ಕನ್ನಡಪ್ರಭ ವಾರ್ತೆ ಹಾಸನ
ರಜೆ, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹಾಸನಾಂಬ ದೇವಿಯ ದರ್ಶನಕ್ಕಾಗಿ ಕಳೆದ ಎರಡು ದಿನಗಳಿಂದ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುತ್ತಿದ್ದು, ಭಕ್ತರನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಹೀಗಾಗಿ, ಹಾಸನಾಂಬೆ ದರ್ಶನಕ್ಕಾಗಿ ಮಾಡಿರುವ ವಿಶೇಷ ಬಸ್ ವ್ಯವಸ್ಥೆಯನ್ನು ರದ್ದು ಮಾಡುವಂತೆ ಕೋರಿ ಹಾಸನ ಜಿಲ್ಲಾಧಿಕಾರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ ಪತ್ರ ಬರೆದಿದ್ದಾರೆ.ಪತ್ರದಲ್ಲಿ ಏನಿದೆ?:
ಹಾಸನಾಂಬ ದೇವಿಯ ದರ್ಶನಕ್ಕಾಗಿ ಭಕ್ತರು ನಿರೀಕ್ಷೆಗೂ ಮೀರಿ ಆಗಮಿಸುತ್ತಿದ್ದಾರೆ. ಆದರೆ, ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡಿರುವ ಸ್ಥಳಾವಕಾಶ ಕಡಿಮೆ ಇದೆ. ಹಾಸನಾಂಬೆ ದರ್ಶನಕ್ಕೆ ಇರುವ ಎಲ್ಲಾ ಸರತಿ ಸಾಲುಗಳು ಬ್ಯಾರಿಕೇಡ್ ದಾಟಿ ಮುಂದೆ ಹೋಗುತ್ತಿವೆ. ಅಲ್ಲದೆ, ಮುಂದಿನ ದಿನಗಳಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸರಣಿ ರಜೆ ಶುರುವಾಗಲಿದ್ದು, ರಜೆ ವೇಳೆ ದರ್ಶನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಅಗಾಧ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆಗಳಿವೆ. ಹಾಸನ ನಗರ ಕೂಡ ಚಿಕ್ಕದಾಗಿದ್ದು ದೇವಸ್ಥಾನದ ಸುತ್ತಮುತ್ತ ಸ್ಥಳಾವಕಾಶ ಕಡಿಮೆ ಇದೆ. ವಿಶೇಷ ಬಸ್ ವ್ಯವಸ್ಥೆಯಿಂದ ಭಾರೀ ಭಕ್ತರು ಬಂದರೆ ಸರತಿ ಸಾಲಿನಲ್ಲಿ ನೂಕು ನುಗ್ಗಲು ಉಂಟಾಗುವ ಸಾಧ್ಯತೆಯಿದೆ. ಹಾಸನಾಂಬ ದೇವಿಯ ದರ್ಶನಕ್ಕೆ ಹೊರ ಜಿಲ್ಲೆಗಳಿಂದ ಮಾಡಿರುವ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಇತರ ವಾಹನಗಳ ವ್ಯವಸ್ಥೆಯನ್ನು ರದ್ದು ಮಾಡಲು ಕ್ರಮ ಕೈಗೊಳ್ಳಿ. ನೂಕುನುಗ್ಗಲು ಉಂಟಾಗಿ, ಅಹಿತಕರ ಘಟನೆ ಸಂಭವಿಸಿದಲ್ಲಿ ಪೊಲೀಸ್ ಇಲಾಖೆ ಜವಾಬ್ದಾರಿ ಆಗುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಭಕ್ತರು:
ವೀಕೆಂಡ್ ರಜೆ, ದೀಪಾವಳಿ ಪ್ರಯುಕ್ತ ಹಾಸನದ ಹಾಸನಾಂಬೆ ದರ್ಶನಕ್ಕೆ ಭಾನುವಾರ ಭಕ್ತರ ದಂಡೇ ಆಗಮಿಸಿದ್ದು, ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇದೇ ವೇಳೆ, ಕಾಂತಾರ ನಾಯಕ ರಿಷಬ್ ಶೆಟ್ಟಿ ದಂಪತಿ, ನಟಿ ಉಮಾಶ್ರೀ, ಹ್ಯಾಟ್ರಿಕ್ ಹೀರೋ ಶಿವರಾಜ ಕುಮಾರ್ ಸೇರಿ ಗಣ್ಯರ ದಂಡೇ ಹರಿದು ಬಂತು.ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರಿಂದ ಸರದಿಯ ಸಾಲು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇದೇ ವೇಳೆ, ಹತ್ತನೇ ದಿನವಾದ ಭಾನುವಾರ ಗಣ್ಯರ ದಂಡೇ ದರ್ಶನಕ್ಕೆ ಹರಿದು ಬಂತು. ರಿಷಬ್ ಶೆಟ್ಟಿಯವರು ಕುಟುಂಬ ಸಮೇತ ಆಗಮಿಸಿ, ಹಾಸನಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, ಸಿದ್ದೇಶ್ವರ ದೇವಾಲಯಕ್ಕೂ ತೆರಳಿ, ಪೂಜೆ ಸಲ್ಲಿಸಿದರು. ರಿಷಬ್ ಶೆಟ್ಟಿ ಆಗಮಿಸುತ್ತಿದ್ದಂತೆ ಸರದಿ ಸಾಲಿನಲ್ಲಿ ಇದ್ದ ಭಕ್ತಾದಿಗಳಲ್ಲಿ ಉತ್ಸಹ ಕಂಡು ಬಂತು. ಅವರ ಪರ ಜಯಘೋಷ ಕೂಗಿದರು. ರಿಷಬ್ ಶೆಟ್ಟಿ ಅವರು ನಿಂತಲ್ಲೆ ಕೈ ಬಿಸಿ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಭೇಟಿಯಾಗಿದ್ದು, ಕಾಲು ಮುಟ್ಟಿ ಅವರಿಗೆ ನಮಸ್ಕರಿಸಿದರು. ಇದೇ ವೇಳೆ, ಹ್ಯಾಟ್ರಿಕ್ ಹೀರೋ ಡಾ। ಶಿವರಾಜಕುಮಾರ್ ಅವರು ಪತ್ನಿ ಗೀತಾ ಶಿವರಾಜಕುಮಾರ್ ಅವರೊಂದಿಗೆ ದೇವಾಲಯಕ್ಕೆ ಆಗಮಿಸಿ, ಹಾಸನಾಂಬೆಯ ದರ್ಶನ ಪಡೆದು ಪುನೀತರಾದರು. ಪ್ರೋಟೋಕಾಲ್ ಪ್ರಕಾರ ಜಿಲ್ಲಾಡಳಿತದ ವಾಹನದಲ್ಲಿ ದೇವಾಲಯಕ್ಕೆ ಆಗಮಿಸಿ, ದೇವಾಲಯದ ಒಳಗೆ ಇಳಿಯುತ್ತಿದ್ದಂತೆ ಅಭಿಮಾನಿಗಳಿಂದ ‘ಶಿವಣ್ಣಾ! ಶಿವಣ್ಣಾ!’ ಎಂದು ಕೂಗುಗಳು ಮೊಳಗಿದವು. ಬಳಿಕ, ದರ್ಬಾರ್ ಗಣಪತಿ ಹಾಗೂ ಸಿದ್ದೇಶ್ವರ ದೇವರ ದರ್ಶನ ಮಾಡಿಕೊಂಡರು. ಶಾಸಕ ಎಚ್.ಪಿ. ಸ್ವರೂಪ್ ಸಾಥ್ ನೀಡಿದರು. ಈ ವೇಳೆ, ಮಾತನಾಡಿ, ಮುಂದಿನ ಚಿತ್ರ ಎ.ಕೆ.45 ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದ್ದು, ಇನ್ನೂ ಹಲವಾರು ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ ಎಂದು ತಿಳಿಸಿದರು. ಇದೇ ವೇಳೆ, ನಟಿ, ಮಾಜಿ ಸಚಿವೆ ಉಮಾಶ್ರೀ ಕೂಡ ಕುಟುಂಬ ಸಮೇತ ಆಗಮಿಸಿ, ದೇವಿಯ ದರ್ಶನ ಪಡೆದರು.ದೇಗುಲ ಮುಂಭಾಗ ಜೆಡಿಎಸ್ ಪ್ರತಿಭಟನೆ:ಹಾಸನಾಂಬ ಉತ್ಸವದಲ್ಲಿ ಸ್ಥಳೀಯ ಶಾಸಕರನ್ನು ಕಡೆಗಣಿಸಿರುವುದು ಹಾಗೂ ದರ್ಶನಕ್ಕೆ ಬಂದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಅಗೌರವ ತೋರಿಸಿದ್ದಾರೆ ಎಂದು ಆರೋಪಿಸಿ ಶಾಸಕ ಸ್ವರೂಪ್ ಪ್ರಕಾಶ್ ನೇತೃತ್ವದಲ್ಲಿ ಭಾನುವಾರ ಹಾಸನಾಂಬೆ ಮುಖ್ಯದ್ವಾರದ ಬಿ.ಎಂ.ರಸ್ತೆ ಮಧ್ಯೆ ಜೆಡಿಎಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಬ್ಯಾರಿಕೇಡ್ ತಳ್ಳಲು ಜೆಡಿಎಸ್ ಕಾರ್ಯಕರ್ತರು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದರು. ಎ.ಮಂಜು ಆಗಮಿಸಿ ಶಾಂತಿಗೊಳಿಸಿ ರಸ್ತೆ ಮಧ್ಯೆ ಪ್ರತಿಭಟನೆಗೆ ಮುಂದಾದರು. ಈ ವೇಳೆ ಜಿಲ್ಲಾಧಿಕಾರಿ ಆಗಮಿಸಿ, ಪರಿಸ್ಥಿತಿ ಶಾಂತಗೊಳಿಸಲು ಯತ್ನಿಸಿದರು. ಸ್ವತಃ ಕೇಂದ್ರ ಸಚಿವ ಕುಮಾರಸ್ವಾಮಿ ಜೊತೆ ದೂರವಾಣಿ ಮೂಲಕ ಮಾತನಾಡಿದ ನಂತರ ಪರಿಸ್ಥಿತಿ ಶಮನಗೊಂಡಿತು.