ರಾಮನಗರ: ಬಯಲುಸೀಮೆ ಜಿಲ್ಲೆ ಬೆಂಗಳೂರು ದಕ್ಷಿಣದಲ್ಲಿ ನಿಗದಿತ ಸಮಯದಲ್ಲಿ ಮಳೆ ಬಾರದ ಕಾರಣ ಬಿತ್ತನೆ ಕಾರ್ಯಕ್ಕೆ ಭಾರಿ ಹಿನ್ನಡೆಯಾಗಿ, ರೈತರನ್ನು ಆತಂಕಕ್ಕೆ ದೂಡಿದೆ
ರಾಮನಗರ: ಬಯಲುಸೀಮೆ ಜಿಲ್ಲೆ ಬೆಂಗಳೂರು ದಕ್ಷಿಣದಲ್ಲಿ ನಿಗದಿತ ಸಮಯದಲ್ಲಿ ಮಳೆ ಬಾರದ ಕಾರಣ ಬಿತ್ತನೆ ಕಾರ್ಯಕ್ಕೆ ಭಾರಿ ಹಿನ್ನಡೆಯಾಗಿ, ರೈತರನ್ನು ಆತಂಕಕ್ಕೆ ದೂಡಿದೆ.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮುಂಗಾರು ಮಳೆಯ ಕೊರತೆ, ಕೆರೆ ಕಟ್ಟೆಗಳಲ್ಲಿ ನೀರಿನ ಅಭಾವ ಹಾಗೂ ಭೂಮಿಯಲ್ಲಿ ತೇವಾಂಶದ ಕೊರತೆಯಿಂದ ಬಿತ್ತನೆ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿದೆ. ಪೂರ್ವ ಸಿದ್ಧತೆ ಮಾಡಿಕೊಂಡಿದ್ದರೂ ಮಳೆಯ ನಿರೀಕ್ಷೆಯಲ್ಲಿ ಅನ್ನದಾತರು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
2026-27ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ಒಟ್ಟು 80,758 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ನಿಗದಿ ಪಡಿಸಲಾಗಿದ್ದು, (ಜುಲೈ 6 ರವರೆಗೆ)912 ಹೆಕ್ಟೇರ್ ಪ್ರದೇಶದಲ್ಲಿ ರಾಗಿ, ಎಳ್ಳು, ಅಲಸಂದೆ, ತೊಗರಿ, ನೆಲಗಡಲೆ ಬೆಳೆಗಳು ಬಿತ್ತನೆಯಾಗಿದೆ.
ಭತ್ತ, ರಾಗಿ, ಮುಸುಕಿನ ಜೋಳ, ತೊಗರಿ, ಹುರುಳಿ, ಅಲಸಂದೆ, ಅವರೆ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಮಳೆ ಕೊರತೆಯಿಂದ ಬಿತ್ತನೆ ಕಾರ್ಯಕ್ಕೆ ಅಡ್ಡಿ ಉಂಟಾಗಿದ್ದು, ಶೇ.1.13ರಷ್ಟು ಮಾತ್ರ ಬಿತ್ತನೆಯಾಗಿರುವ ಬಗ್ಗೆ ಕೃಷಿ ಇಲಾಖೆಯಲ್ಲಿ ವರದಿಯಾಗಿದೆ. ಶೇ.98ರಷ್ಟು ಬಿತ್ತನೆ ಕಾರ್ಯವೇ ಆಗಿಲ್ಲ.
ಜಿಲ್ಲೆಯಲ್ಲಿ ಒಟ್ಟು 80,758 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯದ ಗುರಿ ಹೊಂದಲಾಗಿದ್ದು,ಈ ಪೈಕಿ 912 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಸಾಧಿಸಲಾಗಿದೆ. ಈ ಮೂಲಕ ಶೇಕಡ 1.13ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ನಡೆದಿದೆ.
