‘ಅಸಲಿ-ನಕಲಿ’ ಚರ್ಚೆಯಲ್ಲೇ ಮುಳುಗಿದ ವಿಶೇಷ ಸಾಮಾನ್ಯಸಭೆ

KannadaprabhaNewsNetwork |  
Published : Mar 21, 2025, 12:32 AM IST
ಕಕಜ | Kannada Prabha

ಸಾರಾಂಶ

ಬಹುವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯುಜಿಡಿ ಕಾಮಗಾರಿ ತ್ವರಿತಗತಿಯಲ್ಲಿ ನಡೆಸಲು ಕರೆಯಲಾದ ವಿಶೇಷ ಸಾಮಾನ್ಯ ಸಭೆ ಬಹುಪಾಲು ಅಧ್ಯಕ್ಷರ ಮನೆ ನಿರ್ಮಾಣದಲ್ಲಿ ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಕುರಿತಂತೆ ಬಿಸಿಬಿಸಿ ಚರ್ಚೆಯಲ್ಲೇ ಮುಳುಗಿತು.

ಅಧ್ಯಕ್ಷರ ಪ್ರಾಮಾಣಿಕತೆ ಹಾಡಿಹೊಗಳಿದ ವಿಪಕ್ಷ ನಾಮನಿರ್ದೇಶಿತ ಸದಸ್ಯ

ಕನ್ನಡಪ್ರಭ ವಾರ್ತೆ ಕುಂದಾಪುರ

ಕಳೆದ ಕೆಲ ದಿನಗಳಿಂದ ಪುರಸಭೆ ಅಧ್ಯಕ್ಷ ಮೋಹನ್‌ದಾಸ್ ಶೆಣೈ ಮನೆ ನಿರ್ಮಾಣದ ವಿಚಾರದಲ್ಲಿ ಪೋಸ್ಟರ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಧ್ಯಕ್ಷರ ತೇಜೋವಧೆಗೆ ಯತ್ನಿಸಿದವರ ವಿರುದ್ದ ಆಡಳಿತ ಹಾಗೂ ವಿಪಕ್ಷ ಸದಸ್ಯರಿಂದ ಆಕ್ರೋಶ ವ್ಯಕ್ತವಾದ ಘಟನೆ ಗುರುವಾರ ಮಧ್ಯಾಹ್ನ ಕುಂದಾಪುರ ಪುರಭೆಯ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಬಹುವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯುಜಿಡಿ ಕಾಮಗಾರಿ ತ್ವರಿತಗತಿಯಲ್ಲಿ ನಡೆಸಲು ಕರೆಯಲಾದ ವಿಶೇಷ ಸಾಮಾನ್ಯ ಸಭೆ ಬಹುಪಾಲು ಅಧ್ಯಕ್ಷರ ಮನೆ ನಿರ್ಮಾಣದಲ್ಲಿ ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಕುರಿತಂತೆ ಬಿಸಿಬಿಸಿ ಚರ್ಚೆಯಲ್ಲೇ ಮುಳುಗಿತು.

