ಕೊಟ್ಟೂರು: ಪಟ್ಟಣದ ಗುರು ಕೊಟ್ಟೂರೇಶ್ವರ ರಥೋತ್ಸವಕ್ಕೆ ಆಗಮಿಸಿ ನಾಡಿನ ಪಾದಯಾತ್ರಿಕರಿಗಾಗಿ ಈ ಬಾರಿ 100 ಕಿ.ಮೀ.ನಷ್ಟು ರಸ್ತೆಯಲ್ಲಿ ನಾರಿನ ಮ್ಯಾಟ್ ಹಾಕಲಾಗುವುದು ಎಂದು ಶಾಸಕ ಕೆ.ನೇಮಿರಾಜ ನಾಯ್ಕ ಹೇಳಿದರು.ಇಲ್ಲಿನ ದೇವಸ್ಥಾನದ ಮುಂಭಾಗದಲ್ಲಿ ನಡೆದ ರಥೋತ್ಸವ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಶುಕ್ರವಾರ ಮಾತನಾಡಿದರು.
ಪಟ್ಟಣದ ಪ್ರತಿ ವಾರ್ಡ್‌ನಲ್ಲಿ ಸ್ವಚ್ಛತೆ ಕುಡಿವ ನೀರು, ಬೀದಿ ದೀಪಗಳ ವ್ಯವಸ್ಥೆಯನ್ನು ಪಪಂ ಅಧಿಕಾರಿಗಳು ನಿರ್ವಹಿಸಬೇಕು. ರಥ ಸಾಗುವ ಮಾರ್ಗದಲ್ಲಿ ಯಾರೂ ವಾಣಿಜ್ಯ ಅಂಗಡಿಗಳನ್ನು ಹಾಕದಂತೆ ನೋಡಬೇಕು. ಉಜ್ಜಯಿನಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೂಡಲೇ ಆರಂಭಿಸುವಂತೆ ಲೋಕೋಪಯೋಗಿ ಇಲಾಖೆಗೆ ತಿಳಿಸಿದರು.
ಪಾದಯಾತ್ರಿಕರಿಗೆ ಹಾಗೂ ಇತರೆ ಭಕ್ತರ ಆರೋಗ್ಯ ದೃಷ್ಟಿಯಿಂದ ಆರೋಗ್ಯ ಇಲಾಖೆಯವರು ಎಲ್ಲ ರಸ್ತೆಗಳಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನು ತೆರೆದು, ಅಗತ್ಯ ಸಿಬ್ಬಂದಿ ನಿಯೋಜಿಸಿ, ಎಲ್ಲ ಔಷಧಗಳನ್ನು ದಾಸ್ತಾನು ಮಾಡಿಕೊಂಡಿರಬೇಕು. ಸ್ವಾಮಿ ಮೂರ್ತಿಯೊಂದಿಗೆ ಅಗತ್ಯವಿರುವಷ್ಟು ಅರ್ಚಕರು ಮಾತ್ರ ರಥವನ್ನು ಏರಬೇಕು. ಅವರಿಗೆಲ್ಲ ಗುರುತಿನ ಚೀಟಿ ವಿತರಿಸಬೇಕು. ಕೊಟ್ಟೂರು ಪಟ್ಟಣದಲ್ಲಿ ರಥೋತ್ಸವಕ್ಕೆ ಶುಭ ಕೋರಿ ಯಾರೇ ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕದಂತೆ ಪಪಂ ಅಧಿಕಾರಿಗಳು ಕ್ರಮ ವಹಿಸಬೇಕು. ನನ್ನ ಭಾವಚಿತ್ರದ ಫ್ಲೆಕ್ಸ್ ಇದ್ದರೂ ಮುಲಾಜಿಲ್ಲದೇ ಕಿತ್ತು ಹಾಕಬೇಕು. ಯಾರದೇ ಶಿಫಾರಸ್ಸಿಗೆ ಮಣಿಯಬಾರದು. ರಥೋತ್ಸವ ದಿನಗಳಲ್ಲಿ ವಿದ್ಯುತ್ ತೊಂದರೆಯಾಗದಂತೆ ಜೆಸ್ಕಾಂ ಅಧಿಕಾರಿಗಳು ಮುಂಜಾಗೃತ ಕ್ರಮಗಳನ್ನು ವಹಿಸಬೇಕು ಎಂದು ತಿಳಿಸಿದರು.ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, ವಾಹನಗಳ ಪಾರ್ಕಿಂಗ್, ಬಂದೋಬಸ್ತ್, ಕುಡಿವ ನೀರು, ನೈರ್ಮಲ್ಯ, ಸಾರಿಗೆ, ರಸ್ತೆ ಅಭಿವೃದ್ಧಿ, ಆರೋಗ್ಯ ಸೇರಿ ಇತರೆ ಇಲಾಖೆಯವರು ತಮ್ಮ ಪಾಲಿನ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಸಬೇಕು. ಜಾತ್ರೆಯಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಹೇಳಿದರು.
