- ರೋಟರಿ ಸಭಾಂಗಣದಲ್ಲಿ ವಿಶ್ವ ಬಾಹ್ಯಕಾಶ ಸಪ್ತಾಹ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ವಿಜ್ಞಾನಿಗಳಿಗೆ ಸಮಾಜದಲ್ಲಿ ಬಹಳಷ್ಟು ಗೌರವವಿದೆ. ಕೆಲವರು ಸಂಪೂರ್ಣ ಜೀವನವನ್ನು ಬಾಹ್ಯಕಾಶದ ಸೇವೆಗೆ ಮೀಸಲಿಟ್ಟು ರಾಷ್ಟ್ರದ ಘನತೆ ಹೆಚ್ಚಿಸಿದ್ದಾರೆ ಎಂದು ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.
ನಗರದ ರೋಟರಿ ಸಭಾಂಗಣದಲ್ಲಿ ಗುರುವಾರ ಭಾರತೀಯ ಬಾಹ್ಯಕಾಶ ಕೇಂದ್ರ, ಟೌನ್ ಮಹಿಳಾ ಸಮಾಜ ಸಮೂಹ ಶಿಕ್ಷಣ ಸಂಸ್ಥೆ, ತಕ್ಷ್ ಅಕಾಡೆಮಿ, ರೋಟರಿ ಸಂಸ್ಥೆ ಮತ್ತು ವ್ಹಿಲ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ಧ ವಿಶ್ವ ಬಾಹ್ಯಾಕಾಶ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಯುವ ಜನತೆ ವಿಜ್ಞಾನ ಕ್ಷೇತ್ರಕ್ಕೆ ಒತ್ತು ನೀಡುತ್ತಿಲ್ಲ. ವೈಯಕ್ತಿಕ ಕುಟುಂಬದ ಆಲೋಚನೆಯಲ್ಲಿ ವೇತನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇಸ್ರೋ ಸಂಸ್ಥೆ ವಿಜ್ಞಾನದ ಸಮಗ್ರ ಮಾಹಿತಿ ಪರಿಚಯಿಸಲು ಸಪ್ತಾಹ ಆಚರಿಸಿ ಬಾಹ್ಯಕಾಶದ ಹಿನ್ನೆಲೆ ತಿಳಿಯಪಡಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
1962 ರಲ್ಲಿ ಮಾಜಿ ಪ್ರಧಾನಿ ನೆಹರು ಅವರು ಸಂಶೋಧಕರೊಂದಿಗೆ ಚರ್ಚಿಸಿ ಇಸ್ರೋ ಸಂಸ್ಥೆ ಪ್ರಾರಂಭಿಸಿದರು. ಇಂದಿಗೂ ಮಾನವ ಚಂದ್ರಯಾನ, ಮಂಗಳಯಾನ ಹಾಗೂ ರಾಕೆಟ್ ಉಡಾವಣೆಗಳಂತಹ ಭೂಮಿಯಿಂದ ಹೊರ ಪ್ರಪಂಚಕ್ಕೆ ತೆರಳಲು ವಿಜ್ಞಾನಿಗಳ ಕಠಿಣ ಪರಿಶ್ರಮ ಹಾಗೂ ತಂತ್ರಜ್ಞಾನವೇ ಕಾರಣ ಎಂದು ತಿಳಿಸಿದರು.ಇಂದಿಗೂ ರಾಷ್ಟ್ರದ ಪ್ರಜೆಗಳಾದ ಸುಭಾಷ್ ಶುಕ್ಲ, ಸುನೀತಾ ವಿಲಿಯಂ ಸೇರಿದಂತೆ ಅನೇಕರು ಭೂಮಿಯ ಗುರುತ್ವಾಕರ್ಷಣೆ ಇಲ್ಲದಿರುವ ಪ್ರದೇಶಕ್ಕೆ ತೆರಳಿ ತಿಂಗಳುಗಟ್ಟಲೇ ಅಧ್ಯಯನ ನಡೆಸಿ ಮರಳಿ ಭೂಮಿಯತ್ತ ಬಂದು ಸಾಧನೆ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಯುವ ವಿಜ್ಞಾನಿಗಳು ಸಾಧಕರ ಬದುಕನ್ನು ಆದರ್ಶವಾಗಿಟ್ಟುಕೊಂಡು ವಿಜ್ಞಾನ ಜಗತ್ತಿಗೆ ಹೆಜ್ಜೆ ಹಾಕಬೇಕು ಎಂದರು.