ಸಭೆಯ ಅಜೆಂಡಾ ಆರಂಭಿಸುವ ಮುನ್ನವೇ ಆಡಳಿತ ಪಕ್ಷದ ಸದಸ್ಯ ರಾಘವೇಂದ್ರ ಖಾರ್ವಿ ವಿಷಯ ಪ್ರಸ್ತಾಪಿಸಿ, ವಿರೋಧ ಪಕ್ಷದ ಸದಸ್ಯೆ ಪ್ರಭಾವತಿ ಶೆಟ್ಟಿ ಅವರು ಅಧ್ಯಕ್ಷರ ಮೇಲೆ ಸುಳ್ಳು ಆರೋಪ ಹೊರಿಸಿದ ಪೋಸ್ಟರ್ ಅನ್ನು ತಮ್ಮ ವಾಟ್ಸಾಪ್ ಸ್ಟೇಟಸ್‌ಗೆ ಹಾಕಿಕೊಂಡಿರುವ ಬಗ್ಗೆ ಆಕ್ಷೇಪಿಸಿ ದಾಖಲೆಗಳಿದ್ದರೆ ಬಹಿರಂಗಪಡಿಸಲು ಸವಾಲು ಹಾಕಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಸಂತೋಷ್ ಶೆಟ್ಟಿ, ಪ್ರಾಮಾಣಿಕ ಅಧ್ಯಕ್ಷರ ಮೇಲೆ ಈ ರೀತಿ ಸುಳ್ಳು ಆರೋಪ ಹೊರಿಸುವುದು ತರವಲ್ಲ. ಅಸಲಿ ದಾಖಲೆಯನ್ನು ನಕಲಿ ದಾಖಲೆಗಳಾಗಿ ಪರಿವರ್ತಿಸಲಾಗಿದೆ. ಅಸಲಿ, ನಕಲಿ ಎರಡೂ ದಾಖಲೆ ಕೊಟ್ಟ ಅಧಿಕಾರಿ ಯಾರೆಂದು ಸಾಬೀತಾಗಲಿ. ಇದು ಸಣ್ಣ ಆರೋಪವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಮನಿರ್ದೇಶಿತ ಸದಸ್ಯ ಗಣೇಶ್ ಶೇರಿಗಾರ್ ಮಾತನಾಡಿ, ಪುರಸಭಾ ಸದಸ್ಯರಾಗಿ, ಅಧ್ಯಕ್ಷರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಮೋಹನ್‌ದಾಸ್ ಶೆಣೈ ಅವರ ಮೇಲೆ ಈ ರೀತಿಯ ಸುಳ್ಳು ಆರೋಪ ಹೊರಿಸಿರುವುದು ಸರಿಯಲ್ಲ. ಅಧ್ಯಕ್ಷರ ಮನೆ ನಿರ್ಮಾಣದ ವಿಚಾರದಲ್ಲಿ ನೀಡಿದ ದಾಖಲೆಗಳ ಪೈಲುಗಳೇ ಕಳೆದು ಹೋದರೆ ಸಾಮಾನ್ಯ ಜನರ ಫೈಲುಗಳ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.ವಿಪಕ್ಷ ಸದಸ್ಯ ಶ್ರೀಧರ್ ಶೇರಿಗಾರ್ ಮಾತನಾಡಿ, ನಕಲಿ ದಾಖಲೆ ಯಾವ ಅಧಿಕಾರಿ ಕೊಟ್ಟಿದ್ದಾರೆ ಎನ್ನುವುದರ ಕುರಿತು ಸ್ಪಷ್ಟೀಕರಣ ಕೊಡಬೇಕು. ಅಧ್ಯಕ್ಷರ ವಿರುದ್ದ ನಮ್ಮ ಗಲಾಟೆ ಅಲ್ಲ ಎಂದರು.

ಅಧ್ಯಕ್ಷ ಮೋಹನ್‌ದಾಸ್ ಶೆಣೈ ಮಧ್ಯಪ್ರವೇಶಿಸಿ, ನನ್ನ ಮೇಲೆ ಕಳೆದ ಬಾರಿ ಇಂತಹುದೆ ಆರೋಪಗಳು ಬಂದಿತ್ತು. ಆಗ ಸುಮ್ಮನಿದ್ದೆ. ಇಂಟರ್‌ಲಾಕ್ ಅಳವಡಿಕೆ, ದೇವಸ್ಥಾನ ರಥೋತ್ಸವ ಹೀಗೆ ಹಲವು ಸಂದರ್ಭಗಳಲ್ಲಿ ನನ್ನ ಮೇಲೆ ಆರೋಪಗಳು ಬಂದವು. ಮನೆ ನಿರ್ಮಾಣದ ವಿಚಾರದಲ್ಲಿ ನಾನು ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದೇನೆ. ನಿರಪೇಕ್ಷಣಾ ಪತ್ರ, ತೆರಿಗೆ, ವಿದ್ಯುತ್ ಬಿಲ್ ಎಲ್ಲವನ್ನೂ ಕೊಟ್ಟಿದ್ದೇನೆ. ಕಾನೂನು ಮೀರಿ ಯಾವುದೇ ಕೆಲಸ ಮಾಡಿಲ್ಲ. ನನ್ನ ಮನೆಗೆ ಸಂಬಂಧಿಸಿದ ಕಡತವೇ ಪುರಸಭೆಯಲ್ಲಿ ಇಲ್ಲ. ನಂಬರ್‌ಗಳಿವೆ, ಕಡತಗಳ ಹಾಳೆಗಳಿಲ್ಲ. ಇದರ ಹುಡುಕಾಟ ನಡೆಯುತ್ತಿದೆ ಎಂದರು.

ಆರ್‌ಟಿಐ ಅಡಿ ಮಾಹಿತಿ ಕೇಳಿದಾಗ ದಾಖಲೆಗಳು ಇರಲಿಲ್ಲ, ಆದ್ದರಿಂದ ಹಾಗೆಯೇ ನೀಡಲಾಗಿದೆ. ಕಡತ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದು ಮುಖ್ಯಾಧಿಕಾರಿ ಆನಂದ್ ಜೆ. ಹೇಳಿದರು.

