ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಬಿ.ಜಿ.ಅಜಯಕುಮಾರ, ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ, ಶ್ರೀನಿವಾಸ ಟಿ.ದಾಸಕರಿಯಪ್ಪ, ದೇವರಮನಿ ಶಿವಕುಮಾರ, ದಕ್ಷಿಣ ಉಪಚುನಾವಣೆಗೆ ಬಿಜೆಪಿಯಿಂದ ಸಾಮಾನ್ಯ ಕಾರ್ಯಕರ್ತನಿಗೆ ಕೊಟ್ಟರೂ ನಾವು ಅಂತಹ ಅಭ್ಯರ್ಥಿಗೆ, ಬಿಜೆಪಿ ಗೆಲುವಿಗೆ ಶ್ರಮಿಸುತ್ತೇವೆ ಎಂದು ಘೋಷಿಸಿದರು.
ಮಾಜಿ ಮೇಯರ್ ಬಿ.ಜಿ.ಅಜಯಕುಮಾರ ಮಾತನಾಡಿ, ಹಿರಿಯ ಶಾಸಕರಾಗಿದ್ದ ದಿವಂಗತ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ತೆರವಾದ ಕ್ಷೇತ್ರಕ್ಕೆ ಉಪ ಚುನಾವಣೆಯು ಶೀಘ್ರವೇ ಘೋಷಣೆಯಾಗಲಿದೆ. ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಬಿಜೆಪಿ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇವೆ. ಬಿಜೆಪಿಯಲ್ಲಿ 2 ಗುಂಪಿವೆ ಎಂಬುದಾಗಿ ಹೇಳುತ್ತಿದ್ದರು, ಅದಕ್ಕೆಲ್ಲಾ ಈಗ ತೆರೆ ಎಳೆದಿದ್ದೇವೆ ಎಂದರು.ನಮ್ಮ ಪಕ್ಷದ ಯಾರಿಗೆ ಟಿಕೆಟ್ ಕೊಟ್ಟರೂ, ಬಿಜೆಪಿ ಗೆಲ್ಲಬೇಕೆಂಬ ನಿರೀಕ್ಷೆಯನ್ನು ನಾವ್ಯಾರೂ ಹುಸಿಗೊಳಿಸುವುದಿಲ್ಲ. ಶೇ.100ಕ್ಕೆ ನೂರರಷ್ಟು ಬಿಜೆಪಿಯನ್ನು ದಕ್ಷಿಣ ಉಪಚುನಾವಣೆಯಲ್ಲಿ ನಾವು ಗೆಲ್ಲಿಸುತ್ತೇವೆ. ಈಗ ದಿಢೀರನೇ ಬಂದು ಟಿಕೆಟ್ ಕೇಳುವವರು ಇಲ್ಲಿ ಯಾರೂ ಇಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ, ಪಕ್ಷಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿಕೊಂಡು ಬಂದವರೇ ಇಲ್ಲಿ ಟಿಕೆಟ್ ಕೇಳುತ್ತಿದ್ದೇವೆ. 40 ವರ್ಷದಿಂದಲೂ ಪಕ್ಷ ಕಟ್ಟಿ ಕೆಲಸ ಮಾಡಿದವರಿದ್ದಾರೆ. ಅಂತಹವರಿಗೆ ಟಿಕೆಟ್ ಕೊಡಿ ಎಂಬುದಾಗಿ ಕೇಳುತ್ತಿದ್ದೇವೆ ಎಂದು ತಿಳಿಸಿದರು.
ಓಬಿಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಎಸ್‌ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಮುಖಂಡರಾದ ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ, ಶಿವನಗೌಡ ಪಾಟೀಲ, ಟಿಂಕರ್ ಮಂಜಣ್ಣ, ಪಿ.ಎಸ್.ಜಗದೀಶಕುಮಾರ ಪಿಸೆ, ಗುರು ಸೋಗಿ, ಪೈಲ್ವಾನ ಹನುಮಂತ, ಶಿವಾನಂದ, ಎಂ.ಎಚ್.ಶ್ರೀನಿವಾಸ, ಮಲ್ಲಪ್ಪ ಇತರರು ಇದ್ದರು.
ಸ್ವಾಭಿಮಾನಿ ಬಳಗ ಜಿ.ಬಿ.ವಿನಯಕುಮಾರ ನಮಗೆ ಶತೃವಲ್ಲ. ಬಳಗ ಸ್ಥಾಪಿಸಿಕೊಂಡು, ತಮ್ಮದೇ ಪ್ರಯತ್ನ ನಡೆಸಿದ್ದಾರೆ. ಪಕ್ಷಕ್ಕೆ ಎಲ್ಲಾ ಜಾತಿ, ಜನಾಂಗದವರೂ ಬೇಕು. ಒಂದು ವೇಳೆ ವಿನಯಕುಮಾರ ಬಿಜೆಪಿಗೆ ಬಂದರೆ ಪಕ್ಷದ ವರಿಷ್ಟರು ಏನೇ ಕೊಡುವುದಿದ್ದರೂ ಮುಂದಿನ ದಿನಗಳಲ್ಲಿ ನೀಡುತ್ತಾರೆ. ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಎಸ್.ಎ.ರವೀಂದ್ರನಾಥ ಶೀಘ್ರವೇ ಜನರ ಮುಂದೆ ಮಾತನಾಡಲಿದ್ದಾರೆ ಎಂದು ದಕ್ಷಿಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಬಿ.ಜಿ.ಅಜಯಕುಮಾರ ಹೇಳಿದರು.
ಯಶವಂತರಾವ್ ಜಾಧವ್ ಬಿಜೆಪಿ ಟಿಕೆಟ್ ಆಕಾಂಕ್ಷಿ.