ಜಿಲ್ಲೆಯಲ್ಲಿ 2.70 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ

KannadaprabhaNewsNetwork |  
Published : May 24, 2024, 12:47 AM IST
23ಡಿಡಬ್ಲೂಡಿ1ಮುಂಗಾರು ಹಂಗಾಮಿನ ಕುರಿತಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕರು ಇದ್ದಾರೆ.  | Kannada Prabha

ಸಾರಾಂಶ

ರಸಗೊಬ್ಬರ ಅಥವಾ ಬಿತ್ತನೆ ಬೀಜದ ಕೃತಕ ಅಭಾವ ಸೃಷ್ಟಿಸದಂತೆ ಸುಗಮ ವಿತರಣೆಗೆ ಹಾಗೂ ಕೃಷಿ ಪರಿಕರ ವಿತರಣೆಗೆ ಸಂಬಂಧಿಸಿದಂತೆ ನಿಯಂತ್ರಿಸಲು ಐದು ಮಾರಾಟ ಮಳಿಗೆ, ವಿತರಣಾ ಕೇಂದ್ರಗಳಿಗೆ ಒಬ್ಬ ಅಧಿಕಾರಿಯನ್ನು ಕೃಷಿ ಇಲಾಖೆಯಿಂದ ನಿಯೋಜಿಸಲಾಗಿದೆ.

ಧಾರವಾಡ:

ಬರುವ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 2.70 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಅದಕ್ಕಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಸಂಗ್ರಹಣೆ ಮಾಡಿಕೊಳ್ಳಲಾಗಿದೆ. 31 ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ನಡೆಯುತ್ತಿದ್ದು ರೈತರು ಈಗಿನಿಂದಲೇ ಖರೀದಿಸಲು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಮುಂಗಾರು ಪೂರ್ವ ಚೆನ್ನಾಗಿ ಮಳೆಯಾಗಿದೆ. ಸರಿಯಾದ ಸಮಯಕ್ಕೆ ಬಿತ್ತನೆ ಮಾಡಲು ಹದವಾಗಿ ಮಳೆಯಾಗಿದೆ. ಮೇ 21ರ ವರೆಗೆ 81 ಮಿಮೀ ವಾಡಿಕೆ ಮಳೆ ಪೈಕಿ 112 ಮಿಮೀ ಮಳೆಯಾಗಿದ್ದು ರೈತರು ಮುಂಗಾರು ಬಿತ್ತನೆಗೆ ಬೇಕಾದ ಎಲ್ಲ ಸಿದ್ಧತೆ ಕೈಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಬೀಜ ಹಾಗೂ ಗೊಬ್ಬರದ ಕೊರತೆ ಎದುರಾಗದಂತೆ ಕೃಷಿ ಇಲಾಖೆ ಎಲ್ಲ ರೀತಿಯ ಸಿದ್ಧತೆ ಕೈಗೊಂಡಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರಮುಖವಾಗಿ 67150 ಹೆಕ್ಟೇರ್‌ ಹೆಸರು, 59000 ಹತ್ತಿ, 57125 ಮುಸುಕಿನ ಜೋಳ, 33100 ಸೋಯಾ ಅವರೆ, 25000 ಶೇಂಗಾ, 7300 ಉದ್ದು ಹಾಗೂ 11522 ಹೆಕ್ಟೇರ್ ಭತ್ತ ಸೇರಿದಂತೆ 2.70 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಇದಕ್ಕಾಗಿ ಕೃಷಿ ಇಲಾಖೆಗೆ 20,681 ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ ಬಂದಿದ್ದು ಈ ಪೈಕಿ 6568 ಕ್ವಿಂಟಲ್‌ ಪ್ರಮುಖ ಬೆಳೆಗಳ ಬೀಜಗಳನ್ನು ಮುಂಗಾರು ಪೂರ್ವವೇ ಸಂಗ್ರಹಿಸಿಡಲಾಗಿದೆ. ರೈತರು ಸಂಬಂಧಿಸಿದ ಹೋಬಳಿ ವಿತರಣಾ ಕೇಂದ್ರಗಳಿಗೆ ಪಡೆಯಬಹುದು ಎಂದ ಅವರು, 56,243 ಮೆಟ್ರಿಕ್‌ ಟನ್‌ಗಳಷ್ಟು ವಿವಿಧ ಗ್ರೇಡ್‌ಗಳ ರಸಗೊಬ್ಬರದ ಬೇಡಿಕೆ ಇದೆ. ಸಮಯಕ್ಕೆ ತಕ್ಕಂತೆ ಇರುವ ಬೇಡಿಕೆ ಈಡೇರಿಸಲಾಗುತ್ತಿದ್ದು, 33,240 ಮೆಟ್ರಿಕ್‌ ಟನ್‌ ರಸಗೊಬ್ಬರ ದಾಸ್ತಾನು ಮಾಡಲಾಗಿದೆ ಎಂದರು.

