ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತೆರೆದಿದ್ದ ಮತಗಟ್ಟೆಯಲ್ಲಿ ಒಟ್ಟುತಾ ಲೂಕಿನ 431 ಮತದಾರರಲ್ಲಿ 355 ಮಂದಿ ಶಿಕ್ಷಕರು ಮತದಾನ ಮಾಡಿದರು. ಶಿಕ್ಷಕರು ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾವಣೆ ಮಾಡುತ್ತಿದ್ದರು. ಚುನಾವಣಾಧಿಕಾರಿ ತಹಸೀಲ್ದಾರ್ ಪರುಶುರಾಮ್ ಅಧಿಕಾರಿಗಳ ತಂಡ ಚುನಾವಣಾ ಕಾರ್ಯದಲ್ಲಿ ತೊಡಗಿದ್ದರು.
ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಕೆ.ವಿವೇಕಾನಂದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರಿಗೆ ಮತ ನೀಡುವಂತೆ ಕಾರ್ಯಕರ್ತರು ಪ್ರತ್ಯೇಕ ಕಡೆಗಳಲ್ಲಿ ಶಿಕ್ಷಕರನ್ನು ಮನವೊಲಿಸಿದರು.ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತೆರೆದಿದ್ದ ಮತಗಟ್ಟೆ ಬಳಿ ಶಾಸಕ ರಮೇಶ ಬಂಡಿಸಿದ್ದೇಗೌಡ ಹಾಗೂ ಇತರೆ ಕಾಂಗ್ರೆಸ್ ನಾಯಕರು, ಮತ್ತೊಂದೆಡೆ ಮೈತ್ರಿಕೂಟದ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿ ಶಿಕ್ಷಕರ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದು ಸಾಮಾನ್ಯವಾಗಿತ್ತು.
ಮತದಾನ ಆರಂಭದಲ್ಲಿ ಮತದಾರರ ಸಂಖ್ಯೆ ವಿರಳವಾಗಿತ್ತು. ಸಮಯ ಕಳೆದಂತೆ ಮತಗಟ್ಟೆಯತ್ತ ಮತದಾರರು ಆಗಮಿಸುತ್ತಿದ್ದು ಮಧ್ಯಾಹ್ನ 12ರ ವೇಳೆಗೆ ಹೆಚ್ಚಿನ ಮತದಾರರು ಆಗಮಿಸಿ ಸಾಲಿನಲ್ಲಿ ನಿಂತು ಮನ ಚಲಾಯಿಸಿದರು.
ಮಳವಳ್ಳಿ:ಪಟ್ಟಣದ ತಾಲೂಕು ಕಚೇರಿಯಲ್ಲಿ ಶಿಕ್ಷಕರ ಕ್ಷೇತ್ರದ ಚುನಾವಣೆ ಯಾವುದೇ ಗೊಂದಲವಿಲ್ಲದೇ ಬಿರುಸಿನಿಂದ ಶಾಂತಿಯುತವಾಗಿ ನಡೆಯಿತು.
ಕಾಂಗ್ರೆಸ್, ಎನ್‌ಡಿಎ ಹಾಗೂ ಬಿಎಸ್‌ಪಿ ಮುಖಂಡರು ಹಾಗೂ ಕಾರ್ಯಕರ್ತರು ನಿಗದಿತ ಸ್ಥಳದಲ್ಲಿ ಸೇರಿದ್ದರು. ಮತದಾರರ ಮತದಾನಕ್ಕೆ ಆಗಮಿಸುವ ವೇಳೆ ತಮ್ಮ ಪಕ್ಷಕ್ಕೆ ಮತಹಾಕುವಂತೆ ಮನವಿ ಮಾಡಿಕೊಂಡರು.ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಮರಿತಿಬ್ಬೇಗೌಡರು ತಾಲೂಕಿನವರೇ ಆಗಿರುವ ಹಿನ್ನೆಲೆಯಲ್ಲಿ ಪಕ್ಷಾತೀತವಾಗಿ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರಿಗೆ ಮತಹಾಕುವಂತೆ ಕೋರಿದರು. ಬಿಎಸ್‌ಪಿ ಮುಖಂಡರು ಹ.ರಾ.ಮಹೇಶ್ ಪರ ಮತಯಾಚಿಸಿದರೇ ಎನ್‌ಡಿಎ ಅಭ್ಯರ್ಥಿ ಪರವಾಗಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಮತಯಾಚನೆ ಮಾಡಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.