ಕನ್ನಡಪ್ರಭ ವಾರ್ತೆ ರಾಯಚೂರು
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬಿತ್ತನೆ ಬೀಜ, ರಸ-ಗೊಬ್ಬರ, ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರು ಹಾಗೂ ವಿದ್ಯುತ್ ಸಮಸ್ಯೆಯಾಗದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ರಾಜ್ಯ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಸೂಚಿಸಿದರು.ಸ್ಥಳೀಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ರಾಯಚೂರು ತಾಪಂ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂಗಾರು ಪೂರ್ವದಲ್ಲಿ ಭರವಸೆಯ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಈ ಹಿನ್ನೆಲೆ ಬೇಡಿಕೆಗೆ ಅನುಗುಣವಾಗಿ ಬೀಜ ಮತ್ತು ರಸಗೊಬ್ಬರ ದಾಸ್ತಾನು ಮಾಡಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ರೈತರಿಗೆ ವಿತರಿಸಬೇಕು. ಖಾಸಗಿ ರಸ ಗೊಬ್ಬರ ಅಂಗಡಿಗಳಲ್ಲಿ ನಿಗದಿಪಡಿಸಿದ ದರಕ್ಕಿಂತ ಹೆಚ್ಚುವರಿಯಾಗಿ ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ವಹಿಸಬೇಕು ಎಂದರು.
ತೋಟಗಾರಿಕೆ ಅಧಿಕಾರಿಗೆ ಕ್ಲಾಸ್: ಸಭೆ ಆರಂಭದಲ್ಲಿ ಕೃಷಿ ಇಲಾಖೆ ಚರ್ಚೆ ನಂತರ ತೋಟಗಾರಿಕೆ ಇಲಾಖೆಯ ಪ್ರಗತಿ ಪರಿಶೀಲನೆ ಕುರಿತು ಮಾಹಿತಿ ಪಡೆದ ಶಾಸಕರು, ನರೇಗಾದಡಿ ಸಸಿಗಳನ್ನು ನೆಡುವ ಕೆಲಸದಲ್ಲಿ ಪ್ರಗತಿ ಕಾಣದ್ದನ್ನು ಗಮನಿಸಿದ ಶಾಸಕರು ಅಧಿಕಾರಿ ವಿರುದ್ಧ ಗರಂಗೊಂಡು ಕ್ಲಾಸ್ ತೆಗೆದುಕೊಂಡರು.ನಂತರ ಮಾತನಾಡಿದ ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಮಹೇಶ, ತೋಟಗಾರಿಕೆ ಇಲಾಖೆಯಲ್ಲಿ ಹೆಚ್ಚುವರಿಯಾಗಿ ತೋಟಗಾರಿಕೆ ಬೆಳೆ ವಿಸ್ತೀರ್ಣ ಮಾಡುತ್ತಿದ್ದು, ತೋಟಗಾರಿಕೆ ಮಾಡಲು 600 ರೈತರು ಮುಂದಾಗಿದ್ದಾರೆ. ಮಾವು ಮತ್ತು ಮೂಸಂಬಿ ಬೆಳೆಯಲು ಮುಂದಾಗಿದ್ದಾರೆ. ನರೇಗಾ ಯೋಜನೆಯಡಿಯಲ್ಲಿ ಸಸಿ ವಿತರಣೆ ಮತ್ತು ಇತರೆ ಕೆಲಸ ಪ್ರಗತಿಯಲ್ಲಿದೆ ಎಂದರು.
ತಾಲೂಕಿನಲ್ಲಿ ಎಷ್ಟು ಶಾಲೆಗಳು ಮಳೆಗೆ ಸೋರುತ್ತವೆ, ಶಿಥಿಲಾವಸ್ಥೆಗೊಂಡಿವೆ ಎನ್ನುವುದನ್ನು ವಾರದಲ್ಲಿ ವರದಿ ಕೊಡುವಂತೆ ಬಿಇಒಗೆ ಶಾಸಕರು ಸೂಚನೆ ನೀಡಿದರು. ತಾಲೂಕಿನಲ್ಲಿ ಪ್ರಾಥಮಿಕ ಶಾಲೆಗಳಲ್ಲಿ 587 ಅತಿಥಿ ಶಿಕ್ಷಕರು, ಪ್ರೌಢಶಾಲಾ ವಿಭಾಗದಲ್ಲಿ 151 ಅತಿಥಿ ಶಿಕ್ಷಕರು ಅಗತ್ಯವಿದ್ದು, 140 ನೇಮಕಾತಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರೌಢ ಶಾಲಾ ವಿಭಾಗಕ್ಕೆ ಇನ್ನು 11 ಅತಿಥಿ ಶಿಕ್ಷಕರ ಅವಶ್ಯಕತೆಯಿದೆ. ಶಿಶು ಅಭಿವೃದ್ಧಿ ಯೋಜನೆಯಡಿ ಎಲ್ಲಾ ಅಂಗನವಾಡಿಗಳಿಗೆ ಇಲಾಖೆಯಿಂದ ನೀಡುವ ಅಹಾರವನ್ನು ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿಯಿಂದ ಯು.ಕೆ.ಜಿ, ಆರಂಭವಾಗಿದ್ದು, ದಾಖಲಾತಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.ಸಭೆಯಲ್ಲಿ ಎಸಿ ಮೆಹಬೂಬಿ, ಜಿಪಂ ಯೋಜನಾಧಿಕಾರಿ ಪ್ರಕಾಶ ವಡ್ಡರ್, ತಹಸೀಲ್ದಾರ್ ಸುರೇಶ ವರ್ಮಾ, ಡಿವೈಎಸ್ಪಿ ಸತ್ಯ ನಾರಾಯಣ, ತಾಪಂ ಇಒ ಚಂದ್ರಶೇಖರ ಪವಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ, ಪಿಡಿಒ ಸೇರಿ ಇತರರು ಇದ್ದರು.