ಸಂಘಟನೆಗೆ ಬಲ ತುಂಬಿ: ಶಿವಸುಜ್ಞಾನ ತೀರ್ಥ ಸ್ವಾಮೀಜಿ

KannadaprabhaNewsNetwork |  
Published : Oct 20, 2025, 01:02 AM IST
ಕಡೂರು ತಾಲ್ಲೂಕು ವಿಶ್ವಕರ್ಮ ಸಮಾಜ ಆಯೋಜಿಸಿದ್ದ ವಿಶ್ವಕರ್ಮ ಪೂಜಾ ಮಹೋತ್ಸವ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಅರೆಮಾದನಹಳ್ಳಿ, ವಡ್ಡನಹಾಳು ಶ್ರೀಗಳು, ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್, ತಹಶೀಲ್ದಾರ್ ಪೂರ್ಣಿಮಾ ಇದ್ದರು. | Kannada Prabha

ಸಾರಾಂಶ

ಕಡೂರುವಿಶ್ವಕರ್ಮ ಸಮಾಜ ಸದೃಢವಾಗಲು ಒಡಕಿಲ್ಲದ ಸಂಘಟನೆ ರೂಪಿಸಿ ಬಲ ತುಂಬಬೇಕು ಎಂದು ಅರೆಮಾದನ ಹಳ್ಳಿ ಶ್ರೀಸುಜ್ಞಾನಪೀಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಕರೆ ನೀಡಿದರು.

- ಶ್ರೀ ವೀರಭದ್ರೇಶ್ವರ ಸಮುದಾಯಭವನದಲ್ಲಿ ಆಯೋಜಿಸಿದ್ದ 10ನೇ ವಿಶ್ವಕರ್ಮ ಪೂಜಾ ಮಹೋತ್ಸವ

ಕನ್ನಡಪ್ರಭ ವಾರ್ತೆ, ಕಡೂರು

ವಿಶ್ವಕರ್ಮ ಸಮಾಜ ಸದೃಢವಾಗಲು ಒಡಕಿಲ್ಲದ ಸಂಘಟನೆ ರೂಪಿಸಿ ಬಲ ತುಂಬಬೇಕು ಎಂದು ಅರೆಮಾದನ ಹಳ್ಳಿ ಶ್ರೀಸುಜ್ಞಾನಪೀಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಕರೆ ನೀಡಿದರು.

ಕಡೂರು ತಾಲೂಕು ವಿಶ್ವಕರ್ಮ ಸಮಾಜ ಪಟ್ಟಣದ ಶ್ರೀ ವೀರಭದ್ರೇಶ್ವರ ಸಮುದಾಯಭವನದಲ್ಲಿ ಆಯೋಜಿಸಿದ್ದ 10ನೇ ವಿಶ್ವಕರ್ಮ ಪೂಜಾ ಮಹೋತ್ಸವ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು. ಸಮಾಜದ ಎಲ್ಲ ವಿಭಾಗಗಳಿಗೂ ತನ್ನನ್ನು ಅರ್ಪಿಸಿಕೊಂಡಿರುವ ವಿಶ್ವಕರ್ಮ ಸಮುದಾಯ ಸಾಮಾಜಿಕವಾಗಿ ದುರ್ಬಲವಾಗಿದೆ. ಎಲ್ಲರ ಸಹಭಾಗಿತ್ವದಿಂದ ಹಾಗೂ ನಾವು ಸಂಘಟಿತರಾದಾಗ ಮಾತ್ರ ನಮ್ಮ ಸಂಸ್ಕೃತಿ ಉಳಿಸಲು ಸಾಧ್ಯ. ಸದೃಢ ಸಮಾಜಗಳು ನಮ್ಮನ್ನೂ ಗುರುತಿಸಿ ರಾಜಕೀಯ ಪ್ರಾತಿನಿಧ್ಯ ಒದಗಿಸಲು ನೆರವಾಗಲಿ. ಪೋಷಕರು ವಿಶ್ವಕರ್ಮರ ಸಂಸ್ಕೃತಿ ಉಳಿಸಲು ಮಕ್ಕಳಿಗೆ ಪ್ರೋತ್ಸಾಹ ನೀಡಿ ಎಂದು ಸಲಹೆ ನೀಡಿದರು.

ಚನ್ನಗಿರಿಯ ವಡ್ಡನಹಾಳು ಸಾವಿತ್ರಿ ಪೀಠದ ಶಂಕರಾತ್ಮಾನಂದ ಸರಸ್ವತಿ ಸಾಮೀಜಿ ಸಭೆ ನೇತೃತ್ವ ವಹಿಸಿ, ಜಗತ್ತಿಗೆ ಶಿಲ್ಪ ಕಲೆಯ ಮೂಲಕ ಭಾರತದ ಪರಿಚಯ ಮಾಡಿಕೊಟ್ಟ ಇತಿಹಾಸವಿದ್ದರೂ ನಮ್ಮ ಸಮಾಜ ಹಿಂದುಳಿದಿದೆ. ಜಾತಿಗಳ ನಡುವೆಯೇ ಸ್ಪರ್ಧೆ ಇರುವ ಯುಗದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ನಮಗೆ ಹಳ್ಳಿಗಳ ಮಕ್ಕಳಿಗೆ ನೆರವಾಗುವ ಸಲುವಾಗಿ ವಿದ್ಯಾರ್ಥಿ ನಿಲಯಗಳು, ದುರ್ಬಲರಿಗೆ ಸಹಕಾರಿಯಾಗಲು ಸಮುದಾಯ ಭವನಗಳ ಅವಶ್ಯಕತೆ ಇದೆ. ಇಡೀ ಸಮಾಜಕ್ಕೆ ನಿಸ್ವಾರ್ಥ ಸೇವೆ ಒದಗಿಸುವ ನಮಗೆ ಇತರರಿಂದ ಸ್ಪಂದನೆ ಎಷ್ಟರ ಮಟ್ಟಿಗೆ ದೊರೆಯುತ್ತಿದೆ ಎನ್ನುವ ಅವಲೋಕನ ಬೇಕು. ವಿಶ್ವಕರ್ಮ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು. ಕಡೂರು ಭಾಗದಲ್ಲಿ ನಮ್ಮ ಸಮುದಾಯಕ್ಕೆ ಹಾಸ್ಟೆಲ್ ಹಾಗೂ ಶಾಲೆಗಾಗಿ ಜಾಗ ಗುರುತಿಸಿಕೊಡಬೇಕು ಎಂದು ಆಗ್ರಹಿಸಿದರು.

ಸಮಾರಂಭ ಉದ್ಘಾಟಿಸಿದ ಶಾಸಕ ಕೆ.ಎಸ್.ಆನಂದ್, ಸಮಾಜದ ಅಭಿವೃದ್ಧಿಗೆ ವಿಶ್ವಕರ್ಮರ ಕೊಡುಗೆ ಅನನ್ಯ. ಸಾಮಾಜಿಕ ವಾಗಿ ಚಿಕ್ಕ ಸಮುದಾಯವಾದರೂ ನಿಮ್ಮ ಸಂಘಟನೆಗೆ ನಿಗಮ ಸ್ಥಾಪನೆ ಮತ್ತು ವಿಶ್ವಕರ್ಮ ಜಯಂತಿ ಕಾರ್ಯಕ್ರಮ ನೆರವಾ ಗಿವೆ ಎಂದರೆ ತಪ್ಪಾಗಲಾರದು. ಹಿಂದುಳಿದ ವರ್ಗಗಳ ದನಿ ಗಟ್ಟಿಯಾಗಲು ರಾಜಕೀಯ ಪ್ರಾತಿನಿಧ್ಯದ ಅಗತ್ಯವಿದ್ದು ಮುಖ್ಯ ಮಂತ್ರಿಗಳ ಜತೆ ನಿಗಮದ ಅಭಿವೃದ್ಧಿಗೆ ಸರ್ಕಾರದ ಪ್ರೋತ್ಸಾಹ ಹಾಗೂ ಪರಿಷತ್ ಪ್ರಾತಿನಿಧ್ಯ ಕುರಿತು ಮುಖ್ಯಮಂತ್ರಿಗಳ ಜತೆ ವೈಯಕ್ತಿಕವಾಗಿ ಮಾತನಾಡಿ ಮನವಿ ಮಾಡುತ್ತೇನೆ. ಸಮಾಜದ ಅಭಿವೃದ್ಧಿಗೆ ನಿರಂತರ ಸ್ಪಂದಿಸುವುದಾಗಿ ತಿಳಿಸಿದರು.

ಕಡೂರು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಕಡೂರಿನ ಯಾವುದಾದರೂ ವೃತ್ತಕ್ಕೆ ಜಕಣಾಚಾರಿ ಅಥವಾ ವಿಶ್ವಕರ್ಮರ ಹೆಸರಿಡಲು ಸೂಕ್ತ ಕ್ರಮ ವಹಿಸುವ ಮತ್ತು ನಿವೇಶನ ಸಲುವಾಗಿ ಕೈಲಾದ ನೆರವು ನೀಡುವ ಭರವಸೆ ನೀಡಿದರು. ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ಮಾತನಾಡಿ, ಸದ್ಯ ನಿಗಮಕ್ಕೆ ₹50ಕೋಟಿ ನಿಗದಿಯಾಗಿದ್ದು ಮುಖ್ಯಮಂತ್ರಿ ಯವರ ಜತೆ ಚರ್ಚಿಸಿ ಅದನ್ನು ₹300ಕೋಟಿಗೆ ಹೆಚ್ಚಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ನಿಗಮದಿಂದ ಲಭ್ಯವಿರುವ ಶೈಕ್ಷಣಿಕ ಸೌಲಭ್ಯ ಬಳಸಿಕೊಳ್ಳಿ ಹಾಗೂ ನಿಗಮದ ಜತೆ ನಿರಂತರ ಸಂಪರ್ಕದಲ್ಲಿರಿ ಎಂದರು.

ಕಡೂರು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ವಿಶ್ವಕರ್ಮರ ಕುಲಕಸುಬು ಮೂಲೆಗೆ ಸೇರಿದರೆ ಕುಲನಾಶ ವಾಗುವ ಅಪಾಯವಿದೆ. ಹೆಣ್ಣುಮಕ್ಕಳನ್ನು ಸುಶಿಕ್ಷಿತರಾಗಿಸಿ ಉನ್ನತಿ ಸಾಧಿಸಲು ಪ್ರೇರೇಪಿಸಿ ಹಾಗೂ ಸಮುದಾಯಕ್ಕೆ ವರವಾಗಿರುವ ಕೌಶಲ್ಯ ಉಳಿಸಲು ಮಕ್ಕಳಿಗೆ ಇತಿಹಾಸ ತಿಳಿಸುವ ಮೂಲಕ ಮುಂದಾಗಿ ಎಂದು ತಿಳಿಸಿದರು.

ಮಹೋತ್ಸವದ ಅಂಗವಾಗಿ ಇಬ್ಬರೂ ಸ್ವಾಮಿಗಳನ್ನು ಪಟ್ಟಣದ ಎಪಿಎಂಸಿ ಬಳಿಯ ವೆಂಕಟೇಶ್ವರ ದೇವಾಲಯದ ಬಳಿಯಿಂದ ಮೆರವಣಿಗೆ ಮೂಲಕ ಸಮುದಾಯ ಭವನದವರೆಗೆ ಕರೆತರಲಾಯಿತು. ಎಸ್.ತೀರ್ಥಾಚಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವಕರ್ಮ ನಿಗಮದ ಮಾಜಿ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾಧ್ಯಕ್ಷ ಉಮಾಶಂಕರ್, ಮಹೇಂದ್ರಾಚಾರ್, ಗಿರಿಧರ ಮೂರ್ತಿ, ಎಸ್.ಪಿ.ಓಂಕಾರಮೂರ್ತಿ, ಎಚ್.ವಿ.ಮುರಳೀಧರ, ಪುರಸಭೆ ಸದಸ್ಯ ರಮೇಶ್, ಸಿಂಗಟಗೆರೆ ಜಗದೀ ಶಾಚಾರ್, ವಿವಿಧ ತಾಲೂಕು, ಹೋಬಳಿಗಳ ಅಧ್ಯಕ್ಷರು, ಸದಸ್ಯರು, ವಿಶ್ವಕರ್ಮ ಸಮಾಜದ ಬಂಧುಗಳು ಇದ್ದರು.

18ಕೆಕೆಡಿಯು1

ಕಡೂರು ತಾಲ್ಲೂಕು ವಿಶ್ವಕರ್ಮ ಸಮಾಜ ಆಯೋಜಿಸಿದ್ದ ವಿಶ್ವಕರ್ಮ ಪೂಜಾ ಮಹೋತ್ಸವ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಅರೆಮಾದನಹಳ್ಳಿ, ವಡ್ಡನಹಾಳು ಶ್ರೀಗಳು, ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್, ತಹಶೀಲ್ದಾರ್ ಪೂರ್ಣಿಮಾ ಇದ್ದರು.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