ಕೃಷ್ಣಮಠದ ರಾಜಾಂಗಣದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಉಡುಪಿಮಕ್ಕಳನ್ನು ಯಾವುದೇ ಮಾಧ್ಯಮದಲ್ಲಿ ಓದಿಸಿದರೂ, ಹೆತ್ತವರು ಮನೆಯಲ್ಲಾದರೂ ಮಕ್ಕಳೊಂದಿಗೆ ಕನ್ನಡ ಭಾಷೆಯಲ್ಲಿಯೇ ಮಾತನಾಡಿ, ಇಲ್ಲದಿದ್ದಲ್ಲಿ ಕನ್ನಡವನ್ನು ಉಳಿಸುವುದು ಸಾಧ್ಯವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ ಕರೆ ನೀಡಿದರು.
ಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಲಾದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕನ್ನಡ ಶಾಲೆಗಳು ಉಳಿದರೆ ಮಾತ್ರ ಕನ್ನಡ ಉಳಿಯುತ್ತದೆ. ಆದ್ದರಿಂದ ಕನ್ನಡದ ಶಾಲೆಗಳು ಯಾವುದೇ ಕಾರಣಕ್ಕೂ ಮುಚ್ಚಬಾರದು, ಮುಚ್ಚಿರುವ ಶಾಲೆಗಳು ಪುನಃ ಆರಂಭವಾಗಬೇಕು ಮತ್ತು ಕನ್ನಡ ಅನ್ನ ನೀಡುವ ಭಾಷೆಯಾಗಬೇಕು ಎಂಬ ಎರಡು ಧ್ಯೇಯಗಳು ಕಸಾಪದ್ದು. ಆದರೆ ಅವು ಈಡೇರುವ ಲಕ್ಷಣಗಳೂ ಕಾಣುತ್ತಿಲ್ಲ, ಯಾಕೆಂದರೆ ಈ ಬಗೆಗಿನ ಹೋರಾಟಕ್ಕೆ ನ್ಯಾಯಾಲಯದಲ್ಲಿಯೂ ಹಿನ್ನೆಡೆಯಾಗಿದೆ ಎಂದವರು ವಿಷಾದಿಸಿದರು.ಸಮ್ಮೇಳನವನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಹಿರಿಯ ವಿದ್ವಾಂಸ ಪಾದೆಕಲ್ಲು ವಿಷ್ಣುಭಟ್ಟರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಸಮ್ಮೇಳನದ ಆಶಯದ ನುಡಿಗಳನ್ನಾಡಿದರು.ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಬಾಬು ಶಿವ ಪೂಜಾರಿ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಸಂಶೋಧಕ ಎಸ್.ಆರ್. ಅರುಣಕುಮಾರ್, ಉದ್ಯಮಿ ಆನಂದ ಕುಂದರ್, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಶ್ರೀನಾಥ್ ರಾವ್, ತಾಲೂಕು ಕಸಾಪ ಅಧ್ಯಕ್ಷರಾಧ ಪುಂಡಲೀಕ ಮರಾಠೆ, ಜಿ.ರಾಮಚಂದ್ರ ಐತಾಳ್, ಕೊಂಡಳ್ಳಿ ಪ್ರಭಾಕರ್ ಶೆಟ್ಟಿ, ಡಾ. ರಘು ನಾಯಕ್, ಶ್ರೀನಿವಾಸ ಭಂಡಾರಿ ವೇದಿಕೆಯಲ್ಲಿದ್ದರು.
ಜಿಲ್ಲಾ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನರೇಂದ್ರ ಕೋಟ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು. ಆನಂದ ಸಾಲಿಗ್ರಾಮ ವಂದಿಸಿದರು.-----------------ಆತ್ಮದ ವಿಕಾಸಕ್ಕೆ ಸಾಹಿತ್ಯ ಅಗತ್ಯ: ಪುತ್ತಿಗೆ ಶ್ರೀ
ಅಕ್ಷರ ಪುರುಷೋತ್ತಮನಾದ ಕೃಷ್ಣನ ಸನ್ನಿಧಾನದಲ್ಲಿ ಅಕ್ಷಯ ತೃತೀಯದಂದು ಕನ್ನಡ ಸಾಹಿತ್ಯ ಸಮ್ಮೇಳನದಿಂದ ಅಕ್ಷರ ಅಕ್ಷಯವಾಗಲಿ ಎಂದು ಪರ್ಯಾಯ ಪುತ್ತಿಗೆ ಶ್ರೀಗಳು ಹಾರೈಸಿದರು.ಹಣ ಇದ್ದರೆ ಸಾಕಲ್ವ? ಸಾಹಿತ್ಯ ಯಾಕೆ ಬೇಕು ಎಂದು ಕೆಲವರ ಪ್ರಶ್ನೆಯಾಗಿರಬಹುದು. ಆದರೆ ವ್ಯಕ್ತಿತ್ವ ವಿಕಸನ, ಅದರಿಂದ ಆತ್ಮ ವಿಕಾಸಕ್ಕೆ ಸಾಹಿತ್ಯ ಬೇಕು, ಆದರೆ ಅದು ಹಿತ ಸಾಹಿತ್ಯವಾಗಿರಬೇಕು ಎಂದವರು ಹೇಳಿದರು.