ಮಕ್ಕಳಿಗೆ ಪಠ್ಯದ ಚಟುವಟಿಕೆ ಜೊತೆಗೆ ಬಾಹ್ಯಕಾಶದ ಚಟುವಟಿಕೆಗಳನ್ನು ಪರಿಚಯಿಸಲು ಇಸ್ರೋ ಸಂಸ್ಥೆ ಮುಂದಾಗಿದ್ದು ಇವುಗಳನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಜೊತೆಗೆ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ವಿಜೇತರಾಗಿ ಹೊರಹೊಮ್ಮಬೇಕು. ಈ ಸಾಧನೆಗೆ ಗುರುಗಳು, ಪಾಲಕರು ಪ್ರೋತ್ಸಾಹಿಸಬೇಕು ಎಂದು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಆರ್.ರುದ್ರಪ್ಪ ಮಾತನಾಡಿ, ಸಮಾಜದಲ್ಲಿ ವಿಜ್ಞಾನಿಗಳ ಸಂಖ್ಯೆ ಇಳಿಕೆಗೊಂಡು ವೈದ್ಯ ಹಾಗೂ ಇಂಜಿನಿಯರ್ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಮಕ್ಕಳಲ್ಲಿ ಇಸ್ರೋ ಬಾಹ್ಯಕಾಶದ ಕುತೂಹಲ ಮೂಡಿಸಿ ಪ್ರೇರೇಪಿಸ ಬೇಕು. ಮೊಬೈಲ್ ರೀಲ್ಸ್‌ಗಳನ್ನು ವ್ಯಕ್ತಿಗಳನ್ನು ಅನುಸರಿಸದೇ, ವಿಜ್ಞಾನ ಕ್ಷೇತ್ರದ ಸಾಧಕರನ್ನು ನಾಯಕರೆಂದು ಭಾವಿಸಬೇಕು ಎಂದರು.
ಭಾರತೀಯ ಬಾಹ್ಯಕಾಶ ಸಂಸ್ಥೆ ವಿಜ್ಞಾನಿ ಸೌಭಾಗ್ಯ ಮಾತನಾಡಿ, ಮಾನವ ಸ್ಥಿತಿ ಸುಧಾರಣೆಗೆ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆಗಳನ್ನು ಆಚರಿಸಲು 1999 ರಲ್ಲಿ ವಿಶ್ವ ಬಾಹ್ಯಾಕಾಶ ದಿನ ಸ್ಥಾಪಿಸಿ, ವಿಶ್ವದ ಅತಿದೊಡ್ಡ ಬಾಹ್ಯಾಕಾಶ ಕಾರ್ಯಕ್ರಮ ರೂಪುಗೊಂಡಿತು ಎಂದು ಹೇಳಿದರು.ಬಾಹ್ಯಕಾಶ ಸಂಶೋಧನೆ ನಮ್ಮ ಜೀವನವನ್ನು ಸುಧಾರಿಸಲು ಹಾಗೂ ಅವಕಾಶ ಸೃಷ್ಟಿಸಲು ಸಹಾಯಕ. ಬಾಹ್ಯಕಾಶ ವಿಜ್ಞಾನದಲ್ಲಿ ಯುವಕರ ಆಸಕ್ತಿ ಉತ್ತೇಜಿಸಲು ವಿಶ್ವ ಬಾಹ್ಯಕಾಶ ಸಪ್ತಾಹ ಒಂದು ವೇದಿಕೆಯಾಗಿ ಯುವ ಪ್ರತಿಭೆಗಳನ್ನು ಬಾಹ್ಯಕಾಶ ಕ್ಷೇತ್ರಕ್ಕೆ ಆಕರ್ಷಿಸುವ ಒಂದು ಆಚರಣೆಯಾಗಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ತಿಮ್ಮರಾಜು ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನದ ಜೊತೆಗೆ ಪರಿಸರ ಪ್ರಜ್ಞೆ ಮೂಡಿಸಿಕೊಳ್ಳಬೇಕು. ಪ್ರಸ್ತುತ ಮಾನವ ಆಹಾರ ಪದಾರ್ಥ, ಹಾಲು ಸೇರಿದಂತೆ ಎಲ್ಲವೂ ಕಲುಷಿತವಾಗುತ್ತಿದೆ. ಅಲ್ಲದೇ ಪ್ಲಾಸ್ಟಿಕ್ ಬಳಕೆ ಹೆಚ್ಚಳವಾಗುತ್ತಿರುವ ಪರಿಣಾಮ ಸ್ವಚ್ಛಂಧ ಪರಿಸರಕ್ಕೆ ಹಾನಿಯಾಗುತ್ತಿದೆ. ಮುಂದಿನ ಯುವ ಜನತೆಗೆ ಸರಿಪಡಿಸುವ ಮಾರ್ಗ ತಿಳಿಸಬೇಕು ಎಂದು ಹೇಳಿದರು.ಇದೇ ವೇಳೆ ವಿವಿಧ ಶಾಲೆಗಳಿಂದ ಆಗಮಿಸಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಸಪ್ರಶ್ನೆ, ಆಶುಭಾಷಣ, ಚಿತ್ರಕಲೆ ಹಾಗೂ ಜ್ಞಾಪಕಶಕ್ತಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಎನ್.ಪಿ. ಲಿಖಿತ್, ಪ್ರಾಂಶುಪಾಲ ಇಂದ್ರೇಶ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ. ಚೇತನ್‌ಕುಮಾರ್, ಮುಖ್ಯೋಪಾಧ್ಯಾಯ ಎಂ.ಎಸ್.ನಟರಾಜ್ ಉಪಸ್ಥಿತರಿದ್ದರು. 9 ಕೆಸಿಕೆಎಂ 1
ಚಿಕ್ಕಮಗಳೂರಿನ ರೋಟರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ಧ ವಿಶ್ವ ಬಾಹ್ಯಕಾಶ ಸಪ್ತಾಹ ಕಾರ್ಯಕ್ರಮವನ್ನು ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಉದ್ಘಾಟಿಸಿದರು.