ದಕ್ಷಿಣ ಶಿಕ್ಷಕರ ಕ್ಷೇತ್ರ: ಮರಿತಿಬ್ಬೇಗೌಡರನ್ನು ಬೆಂಬಲಿಸಲು ಮನವಿ

KannadaprabhaNewsNetwork | Published : May 29, 2024 12:50 AM

ಸಾರಾಂಶ

ಪ್ರಜಾಸತ್ತಾತ್ಮಕ ಉಳಿಸಲು, ಉಚಿತ ಕಡ್ಡಾಯ ಶಿಕ್ಷಣದ ಗುರಿ ಈಡೇರಲು, ಎಲ್ಲ ಸಮುದಾಯಗಳು ಸೌಹಾರ್ದದಿಂದ ಬದುಕಲು ನಾವು ಕಾಂಗ್ರೆಸ್ ಬೆಂಬಲಿಸಬೇಕು. ಹೊಸ ಶಿಕ್ಷಣ ನೀತಿ ನಮ್ಮನ್ನು ನೂರು ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗುತ್ತದೆ. ಇದರ ಹಿಂದೆ ಹಿಡನ್ ಅಜೆಂಡಾ ಅಡಗಿದೆ. ಇದನ್ನು ಎಲ್ಲರೂ ವಿರೋಧಿಸಬೇಕು. ಇಲ್ಲದಿದ್ದಲ್ಲಿ ನಮ್ಮ ಮಕ್ಕಳಿಗೆ ತಳ ಸಮುದಾಯದವರಿಗೆ ಶಿಕ್ಷಣ ಮತ್ತು ಉದ್ಯೋಗ ಸಿಗುವುದಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರನ್ನು ಬೆಂಬಲಿಸುವಂತೆ ಸಾಹಿತಿಗಳು, ಪ್ರಗತಿಪರ ಹೋರಾಟಗಾರರು ಮನವಿ ಮಾಡಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಚಿಂತಕ ಜಾಣಗೆರೆ ವೆಂಕಟರಾಮಯ, ಡಾ.ಎಸ್.ಜಿ.ಸಿದ್ದರಾಮಯ್ಯ, ಸಾಹಿತಿ, ಡಾ.ಬಂಜಗೆರೆ ಜಯಪ್ರಕಾಶ್, ಡಾ.ಬೈರಮಂಗಲ ರಾಮೇಗೌಡ ಇತರರು, ಶಿಕ್ಷಣ ಪ್ರಜಾಸತ್ತಾತ್ಮಕವಾಗಿ ಇರಬೇಕು ಎನ್ನುವ ನಿಟ್ಟಿನಲ್ಲಿ ಮರಿತಿಬ್ಬೇಗೌಡರ ಆಯ್ಕೆ ಅನಿವಾರ್ಯ ಎಂದರು.

ಪ್ರಜಾಸತ್ತಾತ್ಮಕ ಉಳಿಸಲು, ಉಚಿತ ಕಡ್ಡಾಯ ಶಿಕ್ಷಣದ ಗುರಿ ಈಡೇರಲು, ಎಲ್ಲ ಸಮುದಾಯಗಳು ಸೌಹಾರ್ದದಿಂದ ಬದುಕಲು ನಾವು ಕಾಂಗ್ರೆಸ್ ಬೆಂಬಲಿಸುತ್ತಿರುವುದಾಗಿ ತಿಳಿಸಿದರು.

ಹೊಸ ಶಿಕ್ಷಣ ನೀತಿ ನಮ್ಮನ್ನು ನೂರು ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗುತ್ತದೆ. ಇದರ ಹಿಂದೆ ಹಿಡನ್ ಅಜೆಂಡಾ ಅಡಗಿದೆ. ಇದನ್ನು ಎಲ್ಲರೂ ವಿರೋಧಿಸಬೇಕು. ಇಲ್ಲದಿದ್ದಲ್ಲಿ ನಮ್ಮ ಮಕ್ಕಳಿಗೆ ತಳ ಸಮುದಾಯದವರಿಗೆ ಶಿಕ್ಷಣ ಮತ್ತು ಉದ್ಯೋಗ ಸಿಗುವುದಿಲ್ಲ ಎಂದು ಎಚ್ಚರಿಸಿದರು.

