ಶಿರಹಟ್ಟಿ: ನಾವು ಪರಿಸರವನ್ನು ಕೇವಲ ಹಸಿರಿಗಾಗಿ ಮಾತ್ರವಲ್ಲ, ನಮ್ಮ ಉಸಿರಿಗಾಗಿ ಸಂರಕ್ಷಣೆ ಮಾಡಿಕೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಕೇಶವ ದೇವಾಂಗ ಕರೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ೨೦೨೫-೨೬ನೇ ಸಾಲಿನ ಪರಿಸರ ಮಾಹಿತಿ ಕಾರ್ಯಕ್ರಮದ ನಿಮಿತ್ತ ಪಟ್ಟಣದ ಹಿಂದೂ ವೀರಶೈವ ಲಿಂಗಾಯತ ಸಮಿತಿ ಸಂಯಮದಲ್ಲಿ ಹಿಂದೂ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಕೃತಿ ಯಾರ ಆಸ್ತಿಯಲ್ಲ. ಮಾನವ ಸೇರಿದಂತೆ ಎಲ್ಲಾ ಪ್ರಾಣಿಗಳು ಬದುಕುತ್ತಿರುವುದು ಪ್ರಕೃತಿಯಿಂದ, ನೀರು, ಗಾಳಿ, ಮರ, ಪರಿಸಕ್ಕೆ ಜಾತಿ, ಧರ್ಮವಿಲ್ಲ ಎಂದು ಹೇಳಿದರು.ನಮ್ಮ ಮಕ್ಕಳು ನಮ್ಮ ನಿಜವಾದ ಆಸ್ತಿ. ಅವರಿಗಾಗಿ ಭವಿಷ್ಯ ರೂಪಿಸಬೇಕೆಂದು ಮಕ್ಕಳಿಂದಲೇ ಒಂದೊಂದು ಗಿಡ ನೆಡೆಸಿ ಅವರೇ ಅವುಗಳನ್ನು ಬೆಳೆಸುವಂತೆ ಮಾಡಬೇಕು ಎಂಬುದು ನಮ್ಮೆಲ್ಲರ ಆಸೆ. ಮಾನವ ಭೂಮಿ ಮೇಲಿರುವ ಸಕಲ ಜೀವಸಂಕುಲದೊಂದಿಗೆ ಬದುಕಬೇಕು. ಹೀಗಾಗಿ ಹೆಚ್ಚೆಚ್ಚು ಗಿಡ ನೆಟ್ಟು ಪೋಷಿಸಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು. ಜಾಗತಿಕ ತಾಪಮಾನ ಹೆಚ್ಚಾಗುವುದರಿಂದ ಹಲವು ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಇದರ ಸಮತೋಲನ ಕಾಪಾಡಲು ನಾಗರಿಕರು ಹೆಚ್ಚು ಗಿಡಗಳನ್ನು ನೆಟ್ಟು ಪೋಷಣೆ ಮಾಡಬೇಕು. ನಮಗೆ ಅಗತ್ಯವಿರುವ ಆಮ್ಲಜನಕ, ಆಹಾರ ಮತ್ತು ಆರೋಗ್ಯಕ್ಕಾಗಿ ಸಸಿ ನೆಡಬೇಕು. ದೇಶಾದ್ಯಂತ ಅರಣ್ಯ ಸಂಪತ್ತು ನಾಶವಾಗುತ್ತಿದ್ದು, ಉಳಿಸುವ ಕಾರ್ಯವಾಗಬೇಕು. ಪರಿಸರ ಸಂರಕ್ಷಣೆಯಾದರೆ ಮಾತ್ರ ಮನುಕುಲಕ್ಕೆ ಉಳಿವು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಚ್.ಎಂ. ದೇವಗೀರಿ ಮಾತನಾಡಿ, ಮರಗಳನ್ನು ಹೆಚ್ಚು ಬೆಳೆಸುವುದರಿಂದ ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಲಕಾಲಕ್ಕೆ ಉತ್ತಮ ಮಳೆ ಬರುತ್ತದೆ. ಇಂದು ಉತ್ತಮ ಪರಿಸರದ ಕನಸು ನನಸು ಮಾಡಬೇಕಾದ ಅನಿವಾರ್ಯವಿದೆ. ಪರಿಸರ ಸಂರಕ್ಷಣೆ ನಿರಂತರ ಪ್ರಕ್ರಿಯೆ. ಪರಿಸರ ಬೆಳೆಸಿದಷ್ಟು ಮಾನವನಿಗೆ ಹೆಚ್ಚಿನ ಸಹಾಯ ಮಾಡುತ್ತದೆ. ಆದರೆ ಪರಿಸರ ನಾಶವಾದಂತೆ ಮನುಷ್ಯನ ಬದುಕು ಕೂಡ ದುರ್ಬಲಗೊಳ್ಳುತ್ತದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು. ಪರಿಸರ ಸಂರಕ್ಷಣೆಯ ಪರಿಜ್ಞಾನ ಇಂದಿನ ಪೀಳಿಗೆಗೆ ಬರಬೇಕು. ಮನುಷ್ಯ ತನ್ನ ಜೀವಿತಾವಧಿಯಲ್ಲಿ ೨ ಗಿಡಗಳನ್ನಾದರೂ ನೆಟ್ಟು ಅದರ ಪೋಷಣೆ ಮಾಡಬೇಕು. ಮುಖ್ಯವಾಗಿ ವಿದ್ಯಾರ್ಥಿಗಳ ಹೆಸರಿನಲ್ಲಿ ಗಿಡಗಳನ್ನು ನೆಡಿಸಿ ಅದರ ಪೋಷಣೆಯ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ವಹಿಸಬೇಕು. ಮನುಷ್ಯ ಆರೋಗ್ಯವಾಗಿ ಬದುಕಬೇಕಾದರೆ ಉತ್ತಮ ಪರಿಸರದ ಅನಿವಾರ್ಯವಿದೆ. ಬದಲಾವಣೆಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ. ಪ್ರಕೃತಿಯ ಮೇಲೆ ಮಾನವನ ಅಕ್ರಮಣ ಹೆಚ್ಚಾಗುತ್ತಿದೆ. ಜೀವಪರಿಸರ ಬಿಕ್ಕಟ್ಟು ಉಂಟಾಗಲಿದೆ. ಪ್ರಕೃತಿಯಲ್ಲಿನ ನೈಸರ್ಗಿಕ ಸಂಪತ್ತು ನಾಷವಾಗುತ್ತಿದ್ದು, ಅನೇಕ ಜೀವರಾಶಿಗಳು ಕಣ್ಮರೆಯಾಗುತ್ತಿವೆ ಎಂದರು. ಇಂದು ಹಲವಾರು ಕಾರಣಗಳಿಂದ ಪರಿಸರ ನಾಶವಾಗುತ್ತಿದೆ. ಆದ್ದರಿಂದ ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾದಾಗ ಪರಿಸರ ಸುರಕ್ಷಿತವಾಗಿರುತ್ತದೆ. ಮನೆಯಂಗಳ, ಬೀದಿಯಲ್ಲಿ, ಶಾಲಾ ಆವರಣ, ಸರ್ಕಾರಿ ಕಚೇರಿಗಳ ಆವರಣದಲ್ಲಿ ಕಡ್ಡಾಯವಾಗಿ ಸಸಿ ನೆಡಬೇಕು ಎಂದು ಕರೆ ನೀಡಿದರು. ವಿಶ್ವನಾಥ ಕಪ್ಪತ್ತನವರ, ಚಂದ್ರಕಾಂತ ನೂರಶೆಟ್ಟರ, ಹುಮಾಯೂನ ಮಾಗಡಿ, ಪ್ರಕಾಶ ಭೋರಶೆಟ್ಟರ, ಬಸವರಾಜ ತುಳಿ, ಪುನೀತ ಓಲೇಕಾರ, ಸಿದ್ದು ಪಾಟೀಲ, ಮುತ್ತಣ್ಣ ಮಜ್ಜಗಿ, ರಫೀಕ ಆದ್ರಳ್ಳಿ, ಬಸವರಾಜ ಭೋರಶೆಟ್ಟರ, ಎ.ವಿ. ಸಂಕದಾಳ, ಮಹೇಶ ಅರ್ಕಸಾಲಿ, ನಾರಾಯಣ ಸಿಂಗಟಾಲೂರ, ಮೋಹನ್ ನರಗುಂದ, ಪ್ರಭು ಹಲಸೂರ, ಮುರಗೇಶ ಅಲೂರ, ಸುರೇಶ ಹವಳದ ಸೇರಿ ಅನೇಕರು ಇದ್ದರು.