ವಿಶೇಷ ಕೋವಿ ಹಕ್ಕು ಇನ್ನು 3 ವರ್ಷದಲ್ಲಿ ಮೊಟಕು: ಎ. ಎಸ್. ಪೊನ್ನಣ್ಣ

KannadaprabhaNewsNetwork |  
Published : Oct 20, 2025, 01:04 AM IST
ಚಿತ್ರ : 19ಎಂಡಿಕೆ1 : 02.ಪೌರ ಕಾರ್ಮಿಕ ಸುಂದರ ದಂಪತಿಗಳಿಗೆ ಸನ್ಮಾನ ಮಾಡಲಾಯಿತು.  | Kannada Prabha

ಸಾರಾಂಶ

ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ 10 ದಿನದ ಚಂಗ್ರಾಂದಿ ಪತ್ತಾಲೋದಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಸ್ವತಂತ್ರ ಪೂರ್ವದಿಂದಲೇ ಇದ್ದ ಹಾಗೂ ಸ್ವತಂತ್ರ ನಂತರ 2019 ವರೆಗೂ ಅಭಾದಿತವಾಗಿ ಮುಂದುವರೆದು ಕೊಡವರು ಹಾಗೂ ಜಮ್ಮಾ ಹಿಡುವಳಿದಾರರು ಹೊಂದಿದ್ದ ನಮ್ಮ ಸಂಸ್ಕೃತಿಯ ಭಾಗವಾಗಿರುವ ವಿಶೇಷ ವಿನಾಯಿತಿಯ ಕೋವಿ ಹಕ್ಕು ಇನ್ನು ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಹೊಸ ನೋಟಿಫಿಕೇಶನ್ ಪ್ರಕಾರ ಮೊಟಕುಗೊಳ್ಳಲಿದ್ದು, ಈ ಹಕ್ಕನ್ನು ಹಿಂದಿನಂತೆ ಶಾಶ್ವತವಾಗಿ ಉಳಿಸಿಕೊಳ್ಳಲು ಕೊಡವ ಸಮಾಜಗಳು ಸಂಘ ಸಂಸ್ಥೆಗಳು ಎಚ್ಚೆತ್ತುಕೊಂಡು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಈ ಹಕ್ಕು ಕಳೆದುಕೊಂಡರೆ ನಮ್ಮ ಮುಂದಿನ ಪೀಳಿಗೆ ಕ್ಷಮಿಸುವುದಿಲ್ಲ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಕರೆ ನೀಡಿದರು.ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆಯುತ್ತಿರುವ 10 ದಿನದ ಚಂಗ್ರಾಂದಿ ಪತ್ತಾಲೋದಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೊಡವ ಜನಾಂಗಕ್ಕೆ ಮತ್ತು ಜಮ್ಮಾ ಹಿಡುವಳಿದಾರರಿಗೆ ನೀಡಿದ್ದ ವಿಶೇಷ ಕೋವಿ ವಿನಾಯಿತಿ ಹಕ್ಕನ್ನು ಪ್ರಶ್ನಿಸಿದ್ದ ವಿಚಾರವಾಗಿ ನಾನು ಸೇರಿದಂತೆ ಜನಾಂಗದ ಹಲವಾರು ಪ್ರಮುಖ ವಕೀಲರು ಹಕ್ಕನ್ನು ಉಳಿಸಿಕೊಳ್ಳುವ ಬಗೆ ನ್ಯಾಯಲಯಕ್ಕೆ ಮನವರಿಕೆ ಮಾಡಿದ್ದೇವೆ. ಆದರೆ ಕೇಂದ್ರ ಸರ್ಕಾರ 2019ರಲ್ಲಿ ಹಳೆಯ ನೋಟಿಫಿಕೇಶನ್ ತಿದ್ದುಪಡಿ ಮಾಡಿ ಹೊಸ ನೋಟಿಫಿಕೇಶನ್ ಹೊರಡಿಸಿ ಮುಂದಿನ 10 ವರ್ಷಕ್ಕೆ ಸೀಮಿತವಾಗುವಂತೆ ಅಂದರೆ 2029 ರವರೆಗೆ ಮಾತ್ರ ವಿಶೇಷ ಕೋವಿ ವಿನಾಯಿತಿ ಹಕ್ಕು ಇರುತ್ತದೆ. ಆದರೆ ಇಂತಹ ಶಾಶ್ವತವಾಗಿದ್ದ ವಿನಾಯಿತಿ ಹಕ್ಕು ಹೇಗೆ ಬದಲಾಯಿತು. ಈ ಬಗ್ಗೆ ನಾವು ಯಾವುದೇ ಹೋರಾಟವನ್ನು ಮಾಡಲಿಲ್ಲ ಹಾಗೂ ಅದನ್ನು ಪ್ರಶ್ನೆಯನ್ನು ಸಹ ಮಾಡಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು ಇಂತಹ ಪ್ರಮುಖ ವಿಚಾರದ ಬಗ್ಗೆ ನಾವು ಪ್ರಶ್ನೆ ಮಾಡುವ ಶಕ್ತಿಯನ್ನೇ ಕಳೆದುಕೊಂಡರೆ ಸಂಸ್ಕೃತಿ ಉಳಿಯುವುದಿಲ್ಲ. ನಾಳೆ ನಮ್ಮ ಮಕ್ಕಳು ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಅವರು ಹೇಳಿದರು.

ಆಚಾರ ವಿಚಾರಗಳಿಗೆ ಧಕ್ಕೆ:

ಇನ್ನೂ ಮೂರು ವರ್ಷಕ್ಕೆ ನಮ್ಮ ಕೋವಿ ಹಕ್ಕು ಸೀಮಿತವಾಗಲಿದೆ, ಕೊಡವ ಮತ್ತು ಜಮ್ಮಾ ಹಿಡುವಳಿದಾರರ ಸಂಸ್ಕೃತಿ ಆಚಾರ ವಿಚಾರಗಳಲ್ಲಿ ಪ್ರಮುಖವಾಗಿರುವ ಕೋವಿ ಹಕ್ಕು, ಮೊಟಕುಗೊಂಡರೆ ನಮ್ಮ ಹಕ್ಕು ನಮ್ಮ ಸಂಸ್ಕೃತಿ ಆಚಾರ ವಿಚಾರಗಳಿಗೆ ಧಕ್ಕೆ ಉಂಟಾಗಲಿದೆ. ಇಂತಹ ವಿಚಾರದ ಬಗ್ಗೆ ಒಗ್ಗಟ್ಟಾಗಿ ಪ್ರಶ್ನೆ ಮಾಡಬೇಕು ಹಾಗೂ ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಖಿಲ ಕೊಡವ ಸಮಾಜ, ಕೊಡವ ಸಮಾಜಗಳು, ಸಂಘ ಸಂಸ್ಥೆಗಳು ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.

ಮುಂದುವರೆದು ಮಾತನಾಡಿದ ಅವರು ಯುನೆಸ್ಕೋ ವರದಿ ಪ್ರಕಾರ 40-50 ವರ್ಷಗಳಲ್ಲಿ ಕೋಟ್ಯಾಂತರ ಜನರು ಮಾತನಾಡುವ ಕನ್ನಡ ಭಾಷೆಗೆ ಅಪಾಯವಿದೆ ಎಂದು ಹೇಳಿದೆ. ಹಾಗಾದರೆ ತುಂಬಾ ಚಿಕ್ಕ ಜನಾಂಗವಾಗಿರುವ ಕೊಡವ ಭಾಷೆಗೆ ಮತ್ತಷ್ಟು ಅಪಾಯವಿದೆ. ಇದು ಜಾತಿವಾದ ಅಲ್ಲ. ಒಂದು ಭಾಷೆ ಸಂಸ್ಕೃತಿ ಸಂರಕ್ಷಣೆಯ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಪ್ರತಿಪಾದಿಸಿದರು.

ಆಂತರಿಕವಾಗಿ ನಂಬಿಕೆ ಇರಬೇಕು:

ಒಂದು ಭಾಷೆ ಸಂಸ್ಕೃತಿ ಆಚಾರ ವಿಚಾರ ಆಚರಣೆಗಳು ರಕ್ಷಣೆ ಆಗಬೇಕಾದರೆ ಅದರ ಮೇಲೆ ಆಂತರಿಕವಾಗಿ ನಂಬಿಕೆ ಇರಬೇಕು. ನಾವು ಕೋಟ್ಯಾಂತರ ಜನ ಆಚರಣೆ ಮಾಡುವ ಪ್ರಭಾವದ ಪದ್ಧತಿ ಅಳವಡಿಸಿಕೊಂಡಾಗ ಅತಿ ಚಿಕ್ಕ ಸಮುದಾಯದ ಸಂಸ್ಕೃತಿ ಮತ್ತು ಆಚರಣೆ ಏನಾಗುತ್ತದೆ ಎಂದು ಪರಿಕಲ್ಪನೆ ಅಗತ್ಯ. ನಗರ ಪ್ರದೇಶಗಳಲ್ಲಿ ವಾಸಿಸುವ ಕೊಡವರು ಕೊಡವ ಭಾಷೆ ಮಾತನಾಡುವುದು ವಿರಳವಾಗಿದೆ. ಇಂಗ್ಲೀಷ್ ಭಾಷೆ ಮಾತನಾಡುವುದು ತಪ್ಪು ಎಂದು ಹೇಳುವುದಿಲ್ಲ, ಆದರೆ ನಮ್ಮ ಸಂಸ್ಕೃತಿ ಭಾಷೆ ಬಿಟ್ಟು ಹೋದರೆ ಅದರ ಸಂರಕ್ಷಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.ಬದಲಾಗುವ ಪ್ರಪಂಚದ ವ್ಯವಸ್ಥೆಗೆ ಅನುಗುಣವಾಗಿ ನಾವು ತಿದ್ದಿಕೊಂಡಾಗ ಮಾತ್ರ ಪಟ್ಟೋಲೆ ಪಳಮೆ ಕೃತಿಯಲ್ಲಿ ಉಲ್ಲೇಖವಾದಂತೆ ಸೂರ್ಯ ಚಂದ್ರ ಇರುವವರಿಗೆ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದು ಹೇಳಿದರು.

ಪ್ರಾಸ್ತವಿಕವಾಗಿ ಮಾತನಾಡಿದ ಟಿ. ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ ಅವರು ಕಳೆದ 9 ವರ್ಷಗಳಿಂದ ಪತ್ತಾಲೋದಿಯ 10 ದಿನದ ಕಾರ್ಯಕ್ರಮ ನಡೆಸಲಾಗುತ್ತಿದೆ. ಇಂತಹ ಕಾರ್ಯಕ್ರಮದಿಂದ ಸಂಸ್ಕೃತಿಯ ಬೆಳವಣಿಗೆ, ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಹಾಗೂ ಮನೋರಂಜನೆಗೆ ಸಹಕಾರಿಯಾಗುತ್ತದೆ ಎಂದರು.

ಮತ್ತೋರ್ವ ಅತಿಥಿ ದಾನಿ ಅಜ್ಜಮಾಡ ಬಿ ತಿಮ್ಮಯ್ಯ ಅವರು ಮಾತನಾಡಿ, ಪರಿಸ್ಥಿತಿಗೆ ತಕ್ಕಂತೆ ನಾವು ಸಹ ಬದಲಾಗಬೇಕಾಗಿದೆ, ಕೊಡವ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಹೆಚ್ಚಿನ ಮುತುವರ್ಜಿ ಮತ್ತು ಅಭಿಮಾನ ತೋರಬೇಕಾಗಿದೆ ಎಂದು ಹೇಳಿದರು.ಸಂಸ್ಕೃತಿ ಉಳಿಯುತ್ತದೆ:

ಮತ್ತೋರ್ವ ಅತಿಥಿ ಕೊಡವ ಸಮಾಜದ ಮಾಜಿ ಅಧ್ಯಕ್ಷ ಚೊಟ್ಟೆಯಾಂಡಮಾಡ ವಿಶ್ವನಾಥ್ ಅವರು ಮಾತನಾಡಿ ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ ಎಂದು ಹೇಳಿದರು.ವೇದಿಕೆಯಲ್ಲಿ ಟಿ. ಶೆಟ್ಟಿಗೇರಿ ಕೊಡವ ಸಮಾಜ ನಿರ್ದೇಶಕ ಬೊಳ್ಳೇರ ಅಪ್ಪುಟ ಪೊನ್ನಪ್ಪ, ಸಂಭ್ರಮ ಮಹಿಳಾ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ತಡಿಯಂಗಡ ಸೌಮ್ಯ ಕರುಂಬಯ್ಯ, ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೋಟ್ರಮಾಡ ರೇಷ್ಮಾ ಕಾರ್ಯಪ್ಪ ಹಾಜರಿದ್ದರು.ಚಂಗುಲಂಡ ಅಶ್ವಿನಿ ಸತೀಶ್ ಪ್ರಾರ್ಥಿಸಿ, ಸಮಾಜದ ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ ಸ್ವಾಗತಿಸಿ, ಸಮಾಜದ ಸಾಂಸ್ಕೃತಿಕ ಸಮಿತಿ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ಕಾರ್ಯಕ್ರಮ ನಿರ್ವಹಿಸಿ, ನಿರ್ದೇಶಕರಾದ ಬಾದುಮಂಡ ವಿಷ್ಣು ಕಾರ್ಯಪ್ಪ ವಂದಿಸಿದರು.ಸನ್ಮಾನ: ದಾನಿ ಅಜ್ಜಮಾಡ ಬಿ. ತಿಮ್ಮಯ್ಯ ದಂಪತಿ, ಪೌರ ಕಾರ್ಮಿಕ ಸುಂದರ ದಂಪತಿಗೆ ಸನ್ಮಾನಿಸಿ ಗೌರವಿಸಲಾಯಿತು.ಸಂಜೆ ಟಿ-ಶೆಟ್ಟಿಗೇರಿ ಸಂಭ್ರಮ ಸಾಂಸ್ಕೃತಿಕ ಮಹಿಳಾ ಸಂಘದಿಂದ ಮತ್ತು ಟಿ. ಶೆಟ್ಟಿಗೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