ವಾಲ್ಮೀಕಿ ಸಮಾಜ ಮುಖಂಡ ಫಕ್ಕೀರಪ್ಪ ಮಾತನಾಡಿ, ರಥೋತ್ಸವ ಸಾಗುತ್ತಿರುವಾಗ ಕೆಲವರು ತಮ್ಮ ಜಾತಿಯ ಧ್ವಜ ಹಿಡಿದು ತೊಂದರೆ ಮಾಡುತ್ತಾರೆ. ಅಂತಹವರಿಗೆ ಕಡಿವಾಣ ಹಾಕುವಂತೆ ಮನವಿ ಮಾಡಿದರು. ರಥೋತ್ಸವ, ಜಾತ್ರೆ ಧಾರ್ಮಿಕತೆಗೆ ಸಂಬಂಧಿಸಿದಂತೆ ಯಾವುದೇ ಜಾತಿ ಧರ್ಮದ ಧ್ವಜಗಳನ್ನು ಯಾರೂ ಹಿಡಿದು ಪ್ರದರ್ಶಿಸಬಾರದು. ಅಂತಹ ಕಿಡಿಗೇಡಿತನ ಮಾಡುವವರಿಗೆ ತಿಳಿ ಹೇಳಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಾಸಕರು ಹೇಳಿದರು.ದೀಪಾ ಪ್ರಕಾಶ, ಮೋರಿಗೇರಿ ಮಂಜುನಾಥ, ಅಡಿಕೆ ಮಂಜುನಾಥ, ರವಿಕುಮಾರ್, ಉಜ್ಜಯಿನಿ ರುದ್ರಪ್ಪ, ಕೆ.ಕೊಟ್ರೇಶ್, ಸಿ.ಕೊಟ್ರೇಶ್, ಕೂಡ್ಲಿಗಿ ಕೊಟ್ರೇಶ್, ಎಂ.ನಾಗರಾಜ ಸೇರಿ ಇತರರು ಜಾತ್ರೆಗೆ ಸಂಬಂಧಿಸಿದಂತೆ ಸಲಹೆ ನೀಡಿದರು.
ಸಾನ್ನಿಧ್ಯ ವಸಹಿಸಿದ್ದ ದೇವಸ್ಥಾನದ ಕ್ರಿಯಾಮೂರ್ತಿಗಳಾದ ಶ್ರೀ ಶಿವಪ್ರಕಾಶ್ ಕೊಟ್ಟೂರು ದೇವರು, ಧರ್ಮಕರ್ತ ಎಂ.ಕೆ ಶೇಖರಯ್ಯ, ಎಸ್‌ಪಿ ಎಸ್.ಜಾಹ್ನವಿ, ಡಿವೈಎಸ್‌ಪಿ ಮಲ್ಲೇಶ ದೊಡ್ಡಮನಿ, ಧಾರ್ಮಿಕ ಇಲಾಖೆ ಸಹಾಯಕ ಆಯುಕ್ತೆ ಸವಿತಾ, ತಹಸೀಲ್ದಾರ ಜಿ.ಕೆ.ಅಮರೇಶ, ತಾಪಂ ಇಒ ಡಾ.ಆನಂದಕುಮಾರ್, ಜಿಪಂ ಮಾಜಿ ಸದಸ್ಯರಾದ ಎಂಎಂಜೆ ಹರ್ಷವರ್ಧನ, ಪಿಎಚ್.ದೊಡ್ಡರಾಮಣ್ಣ, ಸಿಪಿಐ ದುರುಗಪ್ಪ ವೇದಿಕೆಯಲ್ಲಿದ್ದರು.ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳಾದ ಕೆ.ನಾಗನಗೌಡ, ಮಲ್ಲಿಕಾರ್ಜುನಸ್ವಾಮಿ, ಡಾ.ಬದ್ಯಾನಾಯ್ಕ, ಎ.ನಸರುಲ್ಲಾ, ಗೀತಾಂಜಲಿ, ನಾಗರಾಜ, ಜಹಾಂಗೀರ ಸೇರಿ ಅನೇಕ ಮುಖಂಡರುಗಳು ಪಾಲ್ಗೊಂಡಿದ್ದರು. ಇಒ ಮಲ್ಲಪ್ಪ ಪ್ರಾಸ್ತಾವಿಕ ಮಾತನಾಡಿದರು. ಅರವಿಂದ ಬಸಾಪುರ ನಿರ್ವಹಿಸಿದರು.
ಮೆಚ್ಚುಗೆ: ರಥ ನಿರ್ಮಾಣ ಮಾಡುವ ಸೇವಕರು ಪ್ರತಿ ವರ್ಷ ನಿರ್ಮಾಣಕ್ಕೆ ಪ್ರತಿಯಾಗಿ ಸಂಭಾವನೆಯನ್ನು ಧಾರ್ಮಿಕ ಇಲಾಖೆ ನೀಡುತ್ತಿತ್ತು. ಆದರೆ ಈ ವರ್ಷ ಯಾವುದೇ ಸಂಭಾವನೆ ಪಡೆಯದೇ ಉಚಿತವಾಗಿ ರಥ ನಿರ್ಮಾಣ ಮಾಡುತ್ತೇವೆ ಎಂದು ರಥ ನಿರ್ಮಾಣಗಾರರು ಸಭೆಯಲ್ಲಿ ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಇದಕ್ಕೆ ಶಾಸಕರು ಸೇರಿ ಎಲ್ಲ ಅಧಿಕಾರಿಗಳು ಅವರ ಸೇವಾ ಮನೋಭಾವನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.