ಶಿಕ್ಷಣ ರಂಗದಲ್ಲಿ ಖಾಸಗಿ ಸಂಸ್ಥೆಗಳ ಕೊಡುಗೆ ಅಪಾರ: ಯುಟಿ ಖಾದರ್

KannadaprabhaNewsNetwork |  
Published : Jan 08, 2024, 01:45 AM ISTUpdated : Jan 08, 2024, 11:43 AM IST
ಮೂಡುಬಿದಿರೆಯಲ್ಲಿ ರಾಜ್ಯ ಅನುದಾನ ರಹಿತ ಪ.ಪೂ.ಕಾಲೇಜು ಆಡಳಿತ ಮಂಡಳಿಗಳ ಸಂಘಟನೆ (ಕುಪ್ಮಾ) ಸಮ್ಮೇಳನ  ಶಿಕ್ಷಣದಲ್ಲಿ ಖಾಸಗಿ ಸಂಸ್ಥೆಗಳ ಕೊಡುಗೆ ಅಪಾರ: ಯು.ಟಿ.ಖಾದರ್ | Kannada Prabha

ಸಾರಾಂಶ

ಕರ್ನಾಟಕ ಅನುದಾನ ರಹಿತ ಪ.ಪೂ ಕಾಲೇಜುಗಳ ಆಡಳಿತ ಮಂಡಳಿ ಸಂಘಟನೆ (ಕುಪ್ಮಾ) ವತಿಯಿಂದ ‘ಪದವಿ ಪೂರ್ವ ಶಿಕ್ಷಣ- ಮುಕ್ತ ಸಮ್ಮೇಳನ ೨೦೨೪’ ಮೂಡುಬಿದಿರೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ 

ಮೂಡುಬಿದಿರೆ: ‘ದೇಶದಲ್ಲಿ ಉತ್ತಮ ವಿದ್ಯಾರ್ಥಿಗಳನ್ನು ಬೆಳೆಸುವಲ್ಲಿ ಅನುದಾನ ರಹಿತ ವಿದ್ಯಾಸಂಸ್ಥೆಗಳ ಕೊಡುಗೆ ಅಪಾರ’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು. ಕರ್ನಾಟಕ ಅನುದಾನ ರಹಿತ ಪ.ಪೂ ಕಾಲೇಜುಗಳ ಆಡಳಿತ ಮಂಡಳಿ ಸಂಘಟನೆ (ಕುಪ್ಮಾ) ವತಿಯಿಂದ ಶುಕ್ರವಾರ ಆಳ್ವಾಸ್ ಕಾಲೇಜಿನ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸ್ಮಾರಕ ಸಭಾಂಗಣದಲ್ಲಿ ಹಮ್ಮಿಕೊಂಡ ‘ಪದವಿ ಪೂರ್ವ ಶಿಕ್ಷಣ- ಮುಕ್ತ ಸಮ್ಮೇಳನ ೨೦೨೪’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪದವಿಪೂರ್ವ ಶಿಕ್ಷಣವು ವಿದ್ಯಾರ್ಥಿಯ ಮೂಲಭೂತ ಹಕ್ಕು. ಅದನ್ನು ಜಾರಿಗೆ ತರಲು ಸರ್ಕಾರದ ಜೊತೆ ಖಾಸಗಿ ಸಂಸ್ಥೆಗಳು ಕೈ ಜೋಡಿಸಿವೆ. ವಿದ್ಯಾರ್ಥಿಗಳು ಬಲಿಷ್ಠವಾದರೆ, ದೇಶ ಬಲಿಷ್ಠವಾಗಲು ಸಾಧ್ಯ. ವ್ಯಕ್ತಿತ್ವ ರೂಪಿಸುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ. ಶಿಕ್ಷಣ ನೀಡುವುದು ನಿಜವಾದ ದೇಶಪ್ರೇಮ. ಕೇವಲ ವೈದ್ಯರು ಅಥವಾ ಎಂಜಿನಿಯರ್‌ಗಳ ಜತೆಗೆ ಉತ್ತಮ ರಾಜಕಾರಣಿಗಳನ್ನೂ ಈ ಶಿಕ್ಷಣ ಸಂಸ್ಥೆಗಳು ರೂಪಿಸುವಂತಾಗಲಿ ಎಂದವರು ಆಶಿಸಿದರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ಕುಪ್ಮಾದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ಖಾಸಗಿ ಸಂಸ್ಥೆಗಳ ಕುರಿತು ಕೀಳು ಮನೋಭಾವ ಸಲ್ಲದು. ಸಮಾಜಕ್ಕೆ ಅವರ ಕೊಡುಗೆಯನ್ನು ಗಮನಿಸಿ. ಗೌರವಿಸಿ. ಸರ್ಕಾರ ಖಾಸಗಿ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿ. ಎಲ್ಲರಿಗೂ ಸಮಾನ ನಿಯಮ ಇರಲಿ ಎಂದರು. 

