ಕನ್ನಡಪ್ರಭ ವಾರ್ತೆ ಮೈಸೂರು
ಇತ್ತೀಚಿಗೆ ಮೈಸೂರಿನ ಕನಕಗಿರಿ ಮೂಲದ 4 ಜನ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಹೋಬಳಿಯ ಮುತ್ತತ್ತಿ ಬಳಿ ನದಿಯಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ಮೃತರಾಗಿದ್ದರು. ಈ ವೇಳೆ ಎಂ.ಕೆ. ಸೋಮಶೇಖರ್ ಅವರು ಶವಾಗಾರಕ್ಕೆ ತೆರಳಿ ನಂತರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಕುಟುಂಬದ ದುಃಖದಲ್ಲಿ ಭಾಗಿಯಾಗಿದ್ದರು.
ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೃತ ಕುಟುಂಬಗಳ ಆರ್ಥಿಕ ಸ್ಥಿತಿಗತಿಗಳನ್ನು ಮನವರಿಕೆ ಮಾಡಿ, ನಾಲ್ಕು ಜನರ ಕುಟುಂಬಕ್ಕೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಮಂಜೂರು ಮಾಡಿಸಲು ಮುತುವರ್ಜಿ ವಹಿಸಿ, ಮೃತರ ಕುಟುಂಬಕ್ಕೆ ತಲಾ 2 ಲಕ್ಷದಂತೆ ಒಟ್ಟು 8 ಲಕ್ಷ ರೂ. ಪರಿಹಾರ ದೊರಕುವಂತೆ ಮಾಡಿದರು.ಗುರುವಾರ ತಮ್ಮ ಜನನಿ ಗೃಹ ಕಚೇರಿಯಲ್ಲಿ ಮೃತ ಕುಟುಂಬಗಳಿಗೆ ಹಣ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಿದರು. ಮುತ್ತತ್ತಿ ಬಳಿ ನದಿಯಲ್ಲಿ ನಿಧನರಾದ ಗೌತಮ್ (ಮಹದೇವ) ತಾಯಿ ರತ್ನಮ್ಮ, ಮೃತ ಗುರು ಪತ್ನಿ ಕೆ. ಪೂಜಾ, ಮೃತ ನಾಗೇಶ್, ಭರತ್ ಗೌಡ ಅವರು ಪರವಾಗಿ ಮಂಜುಳಾ ಅವರಿಗೆ ಆದೇಶ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು.