ಕನ್ನಡಪ್ರಭ ವಾರ್ತೆ ಮದ್ದೂರು
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಿಂದ ಉತ್ತರ ಪ್ರದೇಶದ ಮಾರುಕಟ್ಟೆಗೆ ಪ್ರತಿನಿತ್ಯ ಕನಿಷ್ಠ 50 ಸಾವಿರ ಲೀಟರ್ ಹಾಲು ಪೂರೈಕೆಯಾಗುತ್ತಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಆರ್.ಮಂಜೇಶ್ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದ ವೃತ್ತದ ನೈದಿಲೆ ವಸತಿಗೃಹದ ಆವರಣದಲ್ಲಿ ಸೋಮವಾರ ನಂದಿನಿ ಹಾಲು ಮತ್ತು ಉಪ ಉತ್ಪನ್ನಗಳ ಮಾರಾಟ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉತ್ತರ ಪ್ರದೇಶ- ದೆಹಲಿ ಮಾರುಕಟ್ಟೆಗಳಿಗೆ ಈ ಮೊದಲು ಹತ್ತು ಸಾವಿರ ಲೀಟರ್ ಹಾಲು ಪೂರೈಕೆಯಾಗುತ್ತಿತ್ತು. ಕಾರಣಾಂತರಗಳಿಂದ ಮಾರುಕಟ್ಟೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಆನಂತರ ಒಕ್ಕೂಟದ ನಿರ್ದೇಶಕರು ಮತ್ತು ಮಾರುಕಟ್ಟೆ ವಿಭಾಗದ ಅಧಿಕಾರಿಗಳ ಪರಿಶ್ರಮದ ಫಲವಾಗಿ ದೆಹಲಿ ಮಾರುಕಟ್ಟೆ ಸಮಸ್ಯೆ ಬಗೆಹರಿದು ಪ್ರತಿನಿತ್ಯ 50 ಸಾವಿರ ಲೀಟರ್ ಹಾಲು ಮಾರಾಟವಾಗುವ ಹಂತಕ್ಕೆ ಬಂದಿದೆ ಎಂದರು.ನಂದಿನಿ ಬ್ರ್ಯಾಂಡ್ ಉಪ ಉತ್ಪನ್ನಗಳಿಗೆ ಉತ್ತರಪ್ರದೇಶದಿಂದ ಬೇಡಿಕೆ ಬರುತ್ತಿದೆ. ಮುಂದಿನ ದಿನಗಳಲ್ಲಿ ಅಲ್ಲಿನ ಮಾರುಕಟ್ಟೆಗೆ ಉಪ ಉತ್ಪನ್ನಗಳ ಪೂರೈಕೆಗೆ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದರು.
ನಂದಿನಿ ಮಾರಾಟ ಕೇಂದ್ರವನ್ನು ಉದ್ಘಾಟಿಸಿದ ಒಕ್ಕೂಟದ ನಿರ್ದೇಶಕ ಎಸ್.ಪಿ.ಸ್ವಾಮಿ, ರಾಜ್ಯದ ಎಲ್ಲಾ 16 ಹಾಲು ಒಕ್ಕೂಟಗಳ ಪೈಕಿ ಮಂಡ್ಯ ಹಾಲು ಒಕ್ಕೂಟ ಪ್ರತಿದಿನ 4.25 ಲಕ್ಷ ಲೀಟರ್ ಹಾಲು ಹಾಗೂ ಒಂದು ಲಕ್ಷ ಲೀಟರ್ ಮೊಸರು ಮಾರಾಟ ಮಾಡುತ್ತಿದೆ ಎಂದರು.ಹಾಲು ಮತ್ತು ಉಪ ಉತ್ಪನ್ನಗಳ ಮಾರಾಟ ಹೆಚ್ಚಳವಾಗಬೇಕೆಂಬ ಉದ್ದೇಶದಿಂದ ಆಯ್ದ ಸ್ಥಳಗಳಲ್ಲಿ ನಂದಿನಿ ಹಾಲಿನ ಮಾರಾಟ ಕೇಂದ್ರವನ್ನು ತೆರೆಯಲಾಗುತ್ತಿದೆ. ಇದರಿಂದ ಒಕ್ಕೂಟ ಲಾಭಗಳಿಸುವ ಜೊತೆಗೆ ರೈತರಿಗೂ ಹಾಲಿನ ಖರೀದಿ ದರವನ್ನು ಹೆಚ್ಚಳ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನೂತನ ನಿರ್ದೇಶಕ ಹರೀಶ್ ಬಾಬು, ಒಕ್ಕೂಟದ ಮಾರುಕಟ್ಟೆ ವಿಭಾಗದ ಸಹಾಯಕ ವ್ಯವಸ್ಥಾಪಕ ಸಿ.ಎನ್. ಸಾಗರ್, ಉಪ ವ್ಯವಸ್ಥಾಪಕಿ ಜೆ.ಡಿ .ಬಿಂದುಶ್ರೀ, ಮೇಲ್ವಿಚಾರಕರಾದ ಪ್ರಶಾಂತ್ ಮತ್ತು ಸೋಮಶೇಖರ್ ಭಾಗವಹಿಸಿದ್ದರು.