಗುಜರಾತ್ ಆಯಿಲ್ ಕಾರ್ಪೋರೇಶನ್‌ಗೆ ₹21ಸಾವಿರ ಕೋಟಿ ಕೊಟ್ಟಿದ್ದೀರಿ. ಅವರೇನಾದರೂ ಒಂದು ಲೀಟರ್ ಪೆಟ್ರೊಲ್, ಡಿಸೇಲ್ ತೆಗೆದಿದ್ದಾರೆಯೇ? ಸಾರ್ವಜನಿಕರು ಪಾವತಿಸಿದ ಎಲ್‌ಐಸಿ ಹಣವನ್ನು ಅದಾನಿ, ಅಂಬಾನಿಗೆ ಕೊಟ್ಟಿದ್ದಾರೆ. ಅದೇನಾಯಿತು ಎಂಬುದನ್ನು ತಿಳಿಸಬೇಕು ಎಂದರು.

ನಮ್ಮ ಪಕ್ಷದಲ್ಲಿ ನಾವೇನಾದರೂ ಮಾಡಿಕೊಳ್ಳುತ್ತೇವೆ: ಲಾಡ್

ಹುಬ್ಬಳ್ಳಿ: ನಮ್ಮ ಪಕ್ಷದಲ್ಲಿ ನಾವೇನಾದರೂ ಮಾಡಿಕೊಳ್ಳುತ್ತೇವೆ. ಇವರಿಗೇನು? ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಬಿಜೆಪಿಗರನ್ನು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಗಾಗಿ ದೊಂಬರಾಟ ನಡೆಯುತ್ತಿದೆ ಎಂಬ ಬಿಜೆಪಿಗರ ಹೇಳಿಕೆಗೆ ಕಿಡಿಕಾರಿದ ಅವರು, ಕರ್ನಾಟಕ ಕಾಂಗ್ರೆಸ್‌ನಲ್ಲಿ ಏನು ನಡೆಯುತ್ತಿದೆ ಎಂಬುದು ನಮಗೆ ಬಿಟ್ಟದ್ದು. ಅದೆಲ್ಲ ಬಿಜೆಪಿಗೇಕೆ ಬೇಕು. ನಾವೇನಾದರೂ ಮಾಡಿಕೊಳ್ಳುತ್ತೇವೆ. ಇವರಿಗೇನು ಸಂಬಂಧ. ನಮ್ಮ ಸರ್ಕಾರದ ಉತ್ತಮ ಆಡಳಿತದಿಂದ ದೇಶದಲ್ಲೇ ಜಿಡಿಪಿಯಲ್ಲಿ ಕರ್ನಾಟಕ ನಂಬರ್ ಒನ್ ಇದೆ. ಬಿಜೆಪಿ ಆಡಳಿತವಿರುವ ಗುಜರಾತ್, ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ತಾನಗಳಲ್ಲಿ ಯಾವ ಅಭಿವೃದ್ಧಿಯಾಗಿದೆ ಹೇಳಲಿ. ಇವರೇನು ಮಾಡುತ್ತಿದ್ದಾರೆ ಎಂಬುದನ್ನು ಹೇಳಲಿ. ರಾಜ್ಯ ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಅದನ್ನು ಹೇಳಲಿ ಎಂದು ಸವಾಲೆಸೆದರು.

PREV

Latest Stories

ಅಂಗನವಾಡಿ ಮಕ್ಕಳ ಅನುಕೂಲಕ್ಕಾಗಿ 'ಅಪಾರ್‌ ಐಡಿ': ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿ
ರಾಜ್ಯದ 14 ಜಿಲ್ಲೆಗಳಲ್ಲಿ 2 ದಿನ ಭಾರೀ ಮಳೆ
ಲಾಕ್ಡೌನ್ನಿಂದ ಹುಟ್ಟಿ, ಕಪೆಕ್ನಿಂದ ಬೆಳೆದು ನಿಂತ ಉದ್ಯಮ