ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ವೇಣೂರು ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ 9 ದಿನಗಳು ಬಾಕಿಯಿದ್ದು ಪೂರ್ವಭಾವಿಯಾಗಿ ಮಂಗಳವಾರ ವೇಣೂರು ಬಾಹುಬಲಿ ಸಭಾಭವನದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಿಷ್ಯಂತ್ ಹಾಗೂ ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಾಪಾತ್ರ ಅವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.ರಾಜ್ಯಪಾಲರ ಆಗಮನಕ್ಕಾಗಿ ಹೊಸದಾಗಿ ಹೆಲಿಪ್ಯಾಡ್ ರಚಿಸುವುದು, ಮೂಡುಬಿದರೆ, ಬೆಳ್ತಂಗಡಿ, ಅಳದಂಗಡಿ ಇತ್ಯಾದಿ ಕಡೆಯಿಂದ ಬರುವ ರಸ್ತೆಗಳನ್ನು ದುರುಸ್ತಿಗೊಳಿಸುವುದು, ರಸ್ತೆಗಳ ಅಂಚಿನಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವುದು, ನೇತಾಡುತ್ತಾ ಅಪಾಯಕಾರಿಯಾಗಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸುವುದು ಮತ್ತು ಮಸ್ತಕಾಭೀಷೇಕ ನಡೆಯುವ 9 ದಿನಗಳ ಕಾಲ ವಿದ್ಯುತ್ ವ್ಯತ್ಯಯವಾಗದಂತೆ ಎಚ್ಚರವಹಿಸುವ ಬಗ್ಗೆ ಚರ್ಚೆ ನಡೆದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಡಲಾಯಿತು.
ಸುರಕ್ಷತಾ ಕ್ರಮಗಳಿಗಾಗಿ ಕಂಟ್ರೋಲ್ ರೂಂ ಸ್ಥಾಪಿಸಿ ವಿಶೇಷ ಬಂದೋಬಸ್ತ್ ನ ಬಗ್ಗೆ ಪರಿಶೀಲಿಸಿ ಅದನ್ನು ಕಾರ್ಯಗತಗೊಳಿಸುವ ಬಗ್ಗೆ ಮಾಹಿತಿಗಳನ್ನು ಎಸ್.ಪಿ. ನೀಡಿದರು. ಸುಮಾರು 40 ಕಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಬಗ್ಗೆ ನಿರ್ಧರಿಸಲಾಯಿತು. ಕಾರ್ಯಕ್ರಮ ನಡೆಯುವ ಪರಿಸರದ ಭೂಪಟವನ್ನು ಸಿದ್ಧಪಡಿಸಿ ಅದರಲ್ಲಿ ವೇದಿಕೆಯಿಂದ ಹಿಡಿದು ಶೌಚಾಲಯದ ತನಕದ ಸ್ಥಳಗಳನ್ನು ಗುರುತಿಸಿ ಅಲ್ಲಲ್ಲಿ ಫಲಕಗಳನ್ನುಅಳವಡಿಸುವಂತೆ ಸೂಚನೆ ನೀಡಲಾಯಿತು. ವಾಹನ ಸಂಚಾರಕ್ಕೆ ಪಾಸ್: ಬೆಟ್ಟಕ್ಕೆ ಬರುವ ದಾರಿ ಹಾಗೂ ಅದರ ಮಧ್ಯ ಇರುವ ಮನೆಮಂದಿಗೆ ವಾಹನಕ್ಕೆ ಪಾಸ್ ನೀಡಬೇಕಿದೆ. ಇಲ್ಲವಾದಲ್ಲಿ ಸಮಸ್ಯೆ ಉಂಟಾಗುತ್ತದೆ. ಕಮಿಟಿ ಕಡೆಯಿಂದ ಪಾಸ್ ವ್ಯವಸ್ಥೆ ಕಲ್ಪಿಸಲಾಗಿತ್ತದೆ. ಕಾರ್ಯಕರ್ತರಿಗೆ, ಸಮಿತಿಯವರಿಗೆ ಪಾಸ್ ವ್ಯವಸ್ಥೆ ಕಲ್ಪಿಸಬೇಕು. ಸ್ವಯಂ ಸೇವಕರಿಗೆ ಗುರುತಿನ ಚೀಟಿ ಇಲ್ಟಿಲವೇ ಟಿ ಶರ್ಟ್ ನೀಡಬೇಕು. ಪೊಲೀಸರೊಂದಿಗೆ 200 ಮಂದಿ ಇರಬೇಕು ಎಂದರು. ಎಲ್ಲ ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಮಸ್ತಕಾಭೀಷೇಕ ಸಮಿತಿಗಳು ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ. ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಯಾವ ಇಲಾಖೆಯವರೂ ತಿಳಿದುಕೊಳ್ಳಬಾರದು. ದೇಶಾದ್ಯಂತದಿಂದ ಪ್ರತಿ ದಿನ ಸುಮಾರು 30,000 ಜನರು ವೇಣೂರಿಗೆ ಬರುತ್ತಾರೆ. ಹೀಗಾಗಿ ಅವರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯಗಳನ್ನು ನಿರ್ವಹಿಸಬೇಕು ಎಂದು ಪುತ್ತೂರು ಸಹಾಯಕ ಕಮಿಷನರ್ ಮನವಿ ಮಾಡಿದರು. ಬೆಳ್ತಂಗಡಿ ತಾಲೂಕು ತಹಸೀಲ್ದಾರ್ ಪ್ರಥ್ವಿ ಸಾನಿಕಮ್, ನೋಡಲ್ ಅಧಿಕಾರಿ ಮಾಣಿಕ್ಯ, ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ವೇಣೂರು ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ. ಪದ್ಮಪ್ರಸಾದ್ ಅಜಿಲ, ಮಾರ್ಗದರ್ಶಕರಾದ ಡಿ. ಹರ್ಷೇಂದ್ರ ಕುಮಾರ್ ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ ಸ್ವಾಗತಿಸಿದರು. ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರೂಪಿಸಿದರು.