ಪಹಣಿಯಲ್ಲಿ ಡೀಮ್ಡ್ ಫಾರೆಸ್ಟ್ ದಾಖಲು ಮಾಡಲು ಹೊರಟಿರುವ ಕ್ರಮ ಖಂಡನೀಯ

KannadaprabhaNewsNetwork |  
Published : May 30, 2025, 12:40 AM IST
ಕಾಫಿ ಮಂಡಳಿ ಮಾಜಿ ಸದಸ್ಯ ಡಿ.ಎಂ.ವಿಜಯ್  | Kannada Prabha

ಸಾರಾಂಶ

ಚಿಕ್ಕಮಗಳೂರು, ನೂರಾರು ವರ್ಷದಿಂದ ಬೆಳೆಗಾರರ ಅನುಭವದಲ್ಲಿರುವ ಜಮೀನನ್ನು ಡೀಮ್ಡ್ ಫಾರೆಸ್ಟ್ ಎಂದು ಪಹಣಿಯಲ್ಲಿ ದಾಖಲು ಮಾಡಲು ಹೊರಟಿರುವ ಕ್ರಮ ಖಂಡನೀಯ ಇದರ ಹಿಂದೆ ಅಧಿಕಾರಿಗಳ ಷಡ್ಯಂತ್ರವಿದೆ ಎಂದು ಕಾಫಿ ಮಂಡಳಿ ಮಾಜಿ ಸದಸ್ಯ ಡಿ.ಎಂ.ವಿಜಯ್ ಆರೋಪಿಸಿದರು.

ಕಂದಾಯ ಇಲಾಖೆ ಅಧಿಕಾರಿಗಳು ಗದಾಪ್ರಹಾರ ನಡೆಸುತ್ತಿದ್ದಾರೆ: ಡಿ.ಎಂ.ವಿಜಯ್

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನೂರಾರು ವರ್ಷದಿಂದ ಬೆಳೆಗಾರರ ಅನುಭವದಲ್ಲಿರುವ ಜಮೀನನ್ನು ಡೀಮ್ಡ್ ಫಾರೆಸ್ಟ್ ಎಂದು ಪಹಣಿಯಲ್ಲಿ ದಾಖಲು ಮಾಡಲು ಹೊರಟಿರುವ ಕ್ರಮ ಖಂಡನೀಯ ಇದರ ಹಿಂದೆ ಅಧಿಕಾರಿಗಳ ಷಡ್ಯಂತ್ರವಿದೆ ಎಂದು ಕಾಫಿ ಮಂಡಳಿ ಮಾಜಿ ಸದಸ್ಯ ಡಿ.ಎಂ.ವಿಜಯ್ ಆರೋಪಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೧೯೮೦ ರ ಫಾರೆಸ್ಟ್ ಕನ್ಸರ್ವೇಟಿವ್ ಕಾಯಿದೆ ಮುಂದಿಟ್ಟುಕೊಂಡು ೧೯೮೦ ರ ನಂತರ ಮಂಜೂರಾಗಿ ಪೋಡಿಯಾಗಿರುವ ಜಮೀನುಗಳನ್ನು ವಜಾ ಮಾಡಲು ಅಧಿಕಾರಿಗಳು ಹೊರಟಿದ್ದಾರೆ. ಕಾಫಿ ಬೆಳೆಗಾರರ ಮೇಲೆ ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳು ಗದಾಪ್ರಹಾರ ನಡೆಸುತ್ತಿದ್ದಾರೆ. ಇದನ್ನು ಮೆಟ್ಟಿ ನಿಲ್ಲಲು ಜಿಲ್ಲೆಯಲ್ಲಿ ಗಟ್ಟಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ ಎಂದು ಜನಪ್ರತಿನಿಧಿಗಳ ವಿರುದ್ಧ ಹರಿಹಾಯ್ದರು.ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಮಾತ್ರ ಕಾಫಿ ಬೆಳೆಯಲಾಗುತ್ತಿದೆ. ಇದರಿಂದ ಅತಿಹೆಚ್ಚು ಜಿಎಸ್‌ಟಿ ತೆರಿಗೆ ಸಂಗ್ರಹವಾಗುತ್ತಿದೆ. ಉದ್ಯಮದಿಂದ ಹೆಚ್ಚು ಉದ್ಯೋಗಾವಕಾಶ, ಅನುಕೂಲತೆ ಇದ್ದರೂ ಕೂಡ ೧೯೯೮ ರಿಂದ ಅಧಿಕಾರಿಗಳು ಕಾಫಿ ಬೆಳೆಗಾರರಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ. ಈ ಮಧ್ಯೆ ಬ್ಯಾಂಕ್‌ಗಳು ಬೆಳೆಗಾರರ ಮೇಲೆ ಸರ್ಫೇಸಿ ಕಾಯಿದೆ ಬಳಕೆ ಮಾಡುತ್ತಿದ್ದಾರೆ ಎಂದು ದೂರಿದರು.ರಾಜ್ಯದಲ್ಲಿರುವ ಮೀಸಲು ಅರಣ್ಯವನ್ನೇ ರಕ್ಷಣೆ ಮಾಡದ ಅರಣ್ಯ ಅಧಿಕಾರಿಗಳು ಈಗ ಡೀಮ್ಡ್ ಫಾರೆಸ್ಟ್ ಯೋಜನೆ ಜಾರಿಗೆ ಮುಂದಾಗಿದ್ದಾರೆ. ಅಧಿಕಾರಿಗಳಿಗೆ ಬೆಳೆಗಾರರ ಮೇಲೆ ಹೊಟ್ಟೆಕಿಚ್ಚು ಅಸೂಹೆ ಇದ್ದಂತೆ ಕಾಣುತ್ತಿದೆ. ಯಾರದೋ ಬಳಿ ಸುಪ್ರೀಂ ಕೋರ್ಟಿಗೆ ಪಿಐಎಲ್ ರಿಟ್ ಪಿಟಿಷನ್ ಹಾಕಿಸಿ ಸುಪ್ರೀಂ ಆದೇಶ ಮುಂದಿಟ್ಟುಕೊಂಡು ಬೆಳೆಗಾರರಿಗೆ ಕಿರುಕುಳ ನೀಡುವುದೇ ಇವರ ಕಾಯಕವಾಗಿದೆ ಎಂದು ಆರೋಪಿಸಿದರು.ಕಂದಾಯ ಭೂಮಿಯಾಗಿದ್ದ ಪ್ರದೇಶವನ್ನು ಡೀಮ್ಡ್ ಎಂದು ಘೋಷಿಸಿದ್ದಾರೆ. ಗೋಮಾಳ, ಕಾಫಿ ಖರಾಬು ಜಾಗವನ್ನು ೪(೧) ಅಧಿಸೂಚನೆ ಹೊರಡಿಸಿದ್ದಾರೆ. ೧೯೬೦-೭೦ ರಲ್ಲಿ ಜಮೀನು ಮಂಜೂರಾಗಿದ್ದರೂ ಪೋಡಿ ಕಾರ್ಯ ನಡೆಸಲು ಅರಣ್ಯ ಇಲಾಖೆ ಅಭಿಪ್ರಾಯ ಕೇಳುತ್ತಿದ್ದಾರೆ. ಒಟ್ಟಾರೆ ಕೃಷಿ ಚಟುಚಟಿಕೆಗೆ ಅಡಚಣೆ ಮಾಡುವುದು ಇವರ ಕಾಯಕವಾಗಿದೆ ಎಂದು ಟೀಕಿಸಿದರು. ಆಲ್ದೂರು ಸಮೀಪದ ಕೆಸವಿನ ಹಕ್ಲು ಗ್ರಾಮದಲ್ಲಿ ಕಲ್ಲುಗಣಿಗಾರಿಕೆ ನಡೆಸಲು ಅನುಮತಿ ನೀಡಿದ್ದರಿಂದ ಸುತ್ತಮುತ್ತಲ ಮನೆಗಳು ಬಿರುಕು ಬಿಟ್ಟಿವೆ. ಇಂತಹ ಅನಧಿಕೃತ ಕೆಲಸಕ್ಕೆ ಅರಣ್ಯ ಇಲಾಖೆ ಹೇಗೆ ಅನುಮತಿ ನೀಡಿದೆ ಎಂದು ಪ್ರಶ್ನಿಸಿದರು.ಬೆಳೆಗಾರರಿಗೆ ನಿರಂತರ ಕಿರುಕುಳ ನೀಡುವುದನ್ನು ಅಧಿಕಾರಿಗಳು ತಕ್ಷಣಕ್ಕೆ ನಿಲ್ಲಿಸದಿದ್ದರೆ ರಾಜ್ಯಮಟ್ಟದಲ್ಲಿ ಹೋರಾಟ ರೂಪಿಸಲಿದ್ದೇವೆ ಎಂದು ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬೆಳೆಗಾರರಾದ ಸುನಿಲ್, ಚಂದ್ರಶೇಖರ್, ಪುಟ್ಟೇಗೌಡ, ಲವ ಮತ್ತಿತರರಿದ್ದರು

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