ಟ್ರಾಫಿಕ್ ನಿರ್ವಹಣೆ, ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕುರಿತಂತೆ ಕರೆದ ವಿಶೇಷ ಸಾಮಾನ್ಯ ಸಭೆಗೆ ಸಂಚಾರಿ ಠಾಣೆಯ ಪೊಲೀಸರು ಗೈರಾಗಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಸಭೆಗೆ ಗೈರಾದ ಪೊಲೀಸ್ ಅಧಿಕಾರಿಗಳ ವಿರುದ್ದ ಮೇಲಾಧಿಕಾರಿಗಳಿಗೆ ಪತ್ರ ಬರೆದು ಕ್ರಮಕೈಗೊಳ್ಳಬೇಕೆಂದು ಸದಸ್ಯ ಗಿರೀಶ್ ಜಿ.ಕೆ ಆಗ್ರಹಿಸಿದರು.

ದಶಕಗಳಿಂದ ನಡೆಯುತ್ತಿರುವ ಅರೆಬರೆ ಕಾಮಗಾರಿಯಾಗಿ ನನೆಗುದಿಗೆ ಬಿದ್ದಿರುವ ಒಳಚರಂಡಿ ಯೋಜನೆ ಪೂರ್ಣಗೊಳಿಸಲು ೪೦ ಕೋ.ರು. ಅನುದಾನದ ಕಡತ ಮಂಜೂರಾಗುವುದರಲ್ಲಿದ್ದು, ೬ ಕೋ.ರೂ. ಹೆಚ್ಚುವರಿಯಾಗಿ ಕೇಂದ್ರದಿಂದ ಮಂಜೂರಾಗಿದೆ. ತ್ಯಾಜ್ಯವಿಲೇ ಎಸ್‌ಟಿಪಿಗೆ ಹುಂಚಾರಬೆಟ್ಟು ಸ್ಥಳೀಯರ ವಿರೋಧವಿದೆ. ಕಾಮಗಾರಿ ನಡೆಸಲು ಖಾರ್ವಿಕೇರಿ, ಮದ್ದುಗುಡ್ಡೆ, ಫರ‍್ರಿರೋಡ್ ಮೊದಲಾದ ವಾರ್ಡ್‌ಗಳ ಒತ್ತಡವಿದೆ. ಕಾಮಗಾರಿ ಪೂರ್ಣಗೊಳಿಸುವ ಗೊಂದಲ ನಿವಾರಣೆಗೆ ಮತಕ್ಕೆ ಹಾಕಲಾಯಿತು. ಸಭೆಗೆ ೫ ಸದಸ್ಯರು ಗೈರಾಗಿದ್ದರು. ಹಾಜರಿದ್ದ ೧೮ ಸದಸ್ಯರ ಪೈಕಿ ಒಬ್ಬರು ಸ್ಥಳದಲ್ಲಿ ಇರಲಿಲ್ಲ. ಯುಜಿಡಿ ನಿಗದಿಪಡಿಸಿದ ಸ್ಥಳದಲ್ಲೇ ಪೂರ್ಣಗೊಳಿಸಬೇಕು ಎಂದು ೧೬ ಮತ, ಬದಲಿ ಜಾಗದಲ್ಲಿ ಮಾಡಬೇಕು ಎಂದು ೧ ಮತ ಬಿತ್ತು.

ಯುಜಿಡಿ ಯೋಜನೆ ೧೦ ವರ್ಷಗಳ ಹಿಂದಿನ ಕಾಮಗಾರಿ ದರದಲ್ಲಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಉಳಿಕೆ ಹಣ ಹಾಗೂ ಹೆಚ್ಚುವರಿ ಅನುದಾನ ಬಳಸಿ ೪೦ ಕೋ.ರು. ಅಂದಾಜುಪಟ್ಟಿ ಸಲ್ಲಿಸಲಾಗಿದೆ. ಬಜೆಟ್ ಅಧಿವೇಶನ ಮುಗಿದ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಮಂಜೂರಾದರೆ ಕಾಮಗಾರಿ ನಡೆಸಬಹುದು ಎಂದು ಕೆಯುಐಡಿಎಫ್‌ಸಿ ಎಂಜಿನಿಯರ್ ಪವನ್, ಯುಜಿಡಿ ಎಂಜಿನಿಯರ್ ರಕ್ಷಿತ್ ರಾವ್ ಮಾಹಿತಿ ನೀಡಿದರು.

ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್ ವಿ. ಮುಖ್ಯಾಧಿಕಾರಿ ಆನಂದ ಜೆ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