ಭತ್ತ 3005 ಹೆಕ್ಟೇರ್, ಪ್ರದೇಶದಲ್ಲಿ ಬಿತ್ತನೆ ಗುರಿಯಿದ್ದು, ಇಲ್ಲಿವರೆಗೂ ಶೂನ್ಯ ಸಾಧನೆಯಾಗಿದೆ. 65 ಸಾವಿರ ಹೆಕ್ಟೇರ್ ಗುರಿಯಲ್ಲಿ 120 ಹೆಕ್ಟೇರ್ ನಲ್ಲಿ ರಾಗಿ ,2500 ಹೆಕ್ಟೇರ್ ಗುರಿಯಲ್ಲಿ 120 ಹೆಕ್ಟೇರ್ ಮುಸುಕಿನ ಜೋಳ , 1400 ಹೆಕ್ಟೇರ್ ಪೈಕಿ 163 ಹೆಕ್ಟೇರ್‌ನಲ್ಲಿ ತೊಗರಿ, 380 ಹೆಕ್ಟೇರ್ ಪೈಕಿ 179 ಹೆಕ್ಟೇರ್ ನಲ್ಲಿ ಅಲಸಂದೆ, 480 ಹೆಕ್ಟೇರ್ ಪೈಕಿ 34 ಹೆಕ್ಟೇರ್‌ನಲ್ಲಿ ಅವರೆ ಬಿತ್ತನೆ ಮಾಡಲಾಗಿದೆ. ಹುರುಳಿ 5140 ಹೆಕ್ಟೇರ್, ಹರಳು 190 ಹೆಕ್ಟೇರ್, ಸಾಸುವೆ 18 ಹೆಕ್ಟೇರ್, ಕಬ್ಬು 225 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಕಾರ್ಯವೇ ನಡೆದಿಲ್ಲ.
ಶೇ.20ರಷ್ಟು ಮಳೆ ಕೊರತೆ:
ಜಿಲ್ಲೆಯಲ್ಲಿ 2026ರ ಜನವರಿ 1ರಿಂದ ಜೂನ್ 5ರವರೆಗೆ ಒಟ್ಟು ವಾಡಿಕೆ ಮಳೆ 252.5 ಮಿಲಿ ಮೀಟರ್ ಇದ್ದು, ವಾಸ್ತವ 232.4 ಮಿ.ಮೀ ಮಳೆಯಾಗಿದೆ. ಜುಲೈ 1 ರಿಂದ 5ರವರೆಗೆ ಒಟ್ಟು ವಾಡಿಕೆ ಮಳೆ 5.3 ಮಿಲಿಮೀಟರ್ ಇದ್ದು, ವಾಸ್ತವ 0.6 ಮಿಲಿ ಮೀಟರ್ ಮಳೆಯಾಗಿದೆ. ಜನವರಿ 1ರಿಂದ ಜುಲೈ 5ರವರೆಗೆ 252.5 ಮಿಲಿ ಮೀಟರ್ ವಾಡಿಕೆ ಮಳೆಯಲ್ಲಿ 232.5 ಮಿಲಿ ಮೀಟರ್ ಮಲೆಯಾಗಿದ್ದು, ಶೇಕಡ 20 ಮಿಲಿಮೀಟರ್ ಮಳೆ ಕೊರತೆಯಾಗಿದೆ.
ಈ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣೆ ವಿಷಯಗಳ ಕುರಿತು ಸಭೆ ನಡೆಸಿರುವ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಪ್ರಸಕ್ತ ಮುಂಗಾರಿನಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಜಿಲ್ಲೆಯಲ್ಲಿ ಸಮಪರ್ಕವಾಗಿ ಕುಡಿಯುವ ನೀರು, ಜಾನುವಾರುಗಳ ಮೇವು ಪೂರೈಕೆ, ಅಲ್ಪಕಾಲಿನ ಬೆಲೆ ಬೆಳೆಯಲು, ರೈತರು ಬೆಳೆ ವಿಮೆಯ ಪ್ರಯೋಜನ ಪಡೆದುಕೊಳ್ಳಲು ಅನುಕೂಲವಾಗಲು ಸಂಬಂಧಿಸಿದ ಇಲಾಖೆಗಳ ಎಲ್ಲಾ ಅಧಿಕಾರಿಗಳು ಸಜ್ಜಾಗಬೇಕೆಂದು ಸೂಚನೆ ನೀಡಿದ್ದಾರೆ.
