ಸ್ಪೀಕರ್‌ ಖಾದರ್‌ಗೆ ಬಂತು ₹41 ಲಕ್ಷದ ಫಾರ್ಚೂನರ್‌!

KannadaprabhaNewsNetwork | Updated : Feb 13 2024, 12:03 PM IST

ಸಾರಾಂಶ

ಬಜೆಟ್‌ ಅಧಿವೇಶನದ ಮೊದಲ ದಿನವೇ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರ ಪ್ರಯಾಣಕ್ಕೆ ಹಲವು ವಿಶೇಷತೆಗಳನ್ನು ಒಳಗೊಂಡ ಹೊಸ ಐಷಾರಾಮಿ ಫಾರ್ಚೂನರ್‌ ಕಾರು ಆಗಮಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಜೆಟ್‌ ಅಧಿವೇಶನದ ಮೊದಲ ದಿನವೇ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರ ಪ್ರಯಾಣಕ್ಕೆ ಹಲವು ವಿಶೇಷತೆಗಳನ್ನು ಒಳಗೊಂಡ ಹೊಸ ಐಷಾರಾಮಿ ಫಾರ್ಚೂನರ್‌ ಕಾರು ಆಗಮಿಸಿದೆ. 

ಬರ ಪರಿಸ್ಥಿತಿ ನಡುವೆಯೂ ಇತ್ತೀಚೆಗೆ ರಾಜ್ಯ ಸರ್ಕಾರದ ಎಲ್ಲಾ ಸಚಿವರಿಗೆ ಐಷಾರಾಮಿ ಕಾರನ್ನು ಖರೀದಿಸಿದ್ದು ಟೀಕೆಗೆ ಗುರಿಯಾಗಿತ್ತು. ಇದೀಗ ಸ್ಪೀಕರ್ ಅವರಿಗೂ ಐಷಾರಾಮಿ ಕಾರು ಬಂದಿದೆ‌. 

ಸ್ಪೀಕರ್‌ಗೆ ಖರೀದಿಸಿರುವುದು ಕಪ್ಪು ಬಣ್ಣದ ಫಾರ್ಚೂನರ್‌. ಸ್ಪೀಕರ್‌ ಅವರಿಗೆ ಸಚಿವಾಲಯದಿಂದ ಈ ವಿಶೇಷ ಕಾರಿನ‌ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಇದರ ಬೆಲೆ 41 ಲಕ್ಷ ರು.ಗಳಾಗಿದೆ ಎಂದು ತಿಳಿದುಬಂದಿದೆ. 

ಈ ಕಾರಿನಲ್ಲಿ ಪ್ರಯಾಣದ ಸಂದರ್ಭದಲ್ಲಿ ಸ್ಪೀಕರ್‌ ಖಾದರ್ ಮುಖಕ್ಕೆ ಬೆಳಕು‌‌ ನೀಡುವ ವಿಶೇಷ ಎಲ್ಇಡಿ ಲೈಟ್ ಅಳವಡಿಕೆ ಸೇರಿದಂತೆ ಇನ್ನು ಕೆಲ ವಿಶೇಷತೆಗಳಿವೆ.

ಕಾರಿಗೆ ಜಿಆರ್ ಕಿಟ್ ಅಳವಡಿಸುವ ಮೂಲಕ ವಿಶೇಷ ವಿನ್ಯಾಸ ಮಾಡಲಾಗಿದೆ. ಇನ್ನು ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಗಂಡಭೇರುಂಡ ಲಾಂಛನ ಹೊಂದಿದೆ. ರಾಜ್ಯಪಾಲರ ಹೊರತಾಗಿ ಸ್ಪೀಕರ್‌ಗೆ ಮಾತ್ರ ಇದನ್ನು ಹಾಕಲು ಅವಕಾಶ ಇದೆ.

ಮಾರುಕಟ್ಟೆಯಲ್ಲಿ ಕಪ್ಪು ಬಣ್ಣದ ಫಾರ್ಚೂನರ್ (ಇ) ಕಾರಿನ ದರ 33.43 ಲಕ್ಷ ರು. (ಪೆಟ್ರೋಲ್) ಹಾಗೂ ಡೀಸೆಲ್ ಕಾರಿನ ದರ 35.93 ರಿಂದ 51.44 ಲಕ್ಷ ರು. ಆಗುತ್ತದೆ. 

ಆದರೆ, ಸ್ಪೀಕರ್‌ ಅವರಿಗೆ ಖರೀದಿಸಿರುವ ಫಾರ್ಚೂನರ್‌ಗೆ ಕೆಲ ವಿಶೇಷ ವಿನ್ಯಾಸ ಮಾಡಿರುವುದರಿಂದ ಒಟ್ಟು 41 ಲಕ್ಷ ರು. ವೆಚ್ಚವಾಗಿದೆ ಎಂದು ಸ್ಪೀಕರ್‌ ಕಚೇರಿ ಮೂಲಗಳು ತಿಳಿಸಿವೆ.

Share this article