ಧಾರವಾಡ: ಕಳೆದ 2-3 ದಿನಗಳಿಂದ ಮಳೆ ತುಸು ಬಿಡುವು ನೀಡಿದ್ದು, ಜಿಲ್ಲೆಯ ರೈತರು ಮುಂಗಾರು ಬಿತ್ತನೆಗೆ ಸಜ್ಜಾಗುತ್ತಿದ್ದಾರೆ. ಇನ್ನೊಂದೆರಡು ದಿನಗಳ ಕಾಲ ಮಳೆ ಬಿಡುವು ನೀಡಿದರೆ ಜೂನ್ ಮೊದಲ ವಾರದಿಂದ ಬಿತ್ತನೆ ಕಾರ್ಯ ಶುರುವಾಗಲಿದೆ.
ಕೃಷಿ ಇಲಾಖೆ ಮಾಹಿತಿ ಪ್ರಕಾರ ಪ್ರಸಕ್ತ ವರ್ಷ 2.81 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ ಅತಿ ಹೆಚ್ಚು ಹೆಸರು 84,665 ಹೆಕ್ಟೇರ್, ಗೋವಿನಜೋಳ 60 ಸಾವಿರ ಹೆಕ್ಟೇರ್, ಹತ್ತಿ 52 ಸಾವಿರ, ಸೋಯಾ 34,600 ಹೆಕ್ಟೇರ್, ಶೇಂಗಾ 20,740 ಹೆಕ್ಟೇರ್, ಉದ್ದು 8,755 ಹೆಕ್ಟೇರ್ ಹೀಗೆ ಅನೇಕ ಬೆಳೆಗಳನ್ನು ಬೆಳೆಯುವ ಗುರಿ ಹೊಂದಲಾಗಿದೆ.
ಬೀಜ, ಗೊಬ್ಬರ ಸಜ್ಜು: ಇನ್ನು, ಈ ಗುರಿ ತಲುಪಲು ಕೃಷಿ ಇಲಾಖೆ ಒಟ್ಟು 16,479.81 ಕ್ವಿಂಟಲ್ ಬಿತ್ತನೆ ಬೀಜವನ್ನು ಸಂಗ್ರಹಿಸಿ ವಿತರಣೆಗೆ ಕ್ರಮ ಕೈಗೊಂಡಿದೆ. ಈ ಹಂಗಾಮಿಗೆ 49,471.08 ಟನ್ ರಸಗೊಬ್ಬರದ ಬೇಡಿಕೆ ಇದ್ದು, ಇಲ್ಲಿಯ ವರೆಗೆ 37,094.56 ಟನ್ ಪೂರೈಕೆಯಾಗಿದೆ. ಅದರಲ್ಲೂ ಡಿಎಪಿ 1,284 ಟನ್ ಸಂಗ್ರಹ ಇದ್ದು, ಜೂ. 1ರೊಳಗೆ 2,200 ಟನ್ ಡಿಎಪಿ ಜಿಲ್ಲೆಗೆ ಆಗಮಿಸಲಿದೆ. ಡಿಎಪಿ ಸೇರಿ ಒಟ್ಟಾರೆ 18,851.13 ಟನ್ ವಿವಿಧ ರಸಗೊಬ್ಬರಗಳು ಸಂಗ್ರಹವಿದೆ. ರೈತರಿಗೆ ಸಮಯಕ್ಕೆ ತಕ್ಕಂತೆ ವಿತರಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜನಾಥ ಅಂತರವಳ್ಳಿ ''''ಕನ್ನಡಪ್ರಭ''''ಕ್ಕೆ ಮಾಹಿತಿ ನೀಡಿದರು.ರೈತರು ರಸಗೊಬ್ಬರವನ್ನು ಕೇವಲ ಒಂದೇ ಸಂಸ್ಥೆಯ ಅಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೆ, ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಗಂಧಕ ಒದಗಿಸುವ 20:20:0:13 ಹಾಗೂ ಪೊಟ್ಯಾಷ್ ಒದಗಿಸುವ ಇತರ ಸಂಯುಕ್ತ ರಸಗೊಬ್ಬರಗಳಾದ 15:15:15, 10:26:26, 12:32:16, 22:22:11, 14:35:14, 17:17:17, 14:28:14, 19:19:19, 20:10:10 ನೀಡುವುದು ಉತ್ತಮ ಎಂದು ಕೃಷಿ ಇಲಾಖೆ ರೈತರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು.
ಬೀಜ, ಗೊಬ್ಬರ ಕೊರತೆ ಇಲ್ಲ: ಮುಂಗಾರು ಬಿತ್ತನೆ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಕಳೆದ ಹಲವು ದಿನಗಳಿಂದಲೇ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ತಯಾರಿ ಮಾಡಿಕೊಂಡಿದೆ. 2.81 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಯಾವುದೇ ಬೀಜಗಳಾಗಲಿ ಅಥವಾ ಡಿಎಪಿ ಸೇರಿದಂತೆ ಯಾವ ರಸಗೊಬ್ಬರದ ಕೊರತೆ ಇಲ್ಲ. ಹದ ಬಂದರೆ ಜೂನ್ ಮೊದಲ ವಾರದಿಂದ ಬಿತ್ತನೆ ಕಾರ್ಯ ಚುರುಕುಗೊಳ್ಳುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತಿಳಿಸಿದರು.ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಗುರಿ:
ಅಳ್ನಾವರ ತಾಲೂಕಿನಲ್ಲಿ 5686 ಹೆಕ್ಟೇರ್, ಧಾರವಾಡ - 58029, ಕಲಘಟಗಿ - 37869, ಹುಬ್ಬಳ್ಳಿ - 35766, ಹುಬ್ಬಳ್ಳಿ ನಗರ - 6719, ಕುಂದಗೋಳ - 52298, ನವಲಗುಂದ - 59042, ಅಣ್ಣಿಗೇರಿ - 26186 ಸೇರಿದಂತೆ ಒಟ್ಟು 281595 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.