ಅಲ್ಲದೆ, ಮಳೆ ಕೊರತೆಯಿಂದ ಕೃಷಿಯಲ್ಲಿ ಹಿನ್ನೆಡೆಯಾಗಲಿದೆ. ಮೇವಿನ ಕೊರತೆ ಕಂಡುಬರಲಿದೆ. ಕೃಷಿಯಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆಯುವಂತೆ ರೈತರಲ್ಲಿ ಅರಿವು ಮೂಡಿಸಿ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಪೂರೈಸಬೇಕು. ಮೇವು ಬೆಳೆಗಳನ್ನು ಬೆಳೆಯಬೇಕು. ಬೆಳೆ ವಿಮೆ ಮಾಡಿಸಿಕೊಳ್ಳುವಂತೆ ರೈತರಲ್ಲಿ ಅರಿವು ಮೂಡಿಸಬೇಕು. ಜಾನುವಾರುಗಳಿಗೆ ಕುಡಿಯುವ ನೀರು ಮೇವು ಕೊರತೆಯಾಗದಂತೆ ಕ್ರಮವಹಿಸಬೇಕೆಂದು ಸಚಿವರು ತಾಕೀತು ಮಾಡಿದ್ದಾರೆ.
ತೋಟಗಾರಿಕೆ ಬೆಳೆಗಳಿಗೂ ಹೊಡೆತ:
ಮಳೆ ಅಭಾವದಿಂದಾಗಿ ತೋಟಗಾರಿಕಾ ಬೆಳೆಗಳ ಮೇಲೂ ಸಾಕಷ್ಟು ಪರಿಣಾಮ ಬೀರುತ್ತಿದೆ. ಕಷ್ಟ ಕಾಲದಲ್ಲಿ ಅನ್ನದಾತರ ಕೈ ಹಿಡಿಯುತ್ತಿದ್ದ ತೋಟಗಾರಿಕೆ ಬೆಳೆಗಳು ಮಳೆಯಾಗದ ಕಾರಣ ಸೊರಗುತ್ತಿವೆ.
ಕೋಟ್ ................
ಮುಂದಿನ ದಿನಗಳಲ್ಲಿ ಮಳೆ ಕೊರತೆ ಇನ್ನಷ್ಟು ಎದುರಾಗುವ ಸಾಧ್ಯತೆಗಳಿದ್ದು, ಇದರಿಂದಾಗಿ ಕುಡಿಯುವ ನೀರು ಬಾಧಿಸಬಹುದು. ಕುಡಿಯುವ ನೀರಿಗೆ ಹಾಹಾಕಾರವಾಗದಂತೆ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಸಂಬಂಧಿಸಿದ ಅಧಿಕಾರಿಗಳು ಮುಂಜಾಗ್ರತಾ ಹಾಗೂ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು.
-ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವರು, ಬೆಂ.ದಕ್ಷಿಣ ಜಿಲ್ಲೆ
ಕೋಟ್ .................
ಈ ಜಿಲ್ಲೆ ಮಳೆಯಾಶ್ರಿತ ಪ್ರದೇಶವಾಗಿದ್ದು, ನಿರೀಕ್ಷೆಯಂತೆ ಮಳೆ ಆಗದಿರುವ ಕಾರಣ ಬಿತ್ತನೆ ಕಾರ್ಯದಲ್ಲಿ ಹಿನ್ನಡೆಯಾಗಿದೆ. ಮಳೆ ಬಂದಲ್ಲಿ ರಾಗಿ, ಅಲಸಂದೆ, ಅವರೆ ಸೇರಿ ಇತರೆ ಬೆಳೆಗಳ ಬಿತ್ತನೆ ಕಾರ್ಯ ಮಾಡಲು ಕಾಲಾವಕಾಶ ಇದೆ.
-ಅಂಬಿಕಾ, ಜಂಟಿ ಕೃಷಿ ನಿರ್ದೇಶಕರು, ಬೆಂ.ದಕ್ಷಿಣ ಜಿಲ್ಲೆ
(ಯಾವುದಾದರೂ ಒಂದು ದ್ವಿದಳ ಧಾನ್ಯ ಬೆಳೆಯ ಒಂದು ಚಿತ್ರ ಬಳಸಿ ಸರ್)
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.