ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಮದೀನಾ ಆಟೋ ನಿಲ್ದಾಣ, ಹಾಸಬಾವಿ ವೃತ್ತ, ಚಾಮರಾಜ ಪೇಟೆ, ಗುಜರಿ ಲೈನ್, ಕೆಆರ್ ರಸ್ತೆ, ಬಾರ್ ಲೈನ್ ರಸ್ತೆ, ಮಂಡಿಪೇಟೆ, ಚೌಕಿಪೇಟೆ ರಸ್ತೆ ಮತ್ತಿತರೆ ಕಡೆ ಸಂಚಾರ ಪೊಲೀಸ್ ಠಾಣೆ ಅಧಿಕಾರಿ, ಸಿಬ್ಬಂದಿ ಸಮೇತ ಭೇಟಿ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಒಮ್ಮುಖ ರಸ್ತೆ, ಸೂಚನಾ ಫಲಕ ಅಳವಡಿಕೆ, ವಾಹನ ನಿಲುಗಡೆ ವ್ಯವಸ್ಥೆ, ಬೀದಿ ಬದಿ ವ್ಯಾಪಾರವನ್ನೆಲ್ಲಾ ಗಮನಿಸಿದರು.
ಅಂಗಡಿ ಮುಗ್ಗಟ್ಟುಗಳು, ವಿಶೇಷವಾಗಿ ಚಿನ್ನಾಭರಣ ಅಂಗಡಿ, ಬಟ್ಟೆ ಅಂಗಡಿ, ಜನದಟ್ಟಣೆ ಅಂಗಡಿ ಮುಗ್ಗಟ್ಟುಗಳ ಮಾಲೀಕರು, ಸಿಬ್ಬಂದಿಗೆ, ನಿಮ್ಮ ನಿಮ್ಮ ಅಂಗಡಿಗಳಲ್ಲಿ ಹಾಗೂ ಹೊರಗಿನ ರಸ್ತೆಯ ಎಲ್ಲಾ ಭಾಗಗಳೂ ಸ್ಪಷ್ಟವಾಗಿ ಕಾಣುವಂತೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ರಸ್ತೆಯ ಮುಖವಾಗಿಯೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿರಬೇಕು. ಯಾವುದೇ ಅಪರಿಚಿತರು, ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ನಿಗಾ ವಹಿಸಬೇಕು ಎಂದು ಸೂಚಿಸಿದರು.ವಿಶೇಷವಾಗಿ ಚಿನ್ನಾಭರಣ ಅಂಗಡಿಗಳ ಮಾಲೀಕರು ಅಲಾರಾಂ ಹೊಂದಿರುವಂತಹ ಸಿಸಿ ಟಿವಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಚಿನ್ನಾಭರಣ ವರ್ತಕರಿಗೆ ಸೂಚನೆ ನೀಡಿದರು. ಅಲ್ಲಿಂದ ಕೆಆರ್ ರಸ್ತೆಯಲ್ಲಿ ಸಾಗಿದ ಎಸ್ಪಿ ಉಮಾ ಪ್ರಶಾಂತ, ಅಲ್ಲಿದ್ದ ಕಬ್ಬಣದ ಅಂಗಡಿಗಳಿಗೆ ಭೇಟಿ ನೀಡಿ, ಈ ಭಾಗದಲ್ಲಿ ಸಂಚರಿಸುವ ವಾಹನಗಳು, ಲಘು ಮತ್ತು ಇತರೆ ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಸಂಚಾರ ಪೊಲೀಸ್ ಅಧಿಕಾರಿ, ಸಿಬ್ಬಂದಿ ಈ ಎಲ್ಲಾ ವಿಷಯಗಳ ಬಗ್ಗೆ ಇನ್ನು ಗಮನ ಹರಿಸುತ್ತಾರೆ. ಸಂಚಾರ ದಟ್ಟಣೆ ಇರುವಂತಹ ರಸ್ತೆಗಳಲ್ಲಿ ಹೆಚ್ಚು ಗಮನ ಹರಿಸಿ, ವಾಹನ ದಟ್ಟಣೆಯಾಗದ ರೀತಿ ಹಾಗೂ ಸಂಚಾರಕ್ಕೆ ಅಡಚಣೆಯಾಗದಂತೆ ಕ್ರಮ ವಹಿಸಲು ಸೂಚನೆ ನೀಡಿದ್ದೇವೆ ಎಂದರು.ಉತ್ತರ ಸಂಚಾರ ಠಾಣೆ ಪಿಎಸ್ಐ ಮಹಾದೇವ ಭತ್ತಿ, ಅಧಿಕಾರಿ, ಸಿಬ್ಬಂದಿ ಇದ್ದರು.
ದಾವಣಗೆರೆಯಲ್ಲಿ ಪ್ರೀಪೇಯ್ಡ್ ಆಟೋ ಸೇವೆದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಪ್ರೀಪೇಯ್ಡ್ ಆಟೋ ಸೇವೆಗೆ ಚಾಲನೆ ನೀಡಿದ್ದು, ಪ್ರಯಾಣಿಕರುಇದರ ಸದುಪಯೋಗ ಪಡೆಯಬೇಕು. ಈ ಬಗ್ಗೆ ಸಂಚಾರ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸಹ ಜನರಿಗೆ ಅರಿವು ಮೂಡಿಸಬೇಕು. ಅಪ್ರಾಪ್ತರ ವಾಹನ ಚಾಲನೆ, ತ್ರಿಬಲ್ ರೈಡಿಂಗ್, ಏಕಮುಖ ರಸ್ತೆಗೆ ವಿರುದ್ಧವಾಗಿ ಸಂಚರಿಸುವವರು, ಹೆಲ್ಮೆಟ್ ಇಲ್ಲದೇ ಸಂಚರಿಸುವವರು, ಸಂಚಾರಕ್ಕೆ ಅಡಚಣೆಯಾಗುವಂತೆ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಮಾಡುವವರ ವಿರುದ್ದ ವಿಶೇಷ ಕಾರ್ಯಾಚರಣೆ ಕೈಗೊಂಡು, ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದೇನೆ ಎಂದು ಡಿಎಸ್‌ಪಿ ಉಮಾ ಪ್ರಶಾಂತ್ ಹೇಳಿದರು.