ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿ ಖಾಲಿ ಖಾಲಿ

KannadaprabhaNewsNetwork |  
Published : Feb 19, 2025, 12:46 AM IST
ಹೂವಿನಹಡಗಲಿಯ ಸಿಂಗಟಾಲೂರು ಏತ ನೀರಾವರಿ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ. | Kannada Prabha

ಸಾರಾಂಶ

ಸಿಂಗಟಾಲೂರು ಏತ ನೀರಾವರಿ ಯೋಜನೆಯ ವಿವಿಧ ಉದ್ದೇಶಕ್ಕಾಗಿ, ಭೂಮಿ ಆಸ್ತಿಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ವಿತರಿಸಲು 2003ರಲ್ಲಿ ಮಂಜೂರಾದ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿ ಸಿಬ್ಬಂದಿ ಇಲ್ಲದೇ ಸಂಪೂರ್ಣ ಖಾಲಿ ಖಾಲಿಯಾಗಿದೆ.

ಸಿಬ್ಬಂದಿಗೆ ಒತ್ತಡದ ಕಾರ್ಯಭಾರ । ಬರೀ ಪ್ರಭಾರ । 15 ಹುದ್ದೆಗಳು ಖಾಲಿ

ಚಂದ್ರು ಕೊಂಚಿಗೇರಿ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಸಿಂಗಟಾಲೂರು ಏತ ನೀರಾವರಿ ಯೋಜನೆಯ ವಿವಿಧ ಉದ್ದೇಶಕ್ಕಾಗಿ, ಭೂಮಿ ಆಸ್ತಿಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ವಿತರಿಸಲು 2003ರಲ್ಲಿ ಮಂಜೂರಾದ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿ ಸಿಬ್ಬಂದಿ ಇಲ್ಲದೇ ಸಂಪೂರ್ಣ ಖಾಲಿ ಖಾಲಿಯಾಗಿದೆ.

ಈ ಕಚೇರಿಗೆ ಆರಂಭದಿಂದಲೂ ಸಿಬ್ಬಂದಿ ಕೊರತೆ ನಡುವೆ ಇಲ್ಲಿನ ಸಿಬ್ಬಂದಿ ಕಾರ್ಯಭಾರ ಒತ್ತಡದಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ 22 ವರ್ಷಗಳಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿ 2ರಿಂದ 3 ಅಧಿಕಾರಿಗಳು ಮಾತ್ರ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಯಾಗಿದ್ದಾರೆ.

ಇಲ್ಲಿನ ಕಚೇರಿಗೆ ಸರ್ಕಾರದಿಂದ ವಿಶೇಷ ಭೂ ಸ್ವಾಧೀನಾಧಿಕಾರಿ-1, ಶಿರಸ್ತೇದಾರರು-1, ಪ್ರಥಮ ದರ್ಜೆ ಸಹಾಯಕರು-2, ದ್ವಿತೀಯ ದರ್ಜೆ ಸಹಾಯಕರು-3, ಭೂ ಮಾಪಕರು-5, ಬೆರಳಚ್ಚುಗಾರರು-1, ಕಂಪ್ಯೂಟರ್‌ ಆಪರೇಟರ್‌-1, ವಾಹನ ಚಾಲಕರು-1, ಡಿ.ದರ್ಜೆ ನೌಕರರು-3 ಸೇರಿದಂತೆ ಒಟ್ಟು ಸರ್ಕಾರದಿಂದ 18 ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ ಒಬ್ಬರು ಪ್ರಥಮ ದರ್ಜೆ ಸಹಾಯಕರು, ಇಬ್ಬರು ದ್ವಿತೀಯ ದರ್ಜೆ ಸಹಾಯಕರು ಬಿಟ್ಟರೆ ಉಳಿದೆಲ್ಲ 15 ಹುದ್ದೆಗಳು ಖಾಲಿ ಇವೆ.

ಭೂ ಸ್ವಾಧೀನಾಧಿಕಾರಿ ಕಚೇರಿಗೆ ಕೆಲವು ದಿನ ಗದಗ, ಹೊಸಪೇಟೆ ಉಪ ವಿಭಾಗಾಧಿಕಾರಿಗಳಿಗೆ ಪ್ರಭಾರ ವಹಿಸಲಾಗಿತ್ತು. ಈಗ ಪಕ್ಕದ ಹರಪನಹಳ್ಳಿ ಉಪ ವಿಭಾಗಾಧಿಕಾರಿಗೆ ಹೆಚ್ಚುವರಿ ಪ್ರಭಾರ ವಹಿಸಲಾಗಿದೆ.