ರಾಜ್ಯದಲ್ಲಿ ೫,೮೮೫ ಪದವಿಪೂರ್ವ ಕಾಲೇಜುಗಳಿದ್ದು, ಈ ಪೈಕಿ ೩,೫೬೬ ಅನುದಾನ ರಹಿತ ಕಾಲೇಜುಗಳಿವೆ. ರಾಜ್ಯದಲ್ಲಿ ೭,೦೨,೦೬೨ ರಷ್ಟು ವಿದ್ಯಾರ್ಥಿಗಳು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, ಶೇ೭೪ ಫಲಿತಾಂಶ ಬಂದಿದೆ. ಸರ್ಕಾರಿ ಕಾಲೇಜುಗಳು ಶೇ ೬೩, ಅನುದಾನಿತ ಶೇ ೭೧ ಫಲಿತಾಂಶ ಪಡೆದಿದ್ದರೆ, ಅನುದಾನಿತ ರಹಿತ ಕಾಲೇಜುಗಳಲ್ಲಿ ೮೩.೭೩ ಫಲಿತಾಂಶ ಬಂದಿದೆ. ಫಲಿತಾಂಶ ಹೆಚ್ಚಳಕ್ಕೆ ಅನುದಾನಿತ ರಹಿತ ಕಾಲೇಜುಗಳ ಕೊಡುಗೆ ಮಹತ್ತರ. ಶೇ ೯೦ಕ್ಕೂ ಹೆಚ್ಚು ಅಂಕ ಪಡೆದ ಅತಿಹೆಚ್ಚಿನ ವಿದ್ಯಾರ್ಥಿಗಳು ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಎಂದು ಅವರು ಮಾಹಿತಿ ನೀಡಿದರು. ವಿಧಾನ ಪರಿಷತ್ ಸದಸ್ಯ ಕೆ.ಎಲ್. ಭೋಜೇಗೌಡ ಮಾತನಾಡಿ, ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳನ್ನು ಒಂದುಗೂಡಿಸುವ ಸಂಘಟನೆಯ ಆರಂಭವು ಶ್ಲಾಘನೀಯ ಎಂದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿದರು. ಕುಪ್ಮಾದ ಅಧಿಕೃತ ವೆಬ್‌ಸೈಟ್‌ನ್ನು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಬಿಡುಗಡೆಗೊಳಿಸಿದರು. ಮಾಜಿ ಸಚಿವ ಅಭಯಚಂದ್ರ ಜೈನ್, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ, ಸಂಘಟನೆಯ ಪ್ರಮುಖರಾದ ಪ್ರೊ. ನರೇಂದ್ರ ಎಲ್. ನಾಯಕ್, ಎಂ.ಬಿ.ಪುರಾಣಿಕ್, ಫಾ.ಲಿಯೋ ಲಸ್ರಾದೋ, ಕೆ.ಸಿ.ನಾಯಕ್, ಡಾ.ಅಬ್ದುಲ್ ಖಾದಿರ್, ಡಾ.ಜಯಪ್ರಕಾಶ್ ಗೌಡ ಇದ್ದರು.

 ವೇಣುಗೋಪಾಲ ಶೆಟ್ಟಿ ನಿರೂಪಿಸಿದರು. ಸಭಾಕಾರ‍್ಯಕ್ರಮದ ನಂತರ ನಡೆದ ಪ್ರಥಮ ಗೋಷ್ಠಿಯಲ್ಲಿ ‘’ಕುಪ್ಮಾದ ಉದ್ದೇಶ ಹಾಗೂ ಗುರಿಗಳ ಕುರಿತು’’ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಸುಧಾಕರ ಶೆಟ್ಟಿ ಹಾಗೂ ಶಾರದಾ ಸಮೂಹ ಸಂಸ್ಥೆಗಳ ಎಂ ಬಿ ಪುರಾಣಿಕ್, ಎಕ್ಸ್ಪರ್ಟ್ ಸಂಸ್ಥೆಯ ಅಧ್ಯಕ್ಷ ಹಾಗೂ ಕುಪ್ಮಾದ ಕಾರ‍್ಯದರ್ಶಿ ಪ್ರೊ. ನರೇಂದ್ರ ಎಲ್. ನಾಯಕ್ ಸಂವಾದ ನಡೆಸಿಕೊಟ್ಟರು. ‘’ಕುಪ್ಮಾವನ್ನು ಸಂಘಟಿತವಾಗಿ ಪ್ರತಿ ಜಿಲ್ಲೆಯಲ್ಲಿ ನಿರ್ಮಾಣ ಮಾಡುವ ಕುರಿತು’’ ಎಕ್ಸ್ಲೆಂಟ್ ಸಂಸ್ಥೆಯ ಯುವರಾಜ್ ಜೈನ್, ಶಕ್ತಿ ಶಿಕ್ಷಣ ಸಂಸ್ಥೆಗಳ ಕೆಸಿ ನಾಯ್ಕ್ ಹಾಗೂ ಮೈಸೂರಿನ ಶ್ರೀ ವಿಶ್ವಭಾರತಿ ಶಿಕ್ಷಣ ಸಂಸ್ಥೆಗಳ ವಿಶ್ವನಾಥ್ ಶೇಷಾಚಲ ಚರ್ಚಿಸಿದರು. ನಂತರ ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