ಮಂಗಳೂರು: ಅಧಿವೇಶನದಲ್ಲಿ ರಾಜ್ಯ ಬಜೆಟ್ ಮೇಲೆ ಚರ್ಚೆ ನಡೆಯುವುದಕ್ಕಿಂತ ಮೊದಲು ಬಜೆಟ್ ಕುರಿತಾಗಿ ಶಾಸಕರಿಗೆ ವಿಸ್ತೃತ ಮಾಹಿತಿ ನೀಡುವ ಉದ್ದೇಶದಿಂದ ಕಾರ್ಯಾಗಾರವೊಂದನ್ನು ಮಾ.9ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ‘ಲಲಿತ್ ಅಶೋಕ್’ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.
ಇಂದಿನ ಶಾಸಕರು ಮುಂದೆ ಹಣಕಾಸು ಸಚಿವರೂ ಆಗಬಹುದು. ಹಾಗಾಗಿ ಅವರೆಲ್ಲರಿಗೂ ಹಣಕಾಸಿನ ನಿರ್ವಹಣೆ ಮತ್ತು ಹಂಚಿಕೆಯ ಕುರಿತಂತೆ ಮಾಹಿತಿ ಒದಗಿಸುವ ಉದ್ದೇಶ ಈ ಕಾರ್ಯಾಗಾರದ್ದು. ಇದೇ ಮೊದಲ ಬಾರಿಗೆ ಇಂಥ ಕಾರ್ಯಾಗಾರ ನಡೆಸಲಾಗುತ್ತಿದೆ. ಎಲ್ಲ ಶಾಸಕರು ತಪ್ಪದೆ ಹಾಜರಾಗುವಂತೆ ತಿಳಿಸಲಾಗಿದೆ. ಇದರಲ್ಲಿ ಭಾಗವಹಿಸುವ ಶಾಸಕರಿಗೆ ಅಧಿವೇಶನದಲ್ಲಿ ಚರ್ಚೆಗೆ ಆದ್ಯತೆ ನೀಡಲಾಗುವುದು ಎಂದು ಯು.ಟಿ. ಖಾದರ್ ಹೇಳಿದರು.
ಉದ್ಘಾಟನೆ, ಶಂಕು ಯಾವ ಅನುದಾನದ್ದು: ಕೆಲ ಶಾಸಕರಿಗೆ ರಾಜ್ಯ ಸರ್ಕಾರದಿಂದ ಅನುದಾನ ಸಿಗುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಆ ಕುರಿತು ನಾನು ಚರ್ಚೆ ಮಾಡುವುದಿಲ್ಲ. ಆದರೆ ಶಾಸಕರು ಅಲ್ಲಲ್ಲಿ ಉದ್ಘಾಟನೆ, ಶಂಕುಸ್ಥಾಪನೆ ಮಾಡುವುದನ್ನು ಗಮನಿಸುತ್ತಿದ್ದೇನೆ. ಅದು ಯಾವ ಅನುದಾನದಲ್ಲಿ ಆಗುತ್ತಿದೆ ಎಂಬುದು ಗೊತ್ತಿಲ್ಲ. ಪ್ರತಿಯೊಬ್ಬರ ಅಭಿಪ್ರಾಯ ಭಿನ್ನವಾಗಿದ್ದು, ಸ್ಪೀಕರ್ ಆಗಿ ಪ್ರತಿಕ್ರಿಯಿಸುವುದಿಲ್ಲ ಎಂದರು.ಸಾಲ ಮಾಡಿ ಬಜೆಟ್ ಮಂಡಿಸಲಾಗಿದೆ ಎಂಬ ಟೀಕೆಯ ಕುರಿತು ಉತ್ತರಿಸಿದ ಖಾದರ್, ಗ್ರಾಮ ಪಂಚಾಯ್ತಿಯಿಂದ ಪಾರ್ಲಿಮೆಂಟ್‌ವರೆಗೆ ಟೀಕೆಗಳು ಇದ್ದೇ ಇರುತ್ತವೆ. ಅದೇ ಪ್ರಜಾಪ್ರಭುತ್ವದ ಸೌಂದರ್ಯ. ಈ ವಿಚಾರದ ಕುರಿತು ಆಡಳಿತ ಮತ್ತು ಪ್ರತಿಪಕ್ಷಗಳು ಅವರವರ ಅಭಿಪ್ರಾಯ ಹೇಳುತ್ತವೆ. ನನ್ನ ಅಭಿಪ್ರಾಯ ಏನೂ ಇಲ್ಲ ಎಂದು ಹೇಳಿದರು.