ಎಲ್ಲಾ ಕ್ಷೇತ್ರಗಳು ಖಾಸಗಿಕರಣ ಆಗುತ್ತಿರುವ ಹಿನ್ನೆಲೆ ಶಿಕ್ಷಣವು ಮಾರಾಟದ ಸರಕಾಗುತ್ತದೆ. ಹಿಂದುಳಿದವರಿಗೆ ಶಿಕ್ಷಣ ಉದ್ಯೋಗ ಸಿಗುವುದಿಲ್ಲ. ಆದ್ದರಿಂದ ಮರಿತಿಬ್ಬೇಗೌಡರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಸಾಹಿತಿ ಪ್ರೊ.ಮುಕುಂದರಾಜು ಮಾತನಾಡಿ, ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ನೂತನ ಶಿಕ್ಷಣ ನೀತಿ ತರುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಕಲುಷಿತಗೊಲಿಸಿದೆ. ಇದರಿಂದ ಹಿಂದುಳಿದವರಿಗೆ ಭವಿಷ್ಯ ಇಲ್ಲದಂತೆ ಆಗಿದೆ. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ನುಡಿದರು.

ಶಿಕ್ಷಕರ ಸಮಸ್ಯೆಗಳು ಸಾಕಷ್ಟಿವೆ. ಮರಿತಿಬ್ಬೇಗೌಡರು ಹೋರಾಟದಿಂದ ಬಂದವರು. ಅವರು ಶಿಕ್ಷಕರ ಸಮಸ್ಯೆ ಬಗೆಹರಿಸುವ ವಿಶ್ವಾಸ ತಮಗಿದೆ. ಶಿಕ್ಷಕರು ತಮ್ಮ ಮತಗಳನ್ನು ಮಾರಿಕೊಳ್ಳದೆ ಯಾವುದೇ ಆಮಿಷಕ್ಕೆ ಒಳಗಾಗದೆ ಶೈಕ್ಷಣಿಕ ವಲಯ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಹಿನ್ನೆಲೆಯಲ್ಲಿ ಉತ್ತಮ ಅಭ್ಯರ್ಥಿ ಮರಿತಿಬ್ಬೇಗೌಡರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಾಹಿತಿ ಕಾ.ತ.ಚಿಕ್ಕಣ್ಣ , ಕರ್ನಾಟಕ ಬಂಜಾರ ಅಭಿವೃದ್ಧಿ ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್.ಗೋವಿಂದಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಅಹಿಂದ ವರ್ಗದ ಶಿಕ್ಷಕರು ಮರಿತಿಬ್ಬೇಗೌಡರನ್ನು ಬೆಂಬಲಿಸಬೇಕು: ಎಂ.ಎಲ್ .ಸುರೇಶ್ಮಂಡ್ಯ:ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರನ್ನು ಅಹಿಂದ ವರ್ಗದ ಶಿಕ್ಷಕರು ಬೆಂಬಲಿಸುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಹಿರಿಯ ಉಪಾಧ್ಯಕ್ಷ ಎಂ.ಎಲ್.ಸುರೇಶ್ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಿತಿಬ್ಬೇಗೌಡರು ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಶಿಕ್ಷಕರ ಪರವಾಗಿ ಕೆಲಸ ಮಾಡಿದ್ದಾರೆ. ಹಿಂದಿನ ಹಲವು ಚುನಾವಣೆಗಳಲ್ಲಿ ಗೆಲುವು ಸಾಧಿಸಿರುವ ಮರಿತಿಬ್ಬೇಗೌಡರು ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ ಎಂದರು.ವಿಧಾನ ಪರಿಷತ್ತಿನ ಒಳಗೆ ಮತ್ತು ಹೊರಗೆ ಮರಿತಿಬ್ಬೇಗೌಡರು ಶಿಕ್ಷಕರ ಪರ ಹೋರಾಟ ನಡೆಸಿದ್ದಾರೆ. ಸದಾ ಶಿಕ್ಷಕರ ಏಳಿಗೆಗಾಗಿ ಶ್ರಮಿಸುತ್ತಿರುವ ಅವರನ್ನು ಈ ಬಾರಿಯೂ ಬೆಂಬಲಿಸುವಂತೆ ಮನವಿ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಜೂ.3ರ ಚುನಾವಣೆಯಲ್ಲಿ ಮಂಡ್ಯ, ಹಾಸನ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಅಹಿಂದ ಮತದಾರರು ಮೊದಲ ಪ್ರಾಶಸ್ತ್ಯದ ಮತವನ್ನು ಮರಿತಿಬ್ಬೇಗೌಡರಿಗೆ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಡಿವಾಳ ಸಮಾಜದ ಅಧ್ಯಕ್ಷ ಡಿ.ರಮೇಶ್, ಜಿಲ್ಲಾ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಎಸ್.ರಾಜಣ್ಣ, ನಗರಸಭೆ ಮಾಜಿ ಸದಸ್ಯ ಅಮ್ಜದ್ ಪಾಷಾ, ಎನ್.ದೊಡ್ಡಯ್ಯ, ಸತೀಶ್, ಶ್ರೀನಿವಾಸು ಹಲವರು ಇದ್ದರು.

Share this article