ಸುಬ್ರಹ್ಮಣ್ಯ: ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ನೈಋತ್ಯ ರೈಲ್ವೇ ಪ್ರಧಾನ ವ್ಯವಸ್ಥಾಪಕ ಮುಕುಲ್ ಶರಣ್ ಮಾಥುರ್ ಶುಕ್ರವಾರ ಭೇಟಿ ನೀಡಿ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿ, ಬಳಕೆದಾರರ ಅಹವಾಲು ಆಲಿಸಿದರು.
ಬಳಿಕ ಪ್ರಧಾನ ವ್ಯವಸ್ಥಾಪಕರು ಸಕಲೇಶಪುರ ಘಾಟ್ ಸೆಕ್ಷನ್‌ನ ವಿದ್ಯುತ್ತಿಕರಣ ಕಾರ್ಯಗಳನ್ನೂ ಪರಿಶೀಲಿಸಿದರು. ಹೊಸದಾಗಿ ವಿದ್ಯುದೀಕೃತಗೊಳ್ಳುತ್ತಿರುವ ಭಾಗದ ಸಿದ್ಧತೆ ಹಾಗೂ ಭದ್ರತಾ ಮಾನದಂಡ ಪರಿಶೀಲಿಸಿದರು. ಸುಬ್ರಹ್ಮಣ್ಯ ರಸ್ತೆ ಮತ್ತು ಹಾಸನ ನಡುವಿನ ವಿಭಾಗದಲ್ಲಿ ವಿಂಡೋ ಟ್ರಯಾಂಗಲ್ ಪರಿಶೀಲನೆ ನಡೆಸಲಾಗಿದ್ದು, ರೈಲ್ವೆ ಹಳಿಗಳ ಸ್ಥಿತಿ, ಸಿಗ್ನಲ್ ವ್ಯವಸ್ಥೆಗಳು ಹಾಗೂ ಸುರಕ್ಷತೆ ಮತ್ತು ಸುಗಮ ರೈಲು ಸಂಚಾರಕ್ಕೆ ಅಗತ್ಯವಿರುವ ಇತರೆ ಕಾರ್ಯಾಚರಣಾ ಅಂಶಗಳ ಮೌಲ್ಯಮಾಪನ ಮಾಡಿದರು.
ಜಿಎಂ ಅವರನ್ನು ಭೇಟಿ ಮಾಡಿದ ರೈಲ್ವೇ ಬಳಕೆದಾರರು ತಮ್ಮ ವಿವಿಧ ಬೇಡಿಕೆಗಳನ್ನು ಸಲ್ಲಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ - ಮಂಗಳೂರು ರೈಲು ಬಳಕೆದಾರರ ಹಿತರಕ್ಷಣಾ ವೇದಿಕೆ ಪುತ್ತೂರು ಸಂಚಾಲಕ ಸುದರ್ಶನ್ ಪುತ್ತೂರು, ನೆಟ್ಟಣ ರೈಲು ಬಳಕೆದಾರರ ಸಂಘದ ಅಧ್ಯಕ್ಷ ಪ್ರಸಾದ್ ಕೆ.ಜಿ. ಮತ್ತಿತರರು ಉಪಸ್ಥಿತರಿದ್ದರು.