ಐಟಾದಿಂದ ವಿಶೇಷ ಇಫ್ತಾರ್‌ ಕೂಟ

KannadaprabhaNewsNetwork |  
Published : Mar 21, 2025, 12:30 AM IST
ಪೊಟೋ ಪೈಲ್ : 20ಬಿಕೆಲ್2 | Kannada Prabha

ಸಾರಾಂಶ

ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ (ಐಟಾ) ಶಾಖೆಯಿಂದ ರಮಜಾನ್ ಕುರಿತು ಇಫ್ತಾರ್ ಕಾರ್ಯಕ್ರಮ ಆಯೋಜಿಸಲಾಯಿತು.

ಭಟ್ಕಳ: ಇಲ್ಲಿನ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ (ಐಟಾ) ಶಾಖೆಯಿಂದ ರಮಜಾನ್ ಕುರಿತು ಇಫ್ತಾರ್ ಕಾರ್ಯಕ್ರಮ ಆಯೋಜಿಸಲಾಯಿತು.ಈ ಸಂದರ್ಭದಲ್ಲಿ ಮಾತಾನಾಡಿದ ಭಟ್ಕಳ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ, ಉಪವಾಸವು ಬಡವ-ಶ್ರೀಮಂತ ಎಂಬ ಭೇದವನ್ನು ನಿವಾರಿಸಲು ಸಹಾಯಕವಾಗುತ್ತದೆ. ಶ್ರೀಮಂತರಿಗೂ ಹಸಿವಿನ ಸಂಕಟ ಅರಿವಾಗಲು ಈ ತಿಂಗಳು ಒಂದು ಉಪಯುಕ್ತ ಅವಕಾಶ. ಭಟ್ಕಳದಲ್ಲಿ ಅಂಗಡಿ ಮಾಲಕರು ಮತ್ತು ನೌಕರರು ಸಹಭಾಗಿಯಾಗಿ ಉಪವಾಸ ವೃತ ಪಾಲಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಲ್ಲಾಸ್ ನಾಯ್ಕ ಮಾತನಾಡಿ. ರಮಜಾನ್ ತಿಂಗಳು ಶಾಂತಿ, ಪ್ರೀತಿ ಮತ್ತು ಏಕತೆಯ ಸಂದೇಶ ಸಾರುತ್ತದೆ. ಉಪವಾಸ ವೃತದಿಂದ ಮನುಷ್ಯನಲ್ಲಿ ಶಿಸ್ತು ಮತ್ತು ಆತ್ಮ ನಿಯಂತ್ರಣ ಬೆಳೆಯುತ್ತದೆ ಎಂದರು.

ಇಫ್ತಾರ್ ಸಂದೇಶ ನೀಡಿದ ಐಟಾ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ, ಅಂತರಂಗ ಶುದ್ಧಿ ಮತ್ತು ಆತ್ಮ ನಿಯಂತ್ರಣ ಮಾನವನಿಗೆ ಅತ್ಯಗತ್ಯ. ಉಪವಾಸದ ಮೂಲಕ ನಾವು ಇದನ್ನು ಸಾಧಿಸಬಹುದು. ಪವಿತ್ರ ಕುರ್‌ಆನ್ ಅವತೀರ್ಣಗೊಂಡ ತಿಂಗಳು ರಮಜಾನ್ ಆಗಿದ್ದು, ಇದು ಅತ್ಯಂತ ಸರಳ ಭಾಷೆಯಲ್ಲಿದೆ. ಇದನ್ನು ಸಾಮಾನ್ಯ ವ್ಯಕ್ತಿಯೂ ಅರ್ಥೈಸಿಕೊಳ್ಳಬಹುದಾಗಿದೆ. ಇದು ಕೇವಲ ಮುಸ್ಲಿಮರ ಗ್ರಂಥವಲ್ಲ ಎಂದು ಹೇಳಿದರು.

ಜಮಾತೆ ಇಸ್ಲಾಮಿ ಹಿಂದ್ ನ ಅಧ್ಯಕ್ಷ ಮೌಲಾನ ಎಸ್.ಎಂ. ಸೈಯದ್ ಝುಬೇರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಐಟಾದ ತಾಲೂಕು ಅಧ್ಯಕ್ಷ ಸಾದಿಕ್ ಅಹಮದ್, ಉಪಾಧ್ಯಕ್ಷ ಮುತಾಹಿರ್ ಶೇಖ್, ಕಾರ್ಯದರ್ಶಿ ಮುಷ್ತಾಖ್ ಅಹಮದ್ ಸೈಯದ್, ಮಹಿಳಾ ವಿಭಾಗದ ಸಂಚಾಲಕಿ ಸಿ.ಆರ್.ಪಿ. ಮುನಿರಾ ಖಾನಂ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ ಅವರಿಗೆ ಶಾಲು ಹೊದಿಸಿ ಗೌರವಿಸಿದರು.

ಸಭೆಯಲ್ಲಿ ಸದ್ಭಾವನಾ ಮಂಚ್ ಅಧ್ಯಕ್ಷ ಸತೀಶಕುಮಾರ್ ನಾಯ್ಕ, ಅಂಜುಮನ್ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಆರ್.ಎಸ್. ನಾಯಕ, ಹಿರಿಯ ಮುಖಂಡ ರಾಮಾ ಮೊಗೇರ್ ಉಪಸ್ಥಿತರಿದ್ದರು. ಜಮಾತೆ ಇಸ್ಲಾಮಿ ಹಿಂದ್ ಕಾರ್ಯದರ್ಶಿ ರವೂಫ್ ಸವಣೂರು ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಅಲಿ ಮನಿಗಾರ್ ವಂದಿಸಿದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