ರಸಗೊಬ್ಬರ ಅಥವಾ ಬಿತ್ತನೆ ಬೀಜದ ಕೃತಕ ಅಭಾವ ಸೃಷ್ಟಿಸದಂತೆ ಸುಗಮ ವಿತರಣೆಗೆ ಹಾಗೂ ಕೃಷಿ ಪರಿಕರ ವಿತರಣೆಗೆ ಸಂಬಂಧಿಸಿದಂತೆ ನಿಯಂತ್ರಿಸಲು ಐದು ಮಾರಾಟ ಮಳಿಗೆ, ವಿತರಣಾ ಕೇಂದ್ರಗಳಿಗೆ ಒಬ್ಬ ಅಧಿಕಾರಿಯನ್ನು ಕೃಷಿ ಇಲಾಖೆಯಿಂದ ನಿಯೋಜಿಸಲಾಗಿದೆ. ಜತೆಗೆ ಕೃಷಿ ಜಾಗೃತ ಕೋಶದ ಅಧಿಕಾರಿಗಳು ನಿಯಮಿತವಾಗಿ ಎಲ್ಲ ಮಾರಾಟ ಮಳಿಗೆಗೆ ಭೇಟಿ ನೀಡಿ ಪರಿಶೀಲಿಸಲು ಹಾಗೂ ನಕಲಿ ಕೃಷಿ ಪರಿಕರ ವಿತರಣೆ ಆಗದಂತೆ ನಿಗಾ ವಹಿಸಲಾಗುತ್ತಿದೆ. ಒಟ್ಟಾರೆ ಮುಂಗಾರು ಹಂಗಾಮಿನ ಬೀಜ, ಗೊಬ್ಬರ ಸೇರಿದಂತೆ ಮುಂಗಾರಿನಲ್ಲಿ ಪ್ರವಾಹ ಉಂಟಾದಾಗ ನಿರ್ವಹಿಸಬೇಕಾದ ಕಾರ್ಯಗಳ ಕುರಿತಾಗಿ ಗುರುವಾರ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಸಭೆ ನಡೆಸಿ ಸೂಚನೆ ಸಹ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.2023ನೇ ಸಾಲಿನ ಮುಂಗಾರು ಹಂಗಾಮಿನ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆಹಾನಿಗೆ ಬೆಳೆಹಾನಿ ಪರಿಹಾರ ಮೊತ್ತವನ್ನು ರೈತರ ಖಾತೆಗೆ ಹಾಕಲಾಗುತ್ತಿದೆ. ಹತ್ತು ಹಂತಗಳಲ್ಲಿ 1,06,707 ರೈತರಿಗೆ ₹ 108.12 ಕೋಟಿ ಇನ್‌ಪುಟ್‌ ಸಬ್ಸಿಡಿ ಜಮೆ ಮಾಡಲು ಅನುಮೋದನೆ ನೀಡಲಾಗಿದ್ದು, 6083 ರೈತರ ಖಾತೆ ಹೊರತು ಪಡಿಸಿ ಉಳಿದ ರೈತರಿಗೆ ಪರಿಹಾರ ಮೊತ್ತ ಜಮೆ ಮಾಡಲಾಗಿದೆ. ಪ್ರೂಟ್ಸ್‌ ಐಡಿ ಮಾಡಿಸದೇ ಇರುವುದು, ಬ್ಯಾಂಕ್‌ ಖಾತೆಗೆ ಆಧಾರ ಜೋಡಣೆ ಆಗದೇ ಇರುವುದು ಸೇರಿದಂತೆ ಏಳು ಕಾರಣಗಳಿಗಾಗಿ ಈ ರೈತರಿಗೆ ಪರಿಹಾರದ ಮೊತ್ತ ಹೋಗಿಲ್ಲ. ಸದ್ಯದಲ್ಲಿಯೇ ಅವುಗಳನ್ನು ಸರಿಪಡಿಸಿ ಪರಿಹಾರ ಜಮೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