ಉಳ್ಳಾಲಕ್ಕೆ ಪೊಲೀಸ್ ಠಾಣೆ, ರಸ್ತೆ, ಶ್ರಮಿಕ ಸ್ಕೂಲ್
ರಾಜ್ಯ ಬಜೆಟ್‌ನಲ್ಲಿ ಉಳ್ಳಾಲ ವಿಧಾನಸಭಾ ಕ್ಷೇತ್ರಕ್ಕೆ ಪೊಲೀಸ್ ಠಾಣೆ, ನೇತ್ರಾವತಿ ಎಡದಂಡೆ ರಸ್ತೆ, ಶ್ರಮಿಕ ಸ್ಕೂಲ್ ಸೇರಿದಂತೆ ಅನೇಕ ಕೊಡುಗೆಗಳು ದೊರೆತಿವೆ ಎಂದು ಯು.ಟಿ. ಖಾದರ್ ತಿಳಿಸಿದರು.ಉಳ್ಳಾಲ ಕ್ಷೇತ್ರ ವಿಂಗಡನೆ ಆದ ಬಳಿಕ ಬಂಟ್ವಾಳ ತಾಲೂಕಿನ ಸಜಿಪ, ಇರಾ, ಚೇಳೂರು, ಕುರ್ನಾಡು ಮೊದಲಾದ ಪ್ರದೇಶಗಳಿಗೆ ಪೊಲೀಸ್ ಠಾಣೆಯ ಅಗತ್ಯವಿದ್ದ ಹಿನ್ನೆಲೆಯಲ್ಲಿ ಬೇಡಿಕೆ ಇರಿಸಲಾಗಿತ್ತು. ಅದನ್ನು ಮಂಜೂರು ಮಾಡಲಾಗಿದೆ. ಕಲ್ಲಾಪು- ಸಜಿಪನಡುವರೆಗೆ ನೇತ್ರಾವತಿ ನದಿ ಬದಿಯ ರಸ್ತೆ ಕಾಮಗಾರಿಗೆ 10 ಕೋಟಿ ರು.ವರೆಗೆ ಕೆಲಸ ಆಗಿದ್ದು, ಮತ್ತೆ 50 ಕೋಟಿ ರು. ಮಂಜೂರಾಗಿದೆ. ಉಳ್ಳಾಲದಲ್ಲಿ ಶ್ರಮಿಕ ಸ್ಕೂಲ್ ಮಂಜೂರು ಮಾಡಲಾಗಿದೆ. ತಲಾ 60 ಕೋಟಿ ರು. ವೆಚ್ಚದ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ರಾಜ್ಯಕ್ಕೆ 10 ಮಂಜೂರಾಗಿದ್ದು, ಅದರಲ್ಲಿ ಒಂದನ್ನು ಜಿಲ್ಲೆಗೆ ಒದಗಿಸಲು ಬೇಡಿಕೆ ಇರಿಸಲಾಗಿದೆ ಎಂದರು.ಪುತ್ತೂರು ಮೆಡಿಕಲ್ ಕಾಲೇಜು ಕಳೆದ ಬಜೆಟ್‌ನಲ್ಲಿ ಘೋಷಣೆಯಾಗಿತ್ತು. ಈ ಬಜೆಟ್‌ನಲ್ಲಿ ಅದಕ್ಕೆ ಪೂರಕವಾಗಿ 300 ಹಾಸಿಗೆಗಳ ಆಸ್ಪತ್ರೆಗೆ ಅನುಮೋದನೆಯಾಗಿದೆ. ಅಲ್ಲಿನ ಶಾಸಕರು ಈ ಬಗ್ಗೆ ಸಾಕಷ್ಟು ಪ್ರಯತ್ನಿಸಿದ್ದು, ಅವರಿಗೆ ನಮ್ಮ ಬೆಂಬಲವಿದೆ ಎಂದು ಖಾದರ್ ಹೇಳಿದರು.