ಇಲ್ಲಿನ ಕಚೇರಿಯಲ್ಲಿ ಕರ್ತವ್ಯ ಮಾಡುವವರು ಇಲ್ಲದ ಕಾರಣ ರೈತ ಸಂತ್ರಸ್ತರಿಗೆ ಸಕಾಲದಲ್ಲಿ ಪರಿಹಾರ ಸಿಗುತ್ತಿಲ್ಲ. ವಾರದಲ್ಲಿ 2 ದಿನ ಮಾತ್ರ ಉಪ ವಿಭಾಗಾಧಿಕಾರಿ ಬರುತ್ತಾರೆ, ಉಳಿದಂತೆ ಎಲ್ಲ ಕೆಲಸವನ್ನು ಕೇವಲ 3 ಸಿಬ್ಬಂದಿಗಳೇ ಮಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.

983 ಎಕರೆ ಪರಿಹಾರ ಬಾಕಿ:

ಸಿಂಗಟಾಲೂರು ಏತ ನೀರಾವರಿಯ ವಿವಿಧ ಉದ್ದೇಶಗಳಿಗೆ ಬಲದಂಡೆ ಭಾಗದ 756.48 ಎಕರೆ, ಎಡದಂಡೆ ಭಾಗದ 227.04 ಎಕರೆ ಸೇರಿದಂತೆ ಒಟ್ಟು 983 ಎಕರೆ ಭೂಮಿಯನ್ನು ರೈತರಿಂದ ಭೂಸ್ವಾಧೀನ ಮಾಡಿಕೊಂಡಿದ್ದಾರೆ. ಬಲದಂಡೆ ಭಾಗಕ್ಕೆ 19,23,59,010 ರುಗಳು, ಎಡದಂಡೆ ಭಾಗಕ್ಕೆ ₹23,22,79,257 ಸೇರಿ ಒಟ್ಟು ₹42,46,38,267 ಪರಿಹಾರ ನೀಡಬೇಕಿದೆ. ಈ ಭೂ ಪರಿಹಾರಕ್ಕಾಗಿ ಸಂತ್ರಸ್ತರು ಕಚೇರಿಗೆ ಅಲೆದು ಸುಸ್ತಾಗಿದ್ದಾರೆ. ಕಚೇರಿಗೆ ಸಾಕಷ್ಟು ಬಾರಿ ಬೀಗ ಜಡಿದು ಪ್ರತಿಭಟನೆ ಮಾಡಿದ್ದಾರೆ. ಇನ್ನು ಕೆಲವು ಸಂತ್ರಸ್ತರು ವಿಷದ ಬಾಟಲಿ ಕೈಯಲ್ಲಿ ಹಿಡಿದು, ನೀವು ನಮ್ಮ ಭೂಮಿಯ ಪರಿಹಾರ ಕೊಡದಿದ್ದರೆ ನಿಮ್ಮ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಧರಣಿ ಸತ್ಯಾಗ್ರಹ ಮಾಡಿದ್ದರು. ಇಷ್ಟಾದರೂ ಸರ್ಕಾರ ಹಾಗೂ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ ಎಂದು ಸಂತ್ರಸ್ತರು ತಮ್ಮ ನೋವು ತೋಡಿಕೊಳ್ಳುತ್ತಿದ್ದಾರೆ. ಕಚೇರಿಯಲ್ಲಿ 10ರಿಂದ 15 ವರ್ಷ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆ ಸೇರಿದಂತೆ ಬಹುತೇಕ ಹುದ್ದೆಗಳು ಖಾಲಿ ಇವೆ. ಸಿಕ್ಕಾಪಟ್ಟೆ ಒತ್ತಡದ ನಡುವೆ ಕೆಲಸ ಮಾಡುತ್ತಿದ್ದೇವೆ. ಪರಿಹಾರಕ್ಕಾಗಿ ಬರುವ ಸಂತ್ರಸ್ತರಿಗೆ ಉತ್ತರ ಹೇಳಲು ಆಗುತ್ತಿಲ್ಲ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಅಧಿಕಾರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ಮರಿ ದತ್ತು ಪಡೆದು ಮಾನವೀಯತೆ ತೋರಿ
5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಕಡ್ಡಾಯ